Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

BJP ನಮ್ಮ ಎದುರಾಳಿ, ಲೋಕಸಮರಕ್ಕೆ ಕಾಂಗ್ರೆಸ್, ಜೆಡಿಎಸ್ ಜಂಟಿ ಹೋರಾಟ-ದೋಸ್ತಿ ಪತ್ರಿಕಾಗೋಷ್ಠಿಗೆ ಪರಂ ಗೈರು; ಪ್ರಮೋದ್, ಹೆಗ್ಡೆ ಹೆಸರಿದೆಯಂತೆ

ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಎದುರಿಸಲಿದೆ. ಜಂಟಿ ಸಭೆ ನಡೆಸುತ್ತೇವೆ. ಸ್ಥಳೀಯ ನಾಯಕರು ವೈಮನಸ್ಸು ಬಿಟ್ಟು ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ನಮ್ಮ ಮುಖ್ಯ ಗುರಿ. ಆ ನಿಟ್ಟಿನಲ್ಲಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಡಿಕೆ ಶಿವಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿದರು.

ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಪಟ್ಟಿಯನ್ನು ಒಟ್ಟಾಗಿ ರಿಲೀಸ್ ಮಾಡುತ್ತೇವೆ. ಮಾರ್ಚ್ 31ರಂದು ಸಂಜೆ ರಾಹುಲ್ ಗಾಂಧಿ ಹಾಗೂ ದೇವೇಗೌಡರು ಜಂಟಿಯಾಗಿ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸ್ಥಳೀಯ ಭಿನ್ನಾಭಿಪ್ರಾಯವನ್ನು ಈಗಾಗಲೇ ಕೆಲವು ಕಡೆ ಶಮನ ಮಾಡಿದ್ದೇವೆ. ಪ್ರತಿ ಜಿಲ್ಲೆಗೂ ಎರಡೂ ಪಕ್ಷಗಳಿಂದ ವೀಕ್ಷಕರನ್ನು ನೇಮಕ ಮಾಡುತ್ತೇವೆ. ಮೈಸೂರು,ಮಂಡ್ಯ ಬಿಕ್ಕಟ್ಟನ್ನು ನಾವು ಸರಿಪಡಿಸುತ್ತೇವೆ ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ದೇವೇಗೌಡ

ದೆಹಲಿಯಲ್ಲಿ ನನ್ನ ಅವಶ್ಯಕತೆಯ ಬಗ್ಗೆ ಯೋಚಿಸುತ್ತಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಸಮಯವಿದೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಹಾಸನ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ ಎಂದು ಹೇಳಿದ್ದೆ. ಆದರೆ ನನಗೀಗ 87 ವರ್ಷ ಆಗಿದೆ. ಆ ನೆಲೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದರು.

ದೋಸ್ತಿ ಪತ್ರಿಕಾಗೋಷ್ಠಿಗೆ ಪರಂ ಗೈರು; ಪ್ರಮೋದ್, ಹೆಗ್ಡೆ ಹೆಸರಿದೆಯಂತೆ….

ಬೆಂಗಳೂರು: ಸೋನಿಯಾ, ರಾಹುಲ್ ಸಂದೇಶದ ಪ್ರಕಾರ ಚುನಾವಣೆ ಎದುರಿಸುತ್ತೇವೆ. ಸ್ಥಾನ ಹಂಚಿಕೆ ಬಗ್ಗೆ ಇನ್ನು ಚರ್ಚೆ ಇಲ್ಲ. ನಮ್ಮ ಹೋರಾಟ ಇರೋದು ಬಿಜೆಪಿ ವಿರುದ್ಧ. ಲೋಕಸಭೆ ಚುನಾವಣೆಯ ಮಹಾತೀರ್ಪು ಕೊಡುವುದು ಮಹಾಜನತೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್, ಜೆಡಿಎಸ್ ವರಿಷ್ಠರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಮಹಾಘಟಬಂಧನ್ ಬಗ್ಗೆ ಪ್ರಧಾನಿ ಮೋದಿಯವರು ಲಘುವಾಗಿ ಮಾತನಾಡಿದ್ದರು. 15 ರಾಜ್ಯಗಳಲ್ಲಿ ಅವರು ಮೈತ್ರಿ ಸರ್ಕಾರ ನಡೆಸುತ್ತಿದ್ದಾರೆ. ಮೋದಿ ಅವರಿಗೆ ಮೈತ್ರಿ ಸರ್ಕಾರದ ಅರಿವು ಇರಬೇಕು. ಪ್ರಧಾನಿ ಬಳಸುವ ಶಬ್ದ ನಮ್ಮನ್ನು ಪ್ರಚೋದನೆಗೊಳಿಸುತ್ತದೆ. ಅದಕ್ಕೆಲ್ಲಾ ನಾವು ಒಗ್ಗಟ್ಟಾಗಿ ಉತ್ತರ ನೀಡುತ್ತೇವೆ ಎಂದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಸಣ್ಣ,ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತೇವೆ. ಚುನಾವಣೆ ಬಳಿಕವೂ ಮೈತ್ರಿ ಸರ್ಕಾರ ಮುಂದುವರಿಯುತ್ತೆ. ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.

ಗುಟ್ಟು ಬಿಡದ ದೇವೇಗೌಡರು:

ಯಾವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ ಗುಟ್ಟುಬಿಟ್ಟು ಕೊಡದ ದೇವೇಗೌಡರು, ಇನ್ನೂ ಆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ನನಗೀಗ 87ವರ್ಷ ಆಗಿದೆ. ಲೋಕಸಭೆಗೆ ನನ್ನ ಅವಶ್ಯಕತೆ ಇದೆಯಾ ಎಂಬುದರ ಬಗ್ಗೆ ಆಲೋಚಿಸುತ್ತಿದ್ದೇನೆ. ಆದರೆ ಕೆಲವು ನನ್ನ ಗೆಳೆಯರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ, ದಿನೇಶ್ ಗುಂಡೂರಾವ್ , ಕುಮಾರಸ್ವಾಮಿ ನಿರ್ಧರಿಸುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಮೋದ್ ಮಧ್ವರಾಜ್, ಜಯಪ್ರಕಾಶ್ ಹೆಗ್ಡೆ ಹೆಸರೂ ಇದೆ:

ಕಾಂಗ್ರೆಸ್ ಗೆ 20 ಸ್ಥಾನ, ಜೆಡಿಎಸ್ ಗೆ 8 ಸ್ಥಾನ ಎಂಬುದು ಹಂಚಿಕೆಯಾಗಿದೆ. ಮೈತ್ರಿ ಪಕ್ಷವಾಗಿ ನಾವು ಚುನಾವಣೆ ಎದುರಿಸುತ್ತೇವೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರಮೋದ್ ಮಧ್ವರಾಜ್, ಜಯಪ್ರಕಾಶ್ ಹೆಗ್ಡೆ ಅವರ ಹೆಸರೂ ಇದೆ. ಕಾಂಗ್ರೆಸ್ ನಿಂದ ಮಹಿಳೆಯೊಬ್ಬರ ಹೆಸರೂ ಇದೆ. ಈ ಬಗ್ಗೆ ಎರಡು, ಮೂರು ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಂಡು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ.

ಡಿಸಿಎಂ ಪರಮೇಶ್ವರ್ ಗೈರು:

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಡಿಕೆ ಶಿವಕುಮಾರ್ ಅವರು ಹಾಜರಿದ್ದರು. ಆದರೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಗೈರುಹಾಜರಾಗಿದ್ದರು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ, ಅದಕ್ಕೆ ವಿಶೇಷವಾದ ಅರ್ಥ ಕಲ್ಪಿಸಬೇಕಿಲ್ಲ. ತುರ್ತು ಕಾರ್ಯಕ್ರಮದ ನಿಮಿತ್ತ ಅವರು ಭಾಗವಹಿಸಿಲ್ಲ ಎಂದು ದಿನೇಶ್ ಗುಂಡೂರಾವ್ ಸಮಜಾಯಿಷಿ ನೀಡಿದ್ದರು. ಲೋಕಸಭೆ ಚುನಾವಣೆಯ ಸ್ಥಾನ ಹಂಚಿಕೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದು ಪರಮೇಶ್ವರ್ ಅವರಿಗೆ ಅಸಮಧಾನ ತಂದಿದ್ದು, ಈ ನಿಟ್ಟಿನಲ್ಲಿ ದೇವೇಗೌಡರು ಹಾಗೂ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿ ತುಮಕೂರು ಕ್ಷೇತ್ರ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸುವುದಾದರೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಪರಮೇಶ್ವರ್ ಹೇಳಿದ್ದರು.


Read more at https://www.udayavani.com/kannada/news/state-news/370318/congress-jds-joint-press-conference-dcm#yGPRq039BbRMehkK.99

No Comments

Leave A Comment