ವಿಶ್ವದ ಶ್ರೀಮಂತ ದೇವಸ್ಥಾನ TDPಗೆ ಆಂಧ್ರ ಸಿಎಂ ಜಗನ್ ಚಿಕ್ಕಪ್ಪ ಸುಬ್ಬಾರೆಡ್ಡಿ ಅಧ್ಯಕ್ಷ!
ಅಮರಾವತಿ:ತಿರುಮಲ ತಿರುಪತಿ ದೇವಸ್ಥಾನಂ(ಟಿಡಿಪಿ) ಮಂಡಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶುಕ್ರವಾರ ತಮ್ಮ ಚಿಕ್ಕಪ್ಪ, ವೈಎಸ್ ಆರ್ ಸಿಪಿಯ ಮುಖಂಡ ವೈವಿ ಸುಬ್ಬಾ ರೆಡ್ಡಿ ಅವರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಗೆ ವೈವಿ ಸುಬ್ಬಾ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಮನ್ ಮೋಹನ್ ಸಿಂಗ್ ಆದೇಶವನ್ನು ಹೊರಡಿಸಿದ್ದಾರೆ.
ಜಗನ್ ಚಿಕ್ಕಪ್ಪ ವೈವಿ ಸುಬ್ಬಾ ರೆಡ್ಡಿ ವೈಎಸ್ ಆರ್ ಸಿಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶುಕ್ರವಾರ ಟಿಟಿಪಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿ ವಿವರಿಸಿದೆ. ಟಿಟಿಪಿ ಮಂಡಳಿಯ ಇನ್ನುಳಿದ ಸದಸ್ಯರನ್ನು ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಂ ಒಂದು ಸ್ವತಂತ್ರ ಮಂಡಳಿಯಾಗಿದ್ದು, ಇದು ತಿರುಮಲದ ತಿರುಮಲ ವೆಂಕಟೇಶ್ವರಸ್ವಾಮಿ ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಆಂಧ್ರಪ್ರದೇಶದಲ್ಲಿ ಟಿಡಿಪಿ ಅಧ್ಯಕ್ಷಗಾದಿ ತುಂಬಾ ಪ್ರಭಾವಿಯಾಗಿದೆ. ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸುವ ಕ್ಯಾಬಿನೆಟ್ ಸಚಿವರಾಗಲಿ, ಗಣ್ಯಾತೀಗಣ್ಯರು ಮೊದಲು ಟಿಡಿಪಿ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ದೇವರ ದರ್ಶನ ಪಡೆಯುವುದು ವಾಡಿಕೆಯಾಗಿದೆ.