BJP ವಿಜಯಕ್ಕೆ ಕಾರಣವಾಗಬಲ್ಲ PM ಮೋದಿ 10 ಗೇಮ್ ಚೇಂಜಿಂಗ್ ನಿರ್ಧಾರ
ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಗೆ ಈಗಿನ್ನು ಕೇವಲ ಒಂದು ತಿಂಗಳಿದೆ. ಮತ್ತೆ ಅಧಿಕಾರಕ್ಕೆ ಮರಳಿ ಬರುವ ದಿಶೆಯಲ್ಲಿ ಬಿಜೆಪಿ ಈಗಾಗಲೇ ತನ್ನ ರಣತಂತ್ರವನ್ನು ಅಂತಿಮಗೊಳಿಸಿದೆ.
ರಾಷ್ಟ್ರವಾದಿತ್ವ ಮತ್ತು ಭಯೋತ್ಪಾದನೆ ವಿರುದ್ದದ ಹೋರಾಟವನ್ನೇ ಬಿಜೆಪಿ ತನ್ನ ಪ್ರಚಾರಾಭಿಯಾನದ ಪ್ರಧಾನ ಸೂತ್ರವಾಗಿ ಬಳಸಿಕೊಳ್ಳಲಿದೆ.
ಮತದಾರರನ್ನು ಪರಿಣಾಮಕಾರಿಯಾಗಿ ತಲುಪಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕಳೆದ ಐದು ವರ್ಷಗಳಲ್ಲಿ ಕೈಗೊಂಡ 10 ಮಹತ್ವದ ನಿರ್ಧಾರಗಳನ್ನು (Game changing decisions) ಬಿಜೆಪಿ ರಾಷ್ಟ್ರವ್ಯಾಪಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಈಗ ಖಚಿತವಿದೆ. ಮೋದಿ ಸರಕಾರ ಕೈಗೊಂಡ ಆ ಹತ್ತು ಪ್ರಮುಖ ನಿರ್ಧಾರಗಳು ಈ ಕೆಳಗಿನಂತಿವೆ:
1. ಐಎಎಫ್ ವಾಯು ದಾಳಿ : ಪಾಕಿಸ್ಥಾನದಲ್ಲಿನ ಬಾಲಾಕೋಟ್ ಜೆಇಎಂ ಉಗ್ರ ಶಿಬಿರಗಳ ಮೇಲಿನ ಐಎಎಫ್ ವಾಯು ದಾಳಿಯ ನಿರ್ಧಾರ ಅತೀ ಮುಖ್ಯವಾದದ್ದು. 1971ರಲ್ಲಿ ಪಾಕಿಸ್ಥಾನದ ವಿರುದ್ಧ ನಡೆದಿದ್ದ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ವಾಯು ಪಡೆ ಎಲ್ಓಸಿ ದಾಟಿ ಪಾಕಿಸ್ಥಾನದ ಬಾಲಾಕೋಟ್ ನಲ್ಲಿನ ಜೆಇಎಂ ಉಗ್ರ ಶಿಬಿರಗಳ ಮೇಲೆ ಶೇ.80ರ ನಿಖರತೆಯಲ್ಲಿ ಮಾಡಿರುವ ವಾಯು ದಾಳಿಯಲ್ಲಿ ಭಾರೀ ದೊಡ್ಡ ಸಂಖ್ಯೆಯಲ್ಲಿ ಉಗ್ರರು ನಾಶವಾಗಿರುವುದು ಮೋದಿ ಸರಕಾರಕ್ಕೆ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಲಾಭವಾಗುವುದೆಂದು ತಿಳಿಯಲಾಗಿದೆ.
2. ಉರಿ ಸರ್ಜಿಕಲ್ ಸ್ಟ್ರೈಕ್ : ಜಮ್ಮು ಕಾಶ್ಮೀರದ ಉರಿಯಲ್ಲಿನ ಭಾರತೀಯ ಸೇನಾ ನೆಲೆಯ ಮೇಲೆ ಪಾಕ್ ಉಗ್ರರು ದಾಳಿ ನಡೆಸಿ 19 ಸೈನಿಕರನ್ನು ಬಲಿ ಪಡೆದುದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಿಓಕೆಯಲ್ಲಿನ ಪಾಕ್ ಉಗ್ರರ ಶಿಬಿರಗಳ ಮೇಲೆ 2016ರ ಸೆ.29ರಂದು ನಡೆಸಿದ ವಿನಾಶಕಾರಿ ದಾಳಿ ಪಾಕ್ ಉಗ್ರರಿಗೆ ತಕ್ಕ ಪಾಠವನ್ನು ಕಲಿಸಿದೆ.
3. ಕೋಟಾ ಬಿಲ್ : ಆರ್ಥಿಕವಾಗಿ ಹಿಂದುಳಿದವರಿಗೆ ಜನರಲ್ ಕೆಟಗರಿಯಲ್ಲಿ ಶೇ.10ರ ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಲ್ಪಿಸಲಾಗಿರುವುದು. 2019ರ ಜನವರಿಯಲ್ಲಿ ಈ ಮಸೂದೆ ಸಂಸತ್ತಿನಲ್ಲಿ ಪಾಸಾಯಿತು.
4. ಇನ್ಕಮ್ ಟ್ಯಾಕ್ಸ್ ರಿಬೇಟ್ : ಐದು ಲಕ್ಷ ರೂ. ವರೆಗಿನ ಆದಾಯ ಇರುವವರಿಗೆ 2019ರ ಮಧ್ಯಂತರ ಬಜೆಟ್ ನಲ್ಲಿ ಮೋದಿ ಸರಕಾರ ಆದಾಯ ತೆರಿಗೆಯಿಂದ ವಿನಾಯಿತಿ ನೀಡಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಇದರ ಪರಿಣಾಮವಾಗಿ 6.50 ಲಕ್ಷ ರೂ. ವರೆಗೆ ಆದಾಯ ಇರುವವರು (1.5 ಲಕ್ಷ ರೂ. ಉಳಿತಾಯ ಮಾಡಿ ತೋರಿಸುವ ಮೂಲಕ) ತೆರಿಗೆ ಕಟ್ಟಬೇಕಾಗಿಲ್ಲದಿರುವುದು ಮಧ್ಯಮ ವರ್ಗದವರಿಗೆ ಭಾರೀ ದೊಡ್ಡ ಲಾಭ ಎನಿಸಲಿದೆ.
5. ಕಿಸಾನ್ ಸಮ್ಮಾನ್ ನಿಧಿ ಯೋಜನೆ : ಮೋದಿ ಸರಕಾರದ ಈ ಯೋಜನೆಯಡಿ ದೇಶದ ಬಡ ರೈತರು ವರ್ಷಕ್ಕೆ ಸರಕಾರದಿಂದ 6,000 ರೂ. ನಗದನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಪಡೆಯುತ್ತಾರೆ. ಈ ಮೊತ್ತವು 2,000 ರೂ.ಗಳ ಮೂರು ಕಂತಿನಲ್ಲಿ ಪ್ರತೀ ವರ್ಷ ರೈತರ ಖಾತೆಗೆ ಜಮೆಯಾಗುತ್ತದೆ.
6. ಆಯುಷ್ಮಾನ್ ಭಾರತ ಯೋಜನೆ : 2018ರ ಸೆಪ್ಟಂಬರ್ನಲ್ಲಿ ಮೋದಿ ಸರಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಹೆಲ್ತ್ ಕೇರ್ ಯೋಜನೆಯಡಿ ಪ್ರತೀ ಕುಟುಂಬಕ್ಕೆ ವರ್ಷಕ್ಕೆ 5,00,000 ರೂ. ವರೆಗಿನ ವೈದ್ಯಕೀಯ ಮತ್ತು ಆಸ್ಪತ್ರೆ ಖರ್ಚನ್ನು ಭರಿಸಲಾಗುತ್ತದೆ. ಈ ಯೋಜನೆಯಡಿ 10 ಕೋಟಿ ಬಡ ಕುಟುಂಬಗಳು ಲಾಭ ಪಡೆಯಲಿವೆ. ಇದು ವಿಶ್ವದ ಅತೀ ದೊಡ್ಡ ಹೆಲ್ತ್ ಕೇರ್ ಯೋಜನೆ ಎಂದು ಪರಿಗಣಿಸಲ್ಪಟ್ಟಿರುವುದು ಮೋದಿ ಸರಕಾರಕ್ಕೆ ಒಂದು ಹೆಮ್ಮೆ.
7. ಪ್ರಧಾನ ಮಂತ್ರಿ ಉಜ್ವಲ ಯೋಜನೆ: ಈ ಯೋಜನೆಯಡಿ 2019ರ ಮಾರ್ಚ್ ಒಳಗೆ ಐದು ಕೋಟಿ ಉಚಿತ ಎಲ್ಪಿಜಿ ಸಂಪರ್ಕವನ್ನು ನೀಡಲಾಗುತ್ತದೆ. ಈ ಗುರಿಯನ್ನು 2021ರ ವೇಳೆಗೆ 8 ಕೋಟಿಗೆ ಏರಿಸಲಾಗಿದೆ. ಬಡ ಕುಟುಂಬಕ್ಕೆ ನೀಡಲಾಗುವ ಪ್ರತೀ ಉಚಿತ ಎಲ್ಪಿಜಿ ಕನೆಕ್ಷನ್ಗೆ ಸರಕಾರಿ ಒಡೆತನದ ಚಿಲ್ಲರೆ ಮಾರಾಟಗಾರರಿಗೆ 1,600 ರೂ. ಸಬ್ಸಿಡಿ ದೊರಕಲಿದೆ.
8. ಸ್ವಚ್ಚ ಭಾರತ ಅಭಿಯಾನ : 2014ರಲ್ಲಿ ಪ್ರಧಾನಿ ಮೋದಿ ಅವರು ಆರಂಭಿಸಿದ್ದ ಈ ಜನಾಂದೋಲನದಿಂದ ದೇಶದಲ್ಲಿ ಸಚ್ಚತೆಯ ಪ್ರಜ್ಞೆ ಜಾಗೃತಗೊಂಡಿದ್ದು ರಸ್ತೆಗಳು, ಸಾರ್ವಜನನಿಕ ಮತ್ತು ಖಾಸಗಿ ಸ್ಥಳಗಳು ಸಾರ್ವಜನಿಕರ ಭಾಗವಹಿಸುವಿಕೆಯಿಂದ ಸ್ವಚ್ಚತೆಯ ರೂಪ ತಳೆಯುತ್ತಿವೆ.
9. ತ್ರಿವಳಿ ತಲಾಕ್ ಕಾಯಿದೆ : ಮುಸ್ಲಿಂ ಮಹಿಳೆಯ ವೈವಾಹಿಕ ಹಕ್ಕು ರಕ್ಷಣೆ ಕಾಯಿದೆಯ 2019 ಎರಡನೇ ವಿಧೇಯಕದ ಮೂಲಕ ಮೋದಿ ಸರಕಾರ ತ್ರಿವಳಿ ತಲಾಕ್ ಪದ್ಧತಿಯನ್ನು ಕಾನೂನು ಬಾಹಿರ ಮತ್ತು ಶಿಕ್ಷಾರ್ಹಗೊಳಿಸಿದೆ. ತ್ರಿವಳಿ ತಲಾಕ್ ನೀಡುವವರಿಗೆ ಮೂರು ವರ್ಷಗಳ ಜೈಲು ಮತ್ತು ದಂಡದ ಶಿಕ್ಷೆ ಇದೆ.
10. ಎಸ್ಸಿ/ಎಸ್ಟಿ ತಿದ್ದುಪಡಿ ಕಾಯಿದೆ : ಹಿಂದುಳಿ ವರ್ಗಗಳ ಹಕ್ಕುಗಳನ್ನು ರಕ್ಷಿಸುವ ಯತ್ನದಲ್ಲಿ ಮೋದಿ ಸರಕಾರ 2018ರಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆಗೆ ಸಂಸತ್ತಿನಲ್ಲಿ ತಿದ್ದುಪಡಿಯನ್ನು ತಂದಿದೆ. ಇದರಿಂದಾಗಿ ಎಸ್ಸಿ/ಎಸ್ಟಿ ವಿರುದ್ಧ ದೌರ್ಜನ್ಯ ನಡೆಸಿದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಅವಕಾಶ ಇರುವುದಿಲ್ಲ.