ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆಯುವ ಅಪರೂಪದ ಬ್ರಹ್ಮಕಲಶೋತ್ಸವ ರವಿವಾರ ಸಂಪನ್ನಗೊಂಡಿತು. ಸುವರ್ಣ ಗೋಪುರ ಸಮ ರ್ಪಣೆ ಅಂಗವಾಗಿ ಇದು ನಡೆಯಿತು.
ಬೆಳಗ್ಗೆ ಸುಮಾರು 4.30ಕ್ಕೆ ಶ್ರೀಕೃಷ್ಣನಿಗೆ ನೈರ್ಮಾಲ್ಯ ವಿಸರ್ಜನೆ ಪೂಜೆ ನಡೆದ ಬಳಿಕ 6.30ಕ್ಕೆ 108 ಕಲಶಗಳ ಪ್ರತಿಷ್ಠಾಪನೆ ನಡೆಯಿತು. ಮಧ್ವಾಚಾರ್ಯರ ತಂತ್ರಸಾರ ಸಂಗ್ರಹ ಗ್ರಂಥದಲ್ಲಿ ಉಲ್ಲೇಖವಿರುವಂತೆ ಪಂಚಾಮೃತ, ಪಂಚಗವ್ಯ, ಕಷಾಯೋದಕ, ಶುದ್ಧೋದಕ, ಗಂಧೋದಕ, ಹರಿದ್ರೋದಕ, ಗಂಧ ಪುಷೊದಕ ಇತ್ಯಾದಿಗಳ ವಿವಿಧ ಕಲಶಗಳಿಗೆ ವಿವಿಧ ಸ್ವಾಮೀಜಿಗಳು ಪೂಜೆ ಸಲ್ಲಿಸಿ, ಬಳಿಕ ಒಬ್ಬೊಬ್ಬರಾಗಿ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿದರು. ಇದು ಬೆಳಗ್ಗೆ 6.30ರಿಂದ 8ರ ವರೆಗೆ ನಡೆಯಿತು.
ಪರ್ಯಾಯ ಶ್ರೀ ಪಲಿಮಾರು, ಪೇಜಾವರ, ಅದಮಾರು ಹಿರಿಯ, ಕಿರಿಯ, ಕೃಷ್ಣಾಪುರ, ಕಾಣಿಯೂರು, ಸೋದೆ ಮಠಾಧೀಶರು ಕಲಶಾಭಿಷೇಕ ನಡೆಸಿದರು. ವೈದಿಕರು ಕಲಶಾಭಿಷೇಕ ಸಂಬಂಧಿಸಿ ಹೋಮಗಳನ್ನು ನಡೆಸಿದರು. ಕಲಶಾಭಿಷೇಕದ ಬಳಿಕ ಪರ್ಯಾಯ ಸ್ವಾಮೀಜಿಯವರು ಲಕ್ಷ ತುಳಸಿ ಅರ್ಚನೆ ಸಹಿತ ಮಹಾಪೂಜೆ ನಡೆಸಿದರು.
ಇದೇ ವೇಳೆ ವಿವಿಧ ಭಜನ ಮಂಡಳಿಗಳು ಭಜನ ಸೇವೆ ನಡೆಸಿದವು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಸದೆ ಶೋಭಾ ಕರಂದ್ಲಾಜೆ ಸಹಿತ ವಿವಿಧ ಗಣ್ಯರು ಭೇಟಿ ನೀಡಿ ದೇವರ – ಗೋಪುರ ದರ್ಶನ ಪಡೆದರು.
ಪಲಿಮಾರು ಕಿರಿಯ ಶ್ರೀ ಕಾಲ್ಗುಣ
ನಾವು ಆಡುಮಾತಿನಲ್ಲಿ “ಕಾಲ್ಗುಣ ಒಳ್ಳೆಯದು’ ಎನ್ನುತ್ತೇವೆ. ಶ್ರೀ ಪಲಿಮಾರು ಮಠದ ಕಿರಿಯ ಯತಿಗಳಾಗಿ ಬಂದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಕಾಲ್ಗುಣ ಒಳ್ಳೆಯದಿದೆ. ಅವರು ಬಂದ ಕೆಲವೇ ದಿನಗಳಲ್ಲಿ ಸುವರ್ಣ ಗೋಪುರ ಸಮರ್ಪಣೆಯಾಗಿದೆ. – ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಉತ್ತರಾದಿ ಮಠ