Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಬೆಂಗಳೂರು ಏರ್ ಷೋ ತಾಲೀಮು ವೇಳೆ ಅವಘಡ: 2 ಸೂರ್ಯಕಿರಣ್ ಜೆಟ್ ಗಳ ಡಿಕ್ಕಿ, ಓರ್ವ ಪೈಲಟ್ ಸಾವು

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಏರೋ ಇಂಡಿಯಾ 2019ಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬೆಂಗಳೂರು ಏರ್ ಷೋ ವೇಳೆ ಅವಘಡವೊಂದು ಸಂಭವಿಸಿದ್ದು, ತಾಲಿಮೀನಲ್ಲಿ ನಿರತವಾಗಿದ್ದ ಎರಡು ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಪತನವಾಗಿವೆ. ಪರಿಣಾಮ ಓರ್ವ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಏರೋ ಇಂಡಿಯಾ 2019ರ ನಿಮಿತ್ತ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ಸೇನೆಯ ಯುದ್ಧ ವಿಮಾನಗಳು ತಾಲೀಮಿನಲ್ಲಿ ನಿರತವಾಗಿದ್ದು, ಈ ವೇಳೆ ಸೇನೆಯ ಸೂರ್ಯಕಿರಣ್ ಯುದ್ಧ ವಿಮಾನಗಳು ಪರಸ್ಪರ ಢಿಕ್ಕಿ ಹೊಡೆದು ಪತನವಾಗಿವೆ. ಈ ವೇಳೆ ವಾಯುನೆಲೆಯ ಕಾಪೌಂಡ್ ಬಳಿ ವಿಮಾನಗಳು ಹೊತ್ತಿ ಉರಿದು ಬಿದ್ದಿದ್ದು, ಬೆಂಕಿ ಕೆನ್ನಾಲಿಗೆಗೆ ಸಮೀಪದ ಒಂದು ಮನೆಯ ಗೋಡೆ ಹಾಗೂ ಹಸುವಿನ ಕೊಟ್ಟಿಗೆಗೆ ಬೆಂಕಿ ಬಿದ್ದಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.

 ಬಳಿಯ ಜನವಸತಿ ಪ್ರದೇಶದ ಬಳಿ ಈ ದುರಂತ ಸಂಭವಿಸಿದ್ದು, 2 ವಿಮಾನಗಳಲ್ಲಿ ಇಬ್ಬರು ಪೈಲಟ್ ಗಳು ಮತ್ತೋರ್ವ ಸಹ ಪೈಲಟ್ ಇದ್ದರು ಎಂದು ತಿಳಿದುಬಂದಿದೆ, ಈ ಪೈಕಿ ಇಬ್ಬರು ಪೈಲೆಟ್ ಗಳು ವಿಮಾನದಿಂದ ಹೊರ ಜಿಗಿದಿದ್ದು, ಈ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಏರೋ ಇಂಡಿಯಾ ಪ್ರದರ್ಶನದಲ್ಲಿ ಅತ್ಯಂತ ಆಕರ್ಷಣೆಯ ಕೇಂದ್ರ ಬಿಂದುವಾದ ಸೂರ್ಯಕಿರಣ್ ಜೆಟ್ ವಿಮಾನಗಳು ವಾಯು ಮಾರ್ಗದಲ್ಲಿ ಕಸರತ್ತು ನಡೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂಭವಿಸಿದ ತಕ್ಷಣ 10 ಅಗ್ನಿ ಶಾಮಕ ವಾಹನಗಳು ತೆರಳಿ ಬೆಂಕಿ ನಂದಿಸುವ ಮತ್ತು ರಕ್ಞಣಾ ಕಾರ್ಯದಲ್ಲಿ ನಿರತವಾದವು.  ತಾಲೀಮು ಮುಗಿದ ನಂತರ ವಿಮಾನಗಳನ್ನು ಇಳಿಸುವ ವೇಳೆಯಲ್ಲಿ ಒಂದು ವಿಮಾನ ಮತ್ತೊಂದಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ನಂತರ ಬೆಂಕಿ ಹೊತ್ತಿಕೊಂಡು ಉರಿದಿದೆ ಎನ್ನಲಾಗಿದೆ. 

ಪರಸ್ಪರ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಭಾರೀ ಸದ್ದು ಕೇಳಿ ಬಂದಿದ್ದು, ಬೆಂಕಿ ಸಮೀಪದ ಮನೆಯೊಂದನ್ನು ಆವರಿಸಿತು ಎನ್ನಲಾಗಿದೆ. ಪೈಲೆಟ್ ಗಳು ಪ್ಯಾರಾಚ್ಯೂಟ್ ಮೂಲಕ ಕೆಳಗಿಳಿಯಲು ಪ್ರಯತ್ನಿಸಿದರು. ಈ ಪೈಕಿ ಓರ್ವ ಪೈಲೆಟ್ ನೆಲಕ್ಕೆ ಬಿದ್ದರೆಂದು ಅಲ್ಲಿದ್ದ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.  ಗಾಯಗೊಂಡಿರುವ ಪೈಲೆಟ್ ಅನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಸಂಭವಿಸಿದ ತಕ್ಷಣ ವಾಯುಪಡೆ ಮತ್ತು ರಕ್ಷಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಇನ್ನು ಎರಡೂ ವಿಮಾನಗಳ ಪೈಲಟ್ ಗಳು ಅಪಘಾತಕ್ಕೂ ಮುನ್ನ ಇಜೆಕ್ಟ್ ಆದ ಹಿನ್ನೆಲೆಯಲ್ಲಿ ಅವರ ಪ್ರಾಣಕ್ಕೆ ಹಾನಿಯಾಗಿಲ್ಲ ಎಂದು ಹೇಳಲಾಗಿದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಾಳೆಯಿಂದ ಆರಂಭವಾಗಬೇಕಿದ್ದು, 170 ಕ್ಕೂ ಹೆಚ್ಚು ಕಂಪೆನಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಇದರಲ್ಲಿ 35 ವಿದೇಶಿ ವೈಮಾನಿಕ ಕಂಪೆನಿಗಳು ಎನ್ನಲಾಗಿದೆ.

ಇನ್ನು ಸ್ಕ್ವಾಡ್ರನ್ ಲೀಡರ್ ವಿಜಯ್ ಶೇಳ್ಕೆ ನೇತೃತ್ವದಲ್ಲಿ ಸೂರ್ಯಕಿರಣ್ ಹಾಕ್ ಯುದ್ಧ ವಿಮಾನಗಳ ತಾಲೀಮು ನಡೆಯುತ್ತಿತ್ತು ಎಂದು ತಿಳಿದುಬಂದಿದ್ದು,  ಈ ದುರ್ಘಟನೆಯಲ್ಲಿ  ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.ತನಿಖೆಗೆ ರಕ್ಷಣಾ ಸಚಿವಾಲಯ ಆದೇಶಎರಡು ಸೂರ್ಯ ಕಿರಣ್ ವಿಮಾನಗಳ ನಡುವೆ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ತನಿಖೆಗೆ ಆದೇಶಿಸಿದೆ.ಯಲಹಂಕದ ಇಸ್ರೋ ಬಡಾವಣೆ ಸಮೀಪ ಬೆಳಗ್ಗೆ 11.50 ಗಂಟೆಗೆ ಸರಿಯಾಗಿ ವಾಯು ಮಾರ್ಗದಲ್ಲೇ ಈ ಅಪಘಾತ ಸಂಭವಿಸಿದ್ದು, ಒಂದು ವಿಮಾನ ಮತ್ತೊಂದು ವಿಮಾನದ ರೆಕ್ಕೆಗೆ ಬಡಿದು ದುರಂತ ಸಂಭವಿಸಿದೆ. ಈ ಸಂದರ್ಭದಲ್ಲಿ ಒಟ್ಟು ಮೂವರು ಪೈಲೆಟ್ ಗಳಿದ್ದರು. ಇಬ್ಬರು ಪೈಲೆಟ್ ಗಳು ರಭಸವಾಗಿ ಸಂಚರಿಸುತ್ತಿದ್ದ ವಿಮಾನದಿಂದ ಜಿಗಿದಿದ್ದು, ಅವರನ್ನು ಕಮಾಂಡೋ ಆಸ್ಪತ್ರೆಗೆ ಸೇರಿಸಲಾಗಿದೆ. ಮೂರನೇ ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಆಸ್ತಿ ಪಾಸ್ತಿ ಹಾನಿಯ ಬಗ್ಗೆ ಅಂದಾಜು ಮಾಡುತ್ತಿದ್ದಾರೆ.

No Comments

Leave A Comment