ಪುಲ್ವಾಮಾ ದಾಳಿ: 100 ತಾಸೊಳಗೆ ಕಾಶ್ಮೀರದ ಎಲ್ಲ ಜೈಶ್ ನಾಯಕರ ಹತ್ಯೆ
ಹೊಸದಿಲ್ಲಿ : ಕಳೆದ ಫೆ.14ರಂದು ಪುಲ್ವಾಮಾದಲ್ಲಿ ಆತ್ಮಾಹುತಿ ಬಾಂಬಿಂಗ್ ನಡೆದ 100 ತಾಸಿನೊಳಗೆ ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದ್ದ ಜೈಶ್ ಎ ಮೊಹಮ್ಮದ್ ಸಂಘಟನೆಯ ಎಲ್ಲ ಉನ್ನತ ಉಗ್ರ ನಾಯಕರನ್ನು ಹತ್ಯೆಗೈಯಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಕನ್ವಲ್ಜಿತ್ ಸಿಂಗ್ ಧಿಲ್ಲೋನ್ ಅವರು ಇಂದು ಮಂಗಳವಾರ ಸೇನೆ, ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಸಿಆರ್ಪಿಎಫ್ ಇದರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಾಶ್ಮೀರದಲ್ಲಿ ಜೈಶ್ ಉಗ್ರ ನಾಯಕರು ಪಾಕ್ ಸೇನೆ ಮತ್ತು ಐಎಸ್ಐ ನ ಸಕ್ರಿಯ ಬೆಂಬಲದೊಂದಿಗೆ ಕಾರ್ಯಾಚರಿಸುತ್ತಿದ್ದರು. ಜೆಇಎಂ ಉಗ್ರರಿಗೆ ಪಾಕ್ ಸೇನೆಯೇ ನೇರವಾಗಿ ನಿರ್ದೇಶನ ನೀಡುತ್ತಿತ್ತು ಎಂದು ಧಿಲ್ಲೋನ್ ಹೇಳಿದರು.
ಪಾಕ್ ಉಗ್ರರಿಗೆ ಕಾಶ್ಮೀರದ ಸ್ಥಳೀಯರು, ವಿಶೇಷವಾಗಿ ಯುವಕರು ಬೆಂಬಲ ಕೊಡುತ್ತಿದ್ದಾರೆ. ಈ ರೀತಿಯ ಕೃತ್ಯಗಳಿಗೆ ಮತ್ತು ಹಿಂಸೆಗೆ ಮುಂದಾಗದಂತೆ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ ಅವರಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ ಎಂದವರು ಹೇಳಿದರು.
ಈ ಎಚ್ಚರಿಕೆಯ ಹೊರತಾಗಿಯೂ ಒಂದೊಮ್ಮೆ ಸ್ಥಳೀಯರು ಮತ್ತು ಅವರ ಪುತ್ರರು ಕೈಗೆ ಗನ್ ಎತ್ತಿಕೊಂಡದ್ದೇ ಆದಲ್ಲಿ ಅವರನ್ನು ಕೊಂದು ಮುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಧಿಲ್ಲೋನ್ ಹೇಳಿದರು. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ಕೂಡಲೇ ಮುಂದೆ ಬಂದು ಶರಣರಾಗಬೇಕು ಎಂದು ಹೇಳಿದರು.