Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಒಂದು ರಾಷ್ಟ್ರ, ಒಂದು ಚುನಾವಣೆ’ ಇಂದಿನ ಅಗತ್ಯ: ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆ ಈ ಸಮಯಕ್ಕೆ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಂಸತ್ತಿನ ಪ್ರತಿಯೊಬ್ಬ ಸದಸ್ಯರೂ ಅದಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಮೋದಿ-2 ಸರ್ಕಾರದ ಮೊದಲ ಅಧಿವೇಶನದ ಜಂಟಿ ಸದನವನ್ನು ಉದ್ದೇಶಿಸಿ ಇಂದು ಭಾಷಣ ಮಾಡಿದ ರಾಷ್ಟ್ರಪತಿಗಳು, ಬಲಿಷ್ಠ, ಸುಭದ್ರ ಮತ್ತು ಎಲ್ಲರನ್ನೂ ಒಳಗೊಂಡ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

2014ರಲ್ಲಿ ಆರಂಭವಾದ ದೇಶದ ಅಭಿವೃದ್ಧಿಯ ಪಯಣವನ್ನು ಮುಂದುವರಿಸಿಕೊಂಡು ಹೋಗಲು ಭಾರತ ದೇಶದ ಜನರು ಸ್ಪಷ್ಟ ತೀರ್ಪು ಕೊಟ್ಟಿದ್ದಾರೆ ಎಂದು  ಹೇಳಿದರು.

ಈ ಬಾರಿಯ ಸಾರ್ವತ್ರಿಕ ಚುನಾವಣೆ ಸುಗಮವಾಗಿ ಸಾಗಲು ಕೆಲಸ ಮಾಡಿದ ಚುನಾವಣಾ ಆಯೋಗ ಮತ್ತು ಅಧಿಕಾರಿ ವರ್ಗ ಹಾಗೂ ಭದ್ರತಾ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿಗಳು, ಲೋಕಸಭೆ ಚುನಾವಣೆಯಲ್ಲಿ 61 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಿ ದಾಖಲೆ ಸೃಷ್ಟಿಸಿದ್ದಾರೆ. ಈ ಬಾರಿ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಖುಷಿಯ ವಿಚಾರ ಎಂದರು.

ಲೋಕಸಭೆಗೆ ಈ ಬಾರಿ 78 ಮಹಿಳಾ ಸಂಸದರು ಆಯ್ಕೆಯಾಗಿರುವುದನ್ನು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಇದು ಇದುವರೆಗಿನ ಭಾರತದ ಪ್ರಜಾಪ್ರಭುತ್ವ ಚುನಾವಣೆಯಲ್ಲಿ ಮಹಿಳಾ ಸಂಸದರ ಸಂಖ್ಯೆ ಅಧಿಕವಾಗಿದ್ದು ಅವರಲ್ಲಿ ಅರ್ಧಕ್ಕೂ ಹೆಚ್ಚು ಸಂಸದೆಯರು ಮೊದಲ ಬಾರಿ ಚುನಾಯಿತರಾದವರು ಎಂಬುದು ವಿಶೇಷ.

ರಾಷ್ಟ್ರಪತಿಗಳ ಭಾಷಣದ ಸಾರಾಂಶಗಳು ಇಂತಿದೆ: 

 • ಭಯೋತ್ಪಾದನೆಯ ವಿರುದ್ಧ ಸೆಣಸಲು ಭಾರತಕ್ಕೆ ಇಡೀ ವಿಶ್ವದ ಸಹಕಾರವಿದೆ. ಭಾರತದಲ್ಲಿ ನಡೆದಿರುವ ಪ್ರಮುಖ ಭಯೋತ್ಪಾದನಾ ದಾಳಿಗಳಿಗೆ ಮಸೂದ್ ಅಜರ್ ಜವಾಬ್ದಾರಿ.  ವಿಶ್ವಸಂಸ್ಥೆಯು ಆತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಿದೆ.  ಉಗ್ರವಾದ ಮೆಟ್ಟಿಹಾಕುವ ದೇಶದ ಪ್ರಯತ್ನಕ್ಕೆ ಬೆಂಬಲವಿದೆ ಎಂಬುದಕ್ಕೆ ಇದೊಂದು ಉದಾಹರಣೆ.

 • ಹವಾಮಾನ ಬದಲಾವಣೆ, ಆರ್ಥಿಕ ಅಥವಾ ಸೈಬರ್ ಅಪರಾಧ, ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಕ್ರಮ ಹೀಗೆ ಯಾವುದೇ ವಿಷಯವಾಗಲಿ, ಭಾರತಕ್ಕೆ ಎಲ್ಲ ರಾಷ್ಟ್ರಗಳ ಬೆಂಬಲ ದೊರಕಿದೆ

 • 2016ರ ಸರ್ಜಿಕಲ್ ಸ್ಟ್ರೈಕ್ ಮತ್ತು ಕಳೆದ ಫೆಬ್ರವರಿಯಲ್ಲಿ ಭಾರತೀಯ ಸೇನೆಯ ಬಾಲಾಕೋಟ್ ವಾಯುದಾಳಿ. ಭಾರತದ ಗಡಿಯೊಳಗೆ ಅಕ್ರಮ ಒಳನುಸುಳುವಿಕೆ ಬಗ್ಗೆ ಆತಂಕ, ರಾಷ್ಟ್ರೀಯ ನಾಗರಿಕರ ದಾಖಲಾತಿ ನಿಯಮಕ್ಕೆ ಬೆಂಬಲ

 • ಸೇನಾಪಡೆಗಳ ಆಧುನೀಕರಣದ ದಿಸೆಯಲ್ಲಿ ಭಾರತೀಯ ಸೇನೆಗೆ ಸದ್ಯದಲ್ಲಿಯೇ ರಾಫೆಲ್ ಯುದ್ಧ ವಿಮಾನ ಮತ್ತು ಅಪಚೆ ಹೆಲಿಕಾಪ್ಟರ್ ಸೇರ್ಪಡೆಯಾಗಲಿದೆ

 • ಕೇಂದ್ರ ಸರ್ಕಾರ ದೇಶದ ಬಡವರು ಮತ್ತು ಗ್ರಾಮೀಣ ಜನರ ಉದ್ಧಾರಕ್ಕಾಗಿ ಕೂಡ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ನಗರ ಮತ್ತು ಗ್ರಾಮೀಣ ಭಾರತ ಜೊತೆಜೊತೆಗೆ ಉದ್ಧಾರವಾಗುವತ್ತ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದು ಸಂತಸ ಎಂದ ರಾಷ್ಟ್ರಪತಿಗಳು.

 • ತ್ರಿವಳಿ ತಲಾಖ್, ನಿಖಾ ಹಲಾಲ್ ನಂತಹ ಅನಿಷ್ಠ ಸಾಮಾಜಿಕ ಪದ್ಧತಿಗಳನ್ನು ತೆಗೆದುಹಾಕುವುದು ಮಹಿಳಾ ಸಶಕ್ತೀಕರಣಕ್ಕೆ ಮುಖ್ಯವಾಗಿದ್ದು ಸರ್ಕಾರದ ಈ ನಿರ್ಧಾರಕ್ಕೆ ದೇಶದ ನಾಗರಿಕರು ಬೆಂಬಲ ಸೂಚಿಸುತ್ತಾರೆ ಎಂದು ನಾನು ಭಾವಿಸುತ್ತೇನೆ

 • ಶಿಕ್ಷಣ ಕ್ಷೇತ್ರದಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದ ರಾಷ್ಟ್ರಪತಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2024ರ ವೇಳೆಗೆ ಶೇಕಡಾ 50ರಷ್ಟು ಪ್ರವೇಶ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕೆಲಸ ಮಾಡುತ್ತಿದ್ದು ಇನ್ನೂ 2 ಕೋಟಿಯಷ್ಟು ಹೆಚ್ಚು ಸೀಟುಗಳನ್ನು ಸೃಷ್ಟಿಮಾಡಲಿದೆ. ಮಕ್ಕಳಲ್ಲಿ ಕುತೂಹಲ ತಣಿಸಲು ಹಾಗೂ ಅವರಲ್ಲಿ ಆವಿಷ್ಕಾರದ ಪ್ರವೃತ್ತಿ ಬೆಳೆಸುವ ಉದ್ದೇಶದಿಂದ  9 ಸಾವಿರ ಶಾಲೆಗಳಲ್ಲಿ  ಅಟಲ್ ಟಿಂಕರಿಂಗ್ ಲ್ಯಾಬ್  ನಿರ್ಮಾಣ ಮಾಡಲಿದೆ.

 •  ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಿಂದ 26 ಲಕ್ಷ ಬಡ ರೋಗಿಗಳಿಗೆ ವರದಾನವಾಗಿದ್ದು 2022ರ ವೇಳೆಗೆ ಹಲವು ಕ್ಷೇಮ ಕೇಂದ್ರಗಳು ಅಸ್ಥಿತ್ವಕ್ಕೆ ಬರಲಿವೆ. ಬಡವರನ್ನು ಸಶಕ್ತೀಕರಣಗೊಳಿಸುವ ಮೂಲಕ ಮಾತ್ರ ಬಡತನವನ್ನು ಕಿತ್ತೊಗೆಯಬಹುದಾಗಿದ್ದು ನಿವಾಸಿಗಳಿಗೆ ಆರೋಗ್ಯ ಸೇವೆಯನ್ನು ತಮ್ಮ ಸರ್ಕಾರ ಒದಗಿಸುತ್ತಿದೆ.

 • ಗ್ರಾಮೀಣ ಜನರ ಆರೋಗ್ಯ ಸುಧಾರಣೆಗಾಗಿ ಕೇಂದ್ರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಂದೂವರೆ ಲಕ್ಷ ಆರೋಗ್ಯ, ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪನೆ ಮಾಡಲಿದೆ.

 • ಆಯುಷ್ಮಾನ್ ಭಾರತ್ ಯೋಜನೆಯಡಿ, ಇಲ್ಲಿಯವರೆಗೆ, 26 ಲಕ್ಷ ಬಡ ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.  ಕೈಗೆಟುಕುವ ದರದಲ್ಲಿ ಔಷಧಿ, ಮಾತ್ರೆ ಒದಗಿಸಲು ಸಲುವಾಗಿ, 5,300 ‘ಜನೌಷಧಿ ಕೇಂದ್ರಗಳನ್ನು ಸಹ ತೆರೆಯಲಾಗಿದೆ. ಜನೌಷಧಿ ಕೇಂದ್ರಗಳ ಮೂಲಕ ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ಔಷಧಿ ಒದಗಿಸುವುದು ಸರ್ಕಾರದ ಪ್ರಯತ್ನವಾಗಿದೆ.

 • ಪ್ರಸ್ತುತ  ದೇಶಾದ್ಯಂತ  ಸುಮಾರು 18,000 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಕೆಲಸ ಮಾಡುತ್ತಿವೆ.

 • ನೀರಿನ ಸಂರಕ್ಷಣೆಗೆ ಜಲಶಕ್ತಿ ಸಚಿವಾಲಯ ನಿರ್ಮಾಣ ಭವಿಷ್ಯಕ್ಕೆ ಮುಖ್ಯವಾಗಿದೆ. ಹೊಸ ಕೈಗಾರಿಕಾ ನೀತಿ ಸದ್ಯದಲ್ಲಿಯೇ ಘೋಷಣೆಯಾಗಲಿದ್ದು ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ಇನ್ನಷ್ಟು ಸರಳೀಕರಿಸಲು ಕ್ರಮಗಳು ಮುಂದುವರಿದಿದೆ.

 •  2024ರ ವೇಳೆ ಭಾರತದ ಆರ್ಥಿಕತೆ  5 ಟ್ರಿಲಿಯನ್ ಡಾಲರ್ ಗಳಾಗಿಸಬೇಕು ಎಂಬ ಗುರಿ ಹೊಂದಿದ್ದು, ತೆರಿಗೆಗಳನ್ನು ಮತ್ತಷ್ಟು ಸರಳಗೊಳಿಸುವ ಪ್ರಯತ್ನಗಳಿಗೆ ಒತ್ತುನೀಡಲಾಗಿದೆ. ಈ ನಿಟ್ಟಿನಲ್ಲಿ  5 ಲಕ್ಷದ ವರೆಗೆ  ಆದಾಯವನ್ನು ತೆರಿಗೆ ಮುಕ್ತಗೊಳಿಸಿರುವುದು ಮಹತ್ವದ ಕ್ರಮ

 • ನೇರ ನಗದು ವರ್ಗಾವಣೆ ಯೋಜನೆಯಡಿ 7.3 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದ 5 ವರ್ಷಗಳಲ್ಲಿ ಜನರ ಖಾತೆಗಳಿಗೆ ವರ್ಗಾಯಿಸಿರುವುದರಿಂದ 1.41 ಲಕ್ಷ ಕೋಟಿ ರೂಪಾಯಿ ಉಳಿತಾಯವಾಗಿದೆ. 8 ಕೋಟಿ ನಕಲಿ ಫಲಾನುಭವಿಗಳನ್ನು ಕಿತ್ತು ಹಾಕಲಾಗಿದೆ.

 • ದೇಶದಲ್ಲಿ ನವೋದ್ಯಮ ಪರಿಸರವನ್ನು ಮತ್ತಷ್ಟು ಬಲಪಡಿಸಲು ಸೂಕ್ತ ನಿಯಮಾವಳಿಗಳನ್ನು ತಮ್ಮ ಸರ್ಕಾರ ರೂಪಿಸಲಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ  19 ಕೋಟಿ ಸ್ವಯಂ ಉದ್ಯೋಗಿಗಳಿಗೆ ಸಾಲ ಕಲ್ಪಿಸಲಾಗಿದೆ

 • “ಕನಿಷ್ಟ ಸರ್ಕಾರ  ಗರಿಷ್ಠ  ಆಡಳಿತ”  ಮಾದರಿ ಅನುಸರಿಸುವ ಮೂಲಕ  ಭ್ರಷ್ಟಾಚಾರ   ನಿಗ್ರಹ ಕ್ರಮಗಳನ್ನು ಸರ್ಕಾರ ಬಲಗೊಳಿಸಿದೆ. ತಲೆಮರೆಸಿಕೊಂಡಿರುವ ಆರ್ಧಿಕ  ಅಪರಾಧಿಗಳ ಕಾಯ್ದೆಯನ್ನು ಉಲ್ಲೇಖಿಸಿದ ರಾಷ್ಟ್ರಪತಿ,  ಬ್ಯಾಂಕುಗಳಿಗೆ ಸಾಲ ಮರುಪಾವತಿಸದೆ ದೇಶ ಬಿಟ್ಟು ಪರಾರಿಯಾಗಿರುವ ವಂಚಕರ   ಹಸ್ತಾಂತರಕ್ಕೆ ಹಲವು ದೇಶಗಳೊಂದಿಗೆ  ಸರ್ಕಾರ ಕಾರ್ಯಪ್ರವೃತ್ತವಾಗಿದೆ.

 •  ಕಪ್ಪು ಹಣದ ವಿರುದ್ದ  ತನ್ನ ಸಮರವನ್ನು ಮತ್ತಷ್ಟು ತ್ವರಿತ ಗತಿಯಲ್ಲಿ ಕೈಗೊಳ್ಳಲಾಗುವುದು.  ಕಳೆದ ಎರಡು ವರ್ಷಗಳಲ್ಲಿ 4.25 ಲಕ್ಷ ನಿರ್ದೇಶಕಗಳರನ್ನು ಅನರ್ಹಗೊಳಿಸಲಾಗಿದ್ದು,  3.5 ಲಕ್ಷ  ವಂಚಕ ಕಂಪನಿಗಳ ವಿರುದ್ದ ಕ್ರಮ ಜರುಗಿಸಲಾಗಿದೆ

 • ವ್ಯಾಪಾರ  ವಹಿವಾಟು  ನಡೆಸುವುದನ್ನು  ಸುಲಭಗೊಳಿಸಿರುವ ದೇಶಗಳ ಪಟ್ಟಿಯಲ್ಲಿ ಭಾರತದ ಶ್ರೇಣಿ  ಕಳೆದ 5 ವರ್ಷಗಳಲ್ಲಿ ಹೆಚ್ಚಳಗೊಂಡಿದ್ದು. 2014ರಲ್ಲಿ  142 ನೇ ಸ್ಥಾನದಲ್ಲಿದ್ದ  ಭಾರತದ ಶ್ರೇಣಿ  77 ಸ್ಥಾನಕ್ಕೆ ಏರಿಕೆಯಾಗಿದೆ. ಭಾರತ  ವಿಶ್ವದ 50 ದೇಶಗಳ ಪಟ್ಟಿಗೆ ಸೇರಬೇಕು ಎಂಬುದು  ಸರ್ಕಾರದ  ಗುರಿಯಾಗಿದೆ

 • ಭಾರತ್ ಮಾಲಾ ಯೋಜನೆಯಡಿ,  2022ರ ವೇಳೆಗೆ  35 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಿದೆ ಇಲ್ಲವೆ ಉನ್ನತೀಕರಿಸಲಿದೆ.  ಸಾಗರಮಾಲಾ ಯೋಜನೆಯಡಿ ದೇಶದ ಕರಾವಳಿ ಪ್ರದೇಶ ಹಾಗೂ ಬಂದರುಗಳಿಗೆ  ಉತ್ತಮ ರಸ್ತೆ ಜಾಲ ಕಲ್ಪಿಸಲಾಗುತ್ತಿದೆ.

 • ನವೀಕರಣ  ಇಂಧನ  ಕುರಿತು ಮಾತನಾಡಿದ  ರಾಷ್ಟ್ರಪತಿ,   ನಗರಗಳಲ್ಲಿ ಎಲೆಕ್ಟ್ರಿಕ್ ಚಾರ್ಚ್ಂಗ್  ಸ್ಟೇಷನ್ ಗಳನ್ನು  ಸ್ಥಾಪಿಸಲಾಗಿವುದು. ಕುಂಭ ಮೇಳದ ವೇಳೆ  ಗಂಗಾನದಿಯಲ್ಲಿ ಕೈಗೊಳ್ಳಲಾಗಿದ್ದ ಸ್ವಚ್ಚತಾ ಕಾರ್ಯಕ್ರಮ  ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿದೆ.  ಗಂಗಾ ಸ್ವಚ್ಚತೆಯ  “ನಮಾಮಿ ಗಂಗಾ” ಯೋಜನೆಯನ್ನು ಮತ್ತಷ್ಟು ಬಲಪಡಿಸಲಾಗುವುದು.  ಕಾವೇರಿ, ಪರಿಯಾರ್, ನರ್ಮದಾ, ಯಮುನಾ, ಮಹಾನದಿ ಹಾಗೂ ಗೋದಾವರಿ ನದಿಗಳನ್ನೂ ಮಾಲಿನ್ಯ ಮುಕ್ತಗೊಳಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

No Comments

Leave A Comment