ಉತ್ತರ, ಮಧ್ಯ ಭಾರತ ಕೊತಕೊತ: ಬಿಸಿಗಾಳಿ, ಸಿಡಿಲಾಘಾತಕ್ಕೆ 34 ಬಲಿ, 57 ಜಖಂ
ಹೊಸದಿಲ್ಲಿ : ಉತ್ತರ ಮತ್ತು ಮಧ್ಯ ಭಾರತ ತೀವ್ರ ಬಿಸಿ ಮತ್ತು ಧೂಳು ಮಿಶ್ರಿತ ಬಿರುಗಾಳಿಗೆ ನಲುಗುತ್ತಿದೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಧೂಳಿನ ಬಿರುಗಾಳಿ ಮತ್ತು ಸಿಡಿಲಾಘಾತಕ್ಕೆ ಈಗಾಗಲೇ ಕನಿಷ್ಠ 34 ಮಂದಿ ಬಲಿಯಾಗಿದ್ದಾರೆ; 57 ಮಂದಿ ಗಾಯಗೊಂಡಿದ್ದಾರೆ.
ಉತ್ತರ ಮತ್ತು ಮಧ್ಯ ಭಾರತದಲ್ಲಿ ಈ ಭಯಾನಕ ಮತ್ತು ಮಾರಣಾಂತಿಕ ಉಷ್ಣ ಸ್ಥಿತಿ ಜೂನ್ 15ರ ವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಉತ್ತರ ಪ್ರದೇಶದಲ್ಲಿ ಬಿಸಿಗಾಳಿ ಮತ್ತು ಧೂಳಿನ ಬಿರುಗಾಳಿಗೆ, ಸಿಡಿಲಾಘಾತಕ್ಕೆ 26 ಜೀವಗಳು ಬಲಿಯಾಗಿವೆ.
ಮಧ್ಯ ಪ್ರದೇಶದಲ್ಲಿ 13 ವರ್ಷದ ಬಾಲಕಿ ಸೇರಿದಂತೆ ಒಟ್ಟು 8 ಮಂದಿ ಈ ತನಕ ಬಿರುಗಾಳಿ, ಸಿಡಿಲಾಘಾತಕ್ಕೆ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ರತ್ಲಾಂ, ದಾಮೋಹ್ ಮುತ್ತ ಜಬಲ್ಪುರದಲ್ಲಿ ತಲಾ ಇಬ್ಬರು ಸಾವಿಗೀಡಾಗಿದ್ದಾರೆ. ದಿಂಡೋರು ಮತ್ತು ಸಿಯೋನಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಈ ಮಧ್ಯೆ ಬಂದಿರುವ ತಕ್ಕ ಮಟ್ಟಿನ ಮಳೆ ಮತ್ತು ಬಲವಾಗಿ ಬೀಸಿರುವ ತಂಗಾಳಿಯಿಂದ ಜನರಿಗೆ ಸ್ವಲ್ಪಮಟ್ಟಿನ ರಿಲೀಫ್ ಸಿಕ್ಕಿದಂತಾಗಿದೆ.
ದಿನದ ತಾಪಮಾನ 45 ಡಿಗ್ರಿ ಸೆಲ್ಶಿಯಸ್ ದಾಟಿರುವ ಕಾರಣ ಗ್ವಾಲಿಯರ್ನಲ್ಲಿ ಶಾಲೆಗಳ ಬೇಸಗೆ ರಜೆಯನ್ನು ಇನ್ನೂ ಒಂದು ವಾರ ವಿಸ್ತರಿಸಲಾಗಿದೆ. ಆ ಪ್ರಕಾರ ಜೂನ್ 10ರ ಬದಲು ಜೂನ್ 17ರಂದು ಶಾಲೆಗಳು ತೆರೆಯಲಿವೆ ಎಂದು ನಗರದ ವಿಭಾಗೀಯ ಆಯುಕ್ತರು ತಿಳಿಸಿದ್ದಾರೆ.