Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಕಾಂಗ್ರೆಸ್ ನದ್ದು ವಂಶೋದಯ, ನಮ್ಮದು ಅಂತ್ಯೋದಯ: ಪ್ರಧಾನಿ ಮೋದಿ

ಮಂಗಳೂರು: “ಕಾಂಗ್ರೆಸ್‌ನದ್ದು ಕುಟುಂಬವನ್ನು ಬೆಳೆಸುವ ವಂಶೋದಯವಾದರೆ ಬಿಜೆಪಿಯದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಾಭ ಮಾಡಿಕೊಡುವ ಅಂತ್ಯೋದಯವಾಗಿದೆ. ವಂಶೋದಯ ಭ್ರಷ್ಟಾಚಾರಕ್ಕೆ ಕಾರಣವಾದರೆ, ಅಂತ್ಯೋದಯ ಬಡತನ ಕಡಿಮೆ ಮಾಡಿ ದೇಶದ ಜನರಲ್ಲಿ ವಿಶ್ವಾಸ ವೃದ್ಧಿಸುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಬಿಜೆಪಿ ಏರ್ಪಡಿಸಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಾಗಿದೆ. ಅಮೆರಿಕ, ಇಂಗ್ಲೆಂಡ್‌, ರಷ್ಯಾ, ಕೆನಡಾ ಸೇರಿದಂತೆ ಜಗತ್ತಿನ ಹಲವು ದೇಶಗಳು ಭಾರತದ ಶಕ್ತಿಯನ್ನು ಗಮನಿಸಿವೆ. ಇದು ನರೇಂದ್ರ ಮೋದಿಯ ಕಾರಣದಿಂದ ಆಗಿಲ್ಲ. ಬದಲಾಗಿ ನೀವು ಹಾಕಿದ ಒಂದೊಂದು ಮತದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

ನಮ್ಮ ಅಂತ್ಯೋದಯ, ಎಲ್ಲರನ್ನು ಒಳಗೊಂಡ ಅಭಿವೃದ್ಧಿಯ ತತ್ವವನ್ನು ಹೊಂದಿದೆ. ನಮ್ಮ ಆಡಳಿತದಲ್ಲಿ ಬಡತನ ಕಡಿಮೆಯಾಗಿ ಹೊಸ ಮಧ್ಯಮ ವರ್ಗ ಸೃಷ್ಟಿಯಾಗಿದೆ. ಬುಡಕಟ್ಟು ಮಹಿಳೆಯೊಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ದೊರಕುವಂತಾಗಿದೆ ಎಂದುರು.

ಕಾಂಗ್ರೆಸ್‌ ಆಡಳಿತದಲ್ಲಿ ಹುತಾತ್ಮ ಸೈನಿಕರನ್ನು ಕೂಡ ಸ್ಮರಿಸುವಷ್ಟು ಸಮಯ ಅವರಿಗೆ ಇರಲಿಲ್ಲ. ಸೈನಿಕರಿಗೆ ಯಾವುದೇ ಗೌರವ ಸಿಗುತ್ತಿರಲಿಲ್ಲ. ಆದರೆ ಬಿಜೆಪಿ ಸರ್ಕಾರ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದರ ಜೊತೆಗೆ ನಿವೃತ್ತ ಸೈನಿಕರಿಗಾಗಿ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಉಗ್ರರ ಮನೆಗೆ ನುಗ್ಗಿ ಅವರನ್ನು ಸದೆಬಡಿದಿದ್ದೇವೆ. ಸೈನಿಕರ ಈ ಪರಾಕ್ರಮವನ್ನು ಇಡೀ ದೇಶ ಮತ್ತು ಜಗತ್ತು ಶ್ಲಾಘಿಸಿದರೆ, ಕಾಂಗ್ರೆಸ್‌ ಮತ್ತು ಅದರ ಬೆಂಬಲಿಗ ಪಕ್ಷಗಳ ನಾಯಕರು ಸೈನಿಕರ ಕಾರ್ಯಾಚರಣೆಯ ಬಗ್ಗೆ ಸಾಕ್ಷ್ಯ ಕೇಳುತ್ತಿದ್ದಾರೆ. ಮಾತ್ರವಲ್ಲ ಸೇನಾಧಿಕಾರಿಯನ್ನು ಗಲ್ಲಿಯ ಗೂಂಡಾ ಎಂದು ಕರೆದು ಅವಮಾನ ಮಾಡಿದ್ದಾರೆ. ಸೇನೆಯನ್ನು ಸುಳ್ಳುಗಾರ ಎಂದು ಕರೆದಿದ್ದಾರೆ ಎಂದು ಟೀಕಿಸಿದರು.

ಕೇರಳದ ಕಮ್ಯುನಿಸ್ಟ್ ಸರ್ಕಾರ ಶಬರಿಮಲೆ ಮತ್ತು ಅಯ್ಯಪ್ಪ ಸ್ವಾಮಿ ಹೆಸರು ಹೇಳಿದವರನ್ನು ಜೈಲಿಗೆ ಕಳುಹಿಸಿದೆ. ಬಿಜೆಪಿ ಅಭ್ಯರ್ಥಿಯೊಬ್ಬರನ್ನು ಕೂಡ ಜೈಲಿಗೆ ಹಾಕಿದೆ ಎಂದು ಪ್ರಧಾನಿ ಆರೋಪಿಸಿದರು.

ಮಂಗಳೂರು ಮತ್ತು ದಕ್ಷಿಣ ಕನ್ನಡ ಬ್ಯಾಂಕ್ ಕ್ಷೇತ್ರಗಳ ತವರೂರು. ರಾಷ್ಟ್ರೀಯ ಬ್ಯಾಂಕ್‌ಗಳಿಂದ ಕಾಂಗ್ರೆಸ್‌ ಸರ್ಕಾರ ದೊಡ್ಡ ದೊಡ್ಡ ಉದ್ಯಮಿಗಳಿಗೆ ಸಾಲ ನೀಡಿದೆ. ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಅದು ವೆಂಟಿಲೇಟರ್‌ನಲ್ಲಿ ಇರುವಂತೆ ಮಾಡಿತು. ಆದರೆ ಈ ಚೌಕಿದಾರ್ ಬಂದ ನಂತರ ಈ ಆಟ ನಡೆಯುವುದಿಲ್ಲ. ಈ ರೀತಿಯ ಆಟವಾಡಲು ಮೋದಿ ಬಿಡುವುದಿಲ್ಲ. ಈಗಾಗಲೇ ಮಿಷಲ್, ಸಕ್ಸೇನಾ, ತಳವಾರ್‌ ಅವರನ್ನು ಕರೆತಂದ್ದಿದ್ದೇವೆ. ಇನ್ನೂ ಹಲವರನ್ನು ಕರೆ ತರುತ್ತೇವೆ ಎಂದು ಮೋದಿ ಹೇಳಿದರು.

ಪಿಎಂ-ಕಿಸಾನ್ ಯೋಜನೆಯಿಂದ ಬೇರೆ ರಾಜ್ಯಗಳ ಲಕ್ಷಾಂತರ ರೈತರಿಗೆ ಲಾಭವಾಗಿದೆ. ಮೊದಲ ಹಂತದ ಹಣ ಈಗಾಗಲೇ ಪಾವತಿಯಾಗಿದೆ. ಆದರೆ ರಾಜ್ಯದ ಸಮ್ಮಿಶ್ರ ಸರ್ಕಾರ ಇಲ್ಲಿನ ರೈತರ ಪಟ್ಟಿಯನ್ನು ನೀಡದ ಕಾರಣ ಇಲ್ಲಿನ ರೈತರಿಗೆ ಪ್ರಯೋಜನ ಸಿಕ್ಕಿಲ್ಲ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯ ಪ್ರಯೋಜನ ಇದುವರೆಗೆ ಸಿಕ್ಕಿಲ್ಲ ಎಂದು ದೂರಿದರು.

ಮೀನುಗಾರರಿಗೆ ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮತ್ಸ್ಯ ಸಂಪದ ಯೋಜನೆಯಿಂದ ಮೀನುಗಾರರಿಗೆ ಅನುಕೂಲವಾಗಿದೆ. ಮೀನುಗಾರಿಕೆಯ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ತೆರೆಯಲು ನಿರ್ಧರಿಸಲಾಗಿದೆ. ಮುಂದಿನ ಬಾರಿಯೂ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು. ದೇಶದ ಅನಿವಾರ್ಯ ಸರ್ಕಾರದ ಬದಲು ಬಲಿಷ್ಠ ಸರ್ಕಾರ ಅಸ್ತಿತ್ವಕ್ಕೆ ತರಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

No Comments

Leave A Comment