ಬಿಹಾರದಲ್ಲಿ ರಣಬಿಸಿಲ ತಾಪಕ್ಕೆ 61 ಮಂದಿ ಬಲಿ, ಜೂನ್ 19ರವರೆಗೆ ಶಾಲೆ ಬಂದ್ ಪಾಟ್ನ: ದೇಶದಲ್ಲಿ ಹವಾಮಾನ ವೈಪರೀತ್ಯ ಮುಂದುವರಿದಿದ್ದು, ಕಳೆದ ಕೆಲವು ವಾರಗಳಿಂದ ಬಿಹಾರದಲ್ಲಿ ಉಷ್ಣಾಂಶ 45.8 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಬಿಸಿ ಗಾಳಿಯ ಪರಿಣಾಮ ಒಂದೇ ದಿನದಲ್ಲಿ(ಶನಿವಾರ) 52 ಮಂದಿ ಸಾವನ್ನಪ್ಪಿದ್ದು, ಈವರೆಗೆ ಒಟ್ಟು ಬಿಸಿಲ ಝಳಕ್ಕೆ ಸಾವನ್ನಪ್ಪಿದ್ದವರ ಸಂಖ್ಯೆ 60ಕ್ಕೆ ಏರಿದೆ ಎಂದು ವರದಿ ತಿಳಿಸಿದೆ. ಬಿಹಾರದಲ್ಲಿನ ಬಿಸಿಲ ಝಳ ದಾಖಲೆ ಮಟ್ಟದ್ದಾಗಿದೆ. ದೇಶದ ಕೆಲವೆಡೆ ಮಳೆಯಾಗುತ್ತಿದ್ದರೆ, ಹಲವೆಡೆ ಮೋಡ ಕವಿದ ವಾತಾವರಣವಿದ್ದರೆ, ಬಿಹಾರದಲ್ಲಿ ರಣಬಿಸಿಲಿಗೆ 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ವಿವರಿಸಿದೆ. ಬಿಸಿಲ ತಾಪಕ್ಕೆ ಕಂಗೆಟ್ಟ ಹಿನ್ನೆಲೆಯಲ್ಲಿ ಜೂನ್ 19ರವರೆಗೆ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ. ಔರಂಗಾಬಾದ್, ಗಯಾ ಪ್ರದೇಶದಲ್ಲಿ ಹೆಚ್ಚಿನ ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಮೃತ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಸೋಮವಾರ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಅಲಹಾಬಾದ್ ನಲ್ಲಿ ಉಷ್ಣಾಂಶ 45.03 ಡಿಗ್ರಿ ಸೆಲ್ಸಿಯಸ್ ಇದ್ದು, ಸುಲ್ತಾನ್ ಪುರ್, ವಾರಣಾಸಿ, ಬಸ್ತಿಯಲ್ಲಿ ಉಷ್ಣಾಂಶ ದಾಖಲೆ ಮಟ್ಟದಲ್ಲಿದೆ(45ಡಿಗ್ರಿ ಸೆಲ್ಸಿಯಸ್) ಎಂದು ಅಧಿಕಾರಿಗಳು ತಿಳಿಸಿದ್ದಾರೆ. Share this:TweetWhatsAppEmailPrintTelegram