Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಬಿರುಗಾಳಿ ಸಹಿತ ಮಳೆಗೆ ಬೆದರಿದ ಬೆಂಗಳೂರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಜೋರಾದ ಗಾಳಿಯೊಂದಿಗೆ ಸುರಿದ ಮಳೆಗೆ ನೂರಾರು ಬೃಹತ್‌ ಮರಗಳು ಧರೆಗುರುಳಿದ್ದು, ಹತ್ತಾರು ವಾಹನಗಳು ಜಖಂಗೊಂಡಿವೆ. ಜತೆಗೆ 110 ವಿದ್ಯುತ್‌ ಕಂಬಗಳು ಉರುಳಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

ಮುಂಗಾರು ಪೂರ್ವ ಮಳೆಗೆ ನಗರದಲ್ಲಿ ಈವರೆಗೆ 300ಕ್ಕೂ ಹೆಚ್ಚಿನ ಬೃಹತ್‌ ಮರಗಳು ಉರುಳಿದ್ದು, ಸಾವಿರಾರು ರೆಂಬೆಗಳು ಮುರಿದಿವೆ. ಇನ್ನು ಮಳೆಗಾಲದಲ್ಲಿ ಇನ್ನೆಷ್ಟು ಮರಗಳು ಉರುಳಿದ ಸಾವು-ನೋವು ಸಂಭವಿಸುತ್ತವೆಯೋ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

ಗುರುವಾರ ಸುರಿದ ಧಾರಾಕಾರ ಮಳೆಗೆ ರಸ್ತೆಗಳಲ್ಲಿ ಅಡ್ಡಲಾಗಿ ಬಿದ್ದಿದ್ದ ಬೃಹತ್‌ ಮಗಳಿಂದಾಗಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಜತೆಗೆ 15ಕ್ಕೂ ಹೆಚ್ಚಿನ ಕಾರು, ಆಟೋ ಹಾಗೂ ಬೈಕ್‌ಗಳು ಜಖಂಗೊಂಡಿದ್ದವು. ಇನ್ನು ಹತ್ತಾರು ಕಡೆಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿತ್ತು.

 

 

ಗುರುವಾರ ರಾತ್ರಿ 10ಗಂಟೆ ಬಳಿಕ ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ 40 ಮರಗಳು, 150 ಕೊಂಬೆಗಳು ಹಾಗೂ 40 ವಿದ್ಯುತ್‌ ಕಂಬಗಳು ಮುರಿದಿವೆ. ಐಡಿಯಲ್‌ ಹೋಮ್ಸ್‌ ಬಡಾವಣೆ ರಸ್ತೆಗಳಲ್ಲಿ ಸಾಲಾಗಿ ಮರಗಳು ಹಾಗೂ ವಿದ್ಯುತ್‌ ಕಂಬಗಳು ಬಿದ್ದಿದ್ದು, ಒಂದು ಕಾರು ಜಖಂಗೊಂಡಿದೆ.

ಹಾಗೇ, ಬಸವನಗುಡಿ, ಜಯನಗರ, ಚಾಮರಾಜಪೇಟೆಯಲ್ಲಿ ರಾತ್ರಿ ಮಳೆಯ ಜತೆ ಬೀಸಿದ ಬಿರುಗಾಳಿಗೆ ಮರ, ಕೊಂಬೆಗಳು ಬಿದ್ದು ವಾಹನಗಳು ಜಖಂಗೊಂಡಿವೆ. ಇನ್ನು ಗಿರಿನಗರದಲ್ಲಿ ಹತ್ತಕ್ಕೂ ಹೆಚ್ಚು ಬೃಹತ್‌ ಮರಗಳು ನೆಲಕಚ್ಚಿದ್ದು, ಮೂರು ಮರಗಳು ಮನೆಗಳ ಮೇಲೆ ವಾಲಿಕೊಂಡಿವೆ. ಆದರೆ, ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಪಾಲಿಕೆ ಅರಣ್ಯ ಘಟಕದ ತಂಡಗಳು ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ಮರಗಳನ್ನು ತೆರವುಗೊಳಿಸಿದ್ದು, ವಾರ್ಡ್‌ ರಸ್ತೆಗಳಲ್ಲಿ ಬಿದ್ದಿರುವ ಮರ ಹಾಗೂ ಕೊಂಬೆಗಳನ್ನು ಕತ್ತರಿಸಿ ಅಲ್ಲಿಯೇ ಬಿಟ್ಟಿದ್ದಾರೆ. ಇದರಿಂದ ಸ್ಥಳಿಯ ನಿವಾಸಿಗಳ ಓಡಾಟಕ್ಕೆ ತೊಂದರೆಯಾಗಿತ್ತು. ಇದರೊಂದಿಗೆ ಜೋರು ಗಾಳಿಗೆ 110 ವಿದ್ಯುತ್‌ ಕಂಬ ಬಿದ್ದಿದ್ದು, ಕೆಲವೆಡೆ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿ ಹೆಚ್ಚಿನ ಭಾಗಗಳಲ್ಲಿ ರಾತ್ರಿಯಿಡಿ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.

ರಸ್ತೆ, ಅಂಡರ್‌ಪಾಸ್‌ ಜಲಾವೃತ: ಧಾರಾಕಾರವಾಗಿ ಸುರಿದ ಮಳೆಗೆ ನಗರದ ಉತ್ತರ ಭಾಗದ ಹಲವು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದಲ್ಲಿನ ಬಹುತೇಕ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು. ಯಲಹಂಕ, ಡಿ.ಜೆ.ಹಳ್ಳಿ ಭಾಗಗಳಲ್ಲಿ ರಸ್ತೆ, ಚರಂಡಿಗಳು ತುಂಬಿ ಹರಿದವು.

ದೂರುಗಳ ಸುರಿಮಳೆ: ಮಳೆಯಿಂದಾಗಿ ಬಿಬಿಎಂಪಿ ಹಾಗೂ ಬೆಸ್ಕಾಂ ಸಹಾಯವಾಣಿ ಕೇಂದ್ರಗಳಿಗೆ ದೂರುಗಳ ಸುರಿಮಳೆಯಾಗಿದೆ. 10 ಗಂಟೆ ನಂತರ 40 ನಿಮಿಷದ ಅವಧಿಯಲ್ಲಿ ಮರ ಹಾಗೂ ಕೊಂಬೆಗಳು ಬಿದ್ದ, ರಸ್ತೆ ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿರುವುದು, ವಿದ್ಯುತ್‌ ಸಮಸ್ಯೆ, ವಿದ್ಯುತ್‌ ಕಂಬ ಬಿದ್ದಿರುವುದು ಸೇರಿದಂತೆ ನಗರದ ವಿವಿಧ ಕಡೆಗಳಿಂದ ನೂರಾರು ಕರೆಗಳು ಬಂದಿವೆ.

ಮೇಯರ್‌ ಪರಿಶೀಲನೆ: ಗುರುವಾರ ಸುರಿದ ಮಳೆಯಿಂದಾಗಿ ಗಿರಿನಗರ, ಬಸವನಗುಡಿ ಸೇರಿ ಉಳಿದ ಕಡೆಗಳಲ್ಲಿ ಮಳೆಯಿಂದ ಉಂಟಾದ ಅನಾಹುತಗಳನ್ನು ಶುಕ್ರವಾರ ಮೇಯರ್‌ ಗಂಗಾಂಬಿಕೆ ಪರಿಶೀಲಿಸಿದರು. ಆದಷ್ಟು ಬೇಗ ಮರಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಅರಣ್ಯ ಘಟಕದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹತ್ತು ದಿನಕ್ಕೊಮ್ಮೆ ಸಭೆ ನಡೆಸಿ – ಮೇಯರ್‌: ಮಳೆಗಾಲ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಆಯಾ ವಲಯಗಳಲ್ಲಿ ಪಾಲಿಕೆಯಿಂದ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸಂಭವಿಸಿದ ಅನಾಹುತಗಳ ಕುರಿತಂತೆ 10ದಿನಕ್ಕೊಮ್ಮೆ ಸಭೆ ನಡೆಸಿ, ವರದಿ ನೀಡುವಂತೆ ಮೇಯರ್‌ ಗಂಗಾಂಬಿಕೆ ವಲಯ ಮಟ್ಟದ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ವಲಯ ಮಟ್ಟದಲ್ಲಿ ಪರಿಸರ, ರಸ್ತೆ ಮೂಲಸೌಕರ್ಯ, ಬೃಹತ್‌ ಮಳೆ ನೀರುಗಾಲುವೆ, ಯೋಜನೆ ವಿಭಾಗಗಳ ಎಂಜಿನಿಯರ್‌ಗಳು ಪ್ರತಿ ಹತ್ತು ದಿನಕ್ಕೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು. ಪಾಲಿಕೆಯ ಸಿದ್ಧತೆಗಳ ಕುರಿತು ಚರ್ಚಿಸಬೇಕು. ಜತೆಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಮೇಯರ್‌ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಳೆಗಾಲದಲ್ಲಿ ಅಧಿಕಾರಿಗಳು ವಾರ್ಡ್‌ಗಳಲ್ಲಿದ್ದು ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಮಳೆಹಾನಿಯ ನಿರ್ವಹಣೆ ಸಾಧ್ಯವೇ ಇಲ್ಲ. ಹೀಗಾಗಿ 10 ದಿನಕ್ಕೊಮ್ಮೆ ಸಭೆ ನಡೆಸಿ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆಯಾಗಬೇಕು ಎಂದು ಸೂಚಿಸಿದ್ದಾರೆ.

ಮಳೆಗೆ ಬಿದ್ದ ಮರಗಳ ವಿವರ
ವಲಯ ಮರ ಕೊಂಬೆಗಳು 
-ದಕ್ಷಿಣ 28 125
-ಪೂರ್ವ 5 10
-ಪಶ್ಚಿಮ 2 15
-ಆರ್‌.ಆರ್‌.ನಗರ 40 150
-ಬೊಮ್ಮನಹಳ್ಳಿ 2 2
-ಯಲಹಂಕ 5 13
-ದಾಸರಹಳ್ಳಿ 2 5
-ಒಟ್ಟು 80 320

No Comments

Leave A Comment