
ದೇಗುಲದಲ್ಲಿ ಕಾಲ್ತುಳಿತದಿಂದ 7 ಸಾವು
ತಿರುಚ್ಚಿ: ತಮಿಳುನಾಡಿನ ತಿರುಚ್ಚಿಯಲ್ಲಿನ ಕರುಪ್ಪಸಾಮಿ ದೇಗುಲದಲ್ಲಿ ರವಿವಾರ ಕಾಲ್ತುಳಿತದಿಂದಾಗಿ ಓರ್ವ ಮಹಿಳೆ ಸಹಿತ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ತುರೈಯೂರು ಮುತ್ತಯ್ಯನ ಪಾಳ್ಯಂ ಗ್ರಾಮದಲ್ಲಿ ಈ ದೇಗುಲವಿದೆ. ಗಾಯಗೊಂಡ ಎಲ್ಲರನ್ನೂ ತುರೈಯೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರ ಪೂರ್ಣಿಮೆಯ ಅಂಗವಾಗಿ ವಿಶೇಷ ಪೂಜೆಗೆಂದು ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಹುಂಡಿಯಿಂದ ನಾಣ್ಯವನ್ನು ತೆಗೆದು ಭಕ್ತರಿಗೆ ಅರ್ಚಕರು ಹಂಚುತ್ತಿದ್ದಾಗ ತೀವ್ರ ನೂಕುನುಗ್ಗಲು ಉಂಟಾಗಿದೆ. ಆಗ ಕಾಲ್ತುಳಿತವೂ ಸಂಭವಿಸಿದೆ ಎನ್ನಲಾಗಿದೆ. ಈ ರೂಪಾಯಿ ನಾಣ್ಯವನ್ನು ಮನೆಯಲ್ಲಿಟು ಕೊಂಡರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಇದನ್ನು “ಪಡಿ ಕಾಸು’ ಎನ್ನಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.
ಮೂಲಗಳ ಪ್ರಕಾರ ಜನರನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ. ಅಷ್ಟೇ ಅಲ್ಲ, ಭದ್ರತೆಗೆ ಪೊಲೀಸರನ್ನೂ ನಿಯೋಜಿಸಿರಲಿಲ್ಲ. ಘಟನೆ ಬಗ್ಗೆ ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.