Log In
BREAKING NEWS >
ಉಡುಪಿ:ದ್ವಿತೀಯ ಪಿಯುಸಿ ಫಲಿತಾಂಶ ವಿದ್ಯೋದಯ ಪಪೂ ಕಾಲೇಜಿನ ಅಭಿಜ್ಞಾ ವಿಜ್ಞಾನದಲ್ಲಿ ಪ್ರಥಮ/PU Results: Udupi Girl Abhijna Rao Is State Science Topper.....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಮನ್ಸೂರ್‌ ಖಾನ್‌ನ ಕಚೇರಿ ಹಾಗೂ ಆತನ ವಿಚ್ಛೇಧಿತ ಪತ್ನಿ ಮನೆ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ-3ನೇ ಮಡದಿ ಮನೆಯಲ್ಲಿ ಚಿನ್ನ ಪತ್ತೆ

ಬೆಂಗಳೂರು: ಸಾವಿರಾರು ಮಂದಿಯಿಂದ ಅಧಿಕ ಬಡ್ಡಿ ಆಮಿಷವೊಡ್ಡಿ ಎರಡು ಸಾವಿರ ಕೋಟಿ ರೂ.ಗಿಂತ ಅಧಿಕ ಹಣ ಸಂಗ್ರಹಿಸಿ, ಇದೀಗ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಐಎಂಎ ಕಂಪನಿ ಮುಖ್ಯಸ್ಥ ಮೊಹಮ್ಮದ್‌ ಮನ್ಸೂರ್‌ ಖಾನ್‌ನ ಕಚೇರಿ ಹಾಗೂ ಆತನ ವಿಚ್ಛೇಧಿತ ಪತ್ನಿ ಮನೆ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ 33 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ಜಯನಗರದಲ್ಲಿರುವ ಐಎಂಎ ಜ್ಯುವೆಲ್ಲರ್ಸ್‌ನ ಕಚೇರಿ ಹಾಗೂ ಶಿವಾಜಿನಗರದಲ್ಲಿರುವ ಆತನ ಮೂರನೇ ಪತ್ನಿಯ ಮನೆ ಮೇಲೆ ದಾಳಿ ನಡೆಸಿ, 33 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ಕಂಪನಿಯ ಜ್ಯುವೆಲ್ಲರ್ಸ್‌ನ ಕಚೇರಿ ಮೇಲೆ ದಾಳಿ ನಡೆಸಿ, 13 ಕೋಟಿ ರೂ. ಮೌಲ್ಯದ 43 ಕೆ.ಜಿ. ಚಿನ್ನಾಭರಣ, 17.6 ಕೋಟಿ ರೂ. ಮೌಲ್ಯದ 5864 ಕ್ಯಾರೆಟ್‌ ಡೈಮಂಡ್‌, 1.5 ಕೋಟಿ ರೂ. ಮೌಲ್ಯದ 520 ಕೆ.ಜಿ.ಬೆಳ್ಳಿ, 1.5 ಕೋಟಿ ರೂ. ಮೌಲ್ಯದ ಸೈಲ್ಟರ್‌ ಡೈಮಂಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಹಾಗೆಯೇ ಶಿವಾಜಿನಗರದಲ್ಲಿರುವ ಮನ್ಸೂರ್‌ ಖಾನ್‌ನ ಮೂರನೇ ವಿಚ್ಛೇಧಿತ ಪತ್ನಿ ತಬಸ್ಸಮ್‌ ಭಾನು ಅವರ ಶಿವಾಜಿನಗರದ ಗುಲನ್‌ ಅಪಾರ್ಟ್‌ಮೆಂಟ್‌ನ ಮೇಲೆ ದಾಳಿ ನಡೆಸಿದಾಗ, 39.5 ಲಕ್ಷ ರೂ. ಮೌಲ್ಯದ 1,503.7 ಗ್ರಾಂ ಚಿನ್ನಾಭರಣ, 1,5 ಕೆ.ಜಿ.ಬೆಳ್ಳಿ, 2.69 ಲಕ್ಷ ರೂ. ನಗದು ಹಾಗೂ ತಿಲಕನಗರದ ಎಸ್‌ಆರ್‌ಕೆ ಗಾರ್ಡ್‌ನ್‌ನಲ್ಲಿ ಹೊಂದಿರುವ 1.20 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್‌ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.

26 ಸ್ಥಿರಾಸ್ತಿ ಪತ್ತೆ: ಮತ್ತೂಂದೆಡೆ ಇದುವರೆಗೂ ಎಸ್‌ಐಟಿ ತನಿಖೆಯಲ್ಲಿ ಮನ್ಸೂರ್‌ ಖಾನ್‌ಗೆ ಸೇರಿದ ವಾಣಿಜ್ಯ ಕಟ್ಟಡಗಳು, ಜಮೀನುಗಳು, ಸ್ಕೂಲ್‌ ಪ್ರಾಪರ್ಟಿ, ಅಪಾರ್ಟ್‌ಮೆಂಟ್‌ ಹಾಗೂ ಇತರೆ 26 ಸ್ಥಿರಾಸ್ತಿಗಳನ್ನು ಗುರುತಿಸಲಾಗಿದೆ. ಆರೋಪಿ ನಗರದ ಇತರೆಡಯೂ ಆಸ್ತಿ ಸಂಪಾದಿಸಿದ್ದು, ಅವುಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದರು.

ರೆಡ್‌ಕಾರ್ನರ್‌ ನೋಟಿಸ್‌ ಜಾರಿ: ಮನ್ಸೂರ್‌ ಖಾನ್‌ ಪತ್ತೆಗೆ ರೆಡ್‌ಕಾರ್ನರ್‌ ನೋಟಿಸ್‌ ಜಾರಿ ಮಾಡುವ ಕುರಿತು ಎಸ್‌ಐಟಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರಬರೆಯಲಾಗಿದೆ. ಆರೋಪಿ ಮನ್ಸೂರ್‌ ಖಾನ್‌ ಎಲ್ಲಿದ್ದಾನೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಯಿಲ್ಲ. ಈ ಸಂಬಂಧ ರೆಡ್‌ಕಾರ್ನರ್‌ ನೋಟಿಸ್‌ ಜಾರಿ ಮಾಡಲು ಮನವಿ ಮಾಡಲಾಗಿದೆ ಎಂದು ಎಸ್‌ಐಟಿ ಮುಖ್ಯಸ್ಥ ಬಿ.ಆರ್‌.ರವಿಕಾಂತೇಗೌಡ ಹೇಳಿದರು. ಆರೋಪಿಯ ಪತ್ತೆಗೆ ಮೊದಲ ಆದ್ಯತೆ ನೀಡಿದ್ದು, ತನಿಖೆಗೆ ಕಾಲಮಿತಿ ನಿಗದಿ ಪಡಿಸಿಕೊಂಡಿಲ್ಲ. ಆದರೆ, ವೇಗವಾಗಿ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ನೋಂದಣಿ ವಿಭಾಗದ ನಿರ್ಲಕ್ಷ್ಯ: ಮನ್ಸೂರ್‌ ಖಾನ್‌ನ ಐಎಂಎ ಸಮೂಹ ಸಂಸ್ಥೆಯ ಪೂರ್ವಾಪರ ಪರಿಶೀಲನೆ ನಡೆಸದೆ ಪರವಾನಗಿ ನೀಡಿದ ಸಹಕಾರ ಇಲಾಖೆಯ ನೋಂದಣಿ ವಿಭಾಗ ಮತ್ತು ಕಂಪನಿಗಳ ನೋಂದಣಿ ವಿಭಾಗ ನಿರ್ಲಕ್ಷ್ಯ ವಹಿಸಿರುವುದು ಎಸ್‌ಐಟಿ ತನಿಖೆ ವೇಳೆ ತಿಳಿದು ಬಂದಿದೆ. ನಿಯಮದ ಪ್ರಕಾರ ಪರವಾನಗಿ ನೀಡಿದ ಇಲಾಖೆಗೆ ಪ್ರತಿ ವರ್ಷ ನೋಂದಾಯಿತ ಸಂಸ್ಥೆ ತನ್ನ ಆರ್ಥಿಕ ವ್ಯವಹಾರದ ಲೆಕ್ಕಪತ್ರ ಸಲ್ಲಿಸಬೇಕು.

ಆದರೆ, ಐಎಂಎ ಇದುವರೆಗೂ ಲೆಕ್ಕಪತ್ರವೇ ಸಲ್ಲಿಸಿಲ್ಲ. ಆದರೂ ಅದರ ಪರವಾನಗಿ ನವೀಕರಿಸಿರುವುದು ತನಿಖೆಯಿಂದ ಗೊತ್ತಾಗಿದೆ. ನೋಂದಣಿ ಇಲಾಖೆ ಅಧಿಕಾರಿಗಳು ಆರೋಪಿತ ಕಂಪನಿಯ ವಹಿವಾಟಿನ ಮೇಲೆ ನಿಗಾವಹಿಸಿದ್ದರೆ, ಸಾವಿರಾರು ಕೋಟಿ ರೂ. ವಂಚನೆ ತಡೆಯಬಹುದಿತ್ತು. ಆದರೆ, ಸಂಬಂಧಿಸಿದ ಇಲಾಖೆಗಳು ಮಾಡಿಲ್ಲ. ಸಂಸ್ಥೆ ಪರವಾನಗಿ ನವೀಕರಣಕ್ಕೆ ಸಲ್ಲಿಸುವಾಗ ಹೂಡಿಕೆಯಾದ ಹಣ, ಲಾಭಾಂಶ ಹಂಚಿಕೆ, ಅದರ ಮೂಲ ಎಲ್ಲವನ್ನೂ ಬಹಿರಂಗಪಡಿಸಬೇಕು.

ಅದರ ಮೇಲೆ ಸಂಬಂಧಿಸಿದ ತನಿಖಾ ಸಂಸ್ಥೆಗಳು ನಿಗಾವಹಿಸಬೇಕು. ತಮ್ಮಲ್ಲಿರುವ ಗುಪ್ತಚರ ವಿಭಾಗದಿಂದ ಮಾಹಿತಿ ಪಡೆದು, ಲೋಪದೋಷಗಳು ಕಂಡು ಬಂದರೆ, ಸಂಸ್ಥೆಯ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಬೇಕು. ಸಂಬಂಧಿಸಿದ ಇತರೆ ಇಲಾಖೆಗಳಿಗೂ ಮಾಹಿತಿ ನೀಡಿ ಕಾನೂನು ಕ್ರಮಕೈಗೊಳ್ಳಬೇಕು. ಆದರೆ, ಐಎಂಎ ಸಂಸ್ಥೆಯ ವಿರುದ್ಧ ಈ ರೀತಿಯ ಯಾವುದೇ ಕ್ರಮ ಪರಿಣಾಮಕಾರಿಯಾಗಿ ನಡೆದಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಮಾಹಿತಿ ಪಡೆದ ಜಾರಿ ನಿರ್ದೇಶನಾಲಯ: ಒಂದೆಡೆ ವಂಚನೆ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ಚುರುಕುಗೊಳಿಸಿದ್ದರೆ, ಮತ್ತೂಂದೆಡೆ ಜಾರಿ ನಿರ್ದೇಶನಾಲಯ ಆರೋಪಿಯ ಹಣದ ವಹಿವಾಟಿನ ಬಗ್ಗೆ ಕಮರ್ಷಿಯಲ್‌ ಠಾಣೆ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದೆ. ಎರಡು ದಿನಗಳ ಹಿಂದೆ ಜಾರಿ ನಿರ್ದೇಶನಾಲಾಯದ ಸಿಬ್ಬಂದಿಯೊಬ್ಬರು ಠಾಣೆ ಬಂದು, ಆರೋಪಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಫೇಮಾ ಹಾಗೂ ಪಿಎಂಎಲ್‌ಎ ಕಾಯ್ದೆ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಕಂಪನಿಯ ನಿರ್ದೇಶಕರು ಹಾಗೂ ಮನ್ಸೂರ್‌ ಖಾನ್‌ಗೆ ನೋಟಿಸ್‌ ಜಾರಿ ಮಾಡಿದೆ ಎನ್ನಲಾಗಿದೆ. ಲೇವಾದೇವಿ ನಿಯಂತ್ರಣ ಕಾಯ್ದೆ (ಪಿಎಂಎಲ್‌ಎ)ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೇಮಾ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.

ಮನ್ಸೂರ್‌ ಖಾನ್‌ ವಿರುದ್ಧ ಮತ್ತೂಂದು ದೂರು: ಮನ್ಸೂರ್‌ ಖಾನ್‌ 9.84 ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿ ಮಾಡಿ ವಂಚಿಸಿದ್ದಾನೆ ಎಂದು ಆರೋಪಿಸಿ ಚಿನ್ನಾಭರಣ ವ್ಯಾಪಾರಿ ಅಂಕಿತ್‌ ಎಂಬುವರು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಮನ್ಸೂರ್‌ ತಮ್ಮಿಂದ 9 ಕೋಟಿ 84 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿದ್ದರು.

ಈ ಚಿನ್ನ ಖರೀದಿಸಿದ ಮೊತ್ತದ 9 ಕೋಟಿ ರೂ ಮೌಲ್ಯದ ಚೆಕ್‌ ನೀಡಿದ್ದರು. ಆದರೆ, ಇದೀಗ ಆ ಚೆಕ್‌ ಬೌನ್ಸ್‌ ಆಗಿದೆ ಎಂದು ಅಂಕಿತ್‌ ದೂರಿನಲ್ಲಿ ಆರೋಪಿಸಿದ್ದಾರೆ. ಮತ್ತೂಂದೆಡೆ ವಂಚನೆಗೊಳಗಾದ ಸಾರ್ವಜನಿಕರು ಮಂಗಳವಾರವೂ ಶಿವಾಜಿನಗರದ ಗಣೇಶ್‌ಭಾಗ್‌ ಕನ್ವೆನÒನ್‌ ಹಾಲ್‌ನಲ್ಲಿ ದೂರು ನೀಡಿದ್ದು, ರಾತ್ರಿ ವೇಳೆಗೆ 42 ಸಾವಿರ ದೂರುಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

No Comments

Leave A Comment