Log In
BREAKING NEWS >
ಸೆ.22ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಕೋಟಿತುಳಸಿ ಅರ್ಚನೆ ಕಾರ್ಯಕ್ರಮ ಜರಗಲಿದೆ...

ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಯಾಗಿ ಪ್ರೊ|ಎಡಪಡಿತ್ತಾಯ?

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳ ಆಯ್ಕೆಗೆ ರಾಜ್ಯಪಾಲರು ಅಂತಿಮ ಅಂಕಿತ ಹಾಕಿದ್ದು, ನೂತನ ಕುಲಪತಿಯಾಗಿ ಮಂಗಳೂರು ವಿ.ವಿ. ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಅವರು ಆಯ್ಕೆಯಾಗಿದ್ದಾರೆ ಎನ್ನುವ ವದಂತಿ ಹರಡಿದ್ದು, ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಹಿಂದೆ ಕುಲಪತಿಯಾಗಿದ್ದ ಪ್ರೊ| ಕೆ. ಭೈರಪ್ಪ ಅವರ ಅಧಿಕಾರ ಅವಧಿ ಕಳೆದ ಜೂನ್‌ ತಿಂಗಳಲ್ಲಿ ಪೂರ್ಣಗೊಂಡಿದ್ದು, ಬಳಿಕ ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ಡಾ| ಕಿಶೋರ್‌ ಸಿ.ಕೆ., ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ| ಈಶ್ವರ್‌ ನಾಯ್ಕ ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದು ಕಳೆದ ಕೆಲವು ದಿನಗಳಿಂದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಕಿಶೋರಿ ನಾಯಕ್‌ ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ಕುಲಪತಿ ಆಯ್ಕೆಯ ಕಸರತ್ತು ನಡೆಯುತ್ತಿದ್ದರೂ ಕೊನೆಯ ಕ್ಷಣಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿ ನೇಮಕ ಸಂಬಂಧ ರಚನೆಗೊಂಡಿದ್ದ ಶೋಧನಾ ಸಮಿತಿ ಮೂವರ ಹೆಸರನ್ನು ಶಿಫಾರಸು ಮಾಡಿದ್ದು ಅವರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ವಿ.ವಿ. ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ನಾರಾಯಣ ಬದಿಯಡ್ಕ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಮತ್ತು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಪ್ರೊ| ಎಂ.ಬಿ. ರಾಜೇಗೌಡ ಅವರಿದ್ದು, ಕೊನೆಯ ಹಂತದಲ್ಲಿ ರಾಜ್ಯಪಾಲರು ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅವರನ್ನು ಅಂತಿಮಗೊಳಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಮಂಗಳೂರು ವಿ.ವಿ. ಮೂಲದವರಿಗೆ ಅವಕಾಶ ಸಿಕ್ಕಿಲ್ಲ
ಮಂಗಳೂರು ವಿ.ವಿ. ಪ್ರಾರಂಭಗೊಂಡ ಬಳಿಕ ಈ ವರೆಗೆ ವಿ.ವಿ. ಮೂಲದವರಿಗೆ ಕುಲಪತಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ವಿ.ವಿ. ಮೂಲದ ಪ್ರೊ| ನಾರಾಯಣ ಬದಿಯಡ್ಕ ಮತ್ತು ಪ್ರೊ| ಪಿ.ಎಸ್‌. ಎಡಪಡಿತ್ತಾಯ ಸ್ಪರ್ಧೆಯಲ್ಲಿದ್ದಾರೆ. ಪ್ರೊ| ಎಡಪಡಿತ್ತಾಯ ಕುಲಪತಿಯಾದರೆ ಮಂಗಳೂರು ವಿ.ವಿ. ಮೂಲದ ಪ್ರಥಮ ಕುಲಪತಿಗಳು ಎನ್ನುವ ಹೆಗ್ಗಳಿಕೆಯಾಗಲಿದೆ.

No Comments

Leave A Comment