Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಬಹುವರ್ಣಗಳಲಿ ಕಂಗೊಳಿಸಿದ ಪರಮ ಪಾವನ ಮೂರುತಿ

ರತ್ನಗಿರಿ, ಶ್ರೀ ಕ್ಷೇತ್ರ ಧರ್ಮಸ್ಥಳ: ಕ್ಷೀರದಲ್ಲಿ ಮಿಂದಾಗ ಧವಳಮೂರ್ತಿ. ಇಕ್ಷುರಸ ಸುರಿದಾಗ ತುಷಾರ ಮೂರ್ತಿ. ಅರಸಿನ ಲೇಪನವಾದಾಗ ಸುವರ್ಣ ಮೂರ್ತಿ. ಕಷಾಯಾಭಿಷೇಕಕ್ಕೆ ಹವಳದ ಮೂರ್ತಿ. ಶ್ರೀಗಂಧ ಚಂದನ ಲೇಪನಕ್ಕೆ ಮಾಣಿಕ್ಯ ಮೂರ್ತಿ… ಒಂದೊಂದು ಕ್ಷಣ ಒಂದೊಂದು ಅಪೂರ್ವ ರೂಪದಲ್ಲಿ ಕಂಗೊಳಿಸುತ್ತಾ ಮಂಗಲ ಮೂರ್ತಿಯಾಗಿ ರತ್ನಗಿರಿಯಲ್ಲಿ ಶನಿವಾರ ಶೋಭಿಸಿದ್ದು ಭಗವಾನ್‌ ಶ್ರೀ ಬಾಹುಬಲಿ.

ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕವು ಪ್ರತಿಷ್ಠಾಪಕ, ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಫೆ. 16ರಂದು ಸಂಭ್ರಮದಿಂದ ಶುಭಾರಂಭ ಗೊಂಡಿತು. ಫೆ. 9ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡ ಈ ಮಹಾ ಮಸ್ತಕಾಭಿಷೇಕ ಫೆ. 18ರ ವರೆಗೆ ಜರಗಲಿದೆ.

39 ಅಡಿ ಎತ್ತರದ ಬಾಹುಬಲಿಯು ಅಭಿಷೇಕದ ಕೊನೆಯ ಹಂತದಲ್ಲಿ ತನ್ನ ಗಾತ್ರದಷ್ಟೇ ಬೃಹತ್‌ ಪುಷ್ಪಮಾಲೆ ಧರಿಸಿ ರಾರಾಜಿಸಿದಾಗ ಬಹು ಭಕ್ತ ಭಾವುಕರು ಆನಂದ ಭಾಷ್ಪ ಸುರಿಸಿ, ಧನ್ಯತೆಯ ಕ್ಷಣಗಳನ್ನು ಅನುಭವಿಸಿದರು. ಮಹಾ ಮಂಗಳಾರತಿಯಾಗುತ್ತಿದ್ದಂತೆ ಸಮೀಪದ ನೇತ್ರಾವತಿ ನದಿ ತೀರದಲ್ಲಿ ಮೊಳಗಿದ ಭಗವಾನ್‌ ಬಾಹುಬಲೀಕಿ- ಜೈ ಎಂಬ ಜಯಕಾರ ಬಾಹುಬಲಿಯು ಸಾರಿದ ತ್ಯಾಗ, ಅಹಿಂಸೆ, ಪ್ರೇಮಗಳ ಸಂದೇಶ ವನ್ನು ಪ್ರತಿಧ್ವನಿಸುವಂತಿತ್ತು.

ವರ್ಣ ವೈಭವದ ಸಂಚಲನ
ಮುಂಜಾನೆ ಅಗ್ರೋದಕ ಮೆರವಣಿಗೆಯೊಂದಿಗೆ ಮಸ್ತಕಾ ಭಿಷೇಕ ಆರಂಭವಾಯಿತು. ಮುಂದೆ ಅಭಿಷೇಕವು ಸೂರ್ಯ ಕಿರಣಗಳ ಹಿನ್ನೆಲೆಯಲ್ಲಿ ಅಪೂರ್ವ ವರ್ಣವೈಭವದೊಂದಿಗೆ ರಾರಾಜಿಸಿತು. ಪವಿತ್ರ ನದಿಗಳ ಜಲವಿದ್ದ ಕಲಶಾಭಿಷೇಕ ಪೂರ್ಣವಾದ ಬಳಿಕ ಪಂಚಾಮೃತ ಅಭಿಷೇಕ.

ಜಲಾಭಿಷೇಕ
ದೇವೇಂದ್ರನು ಜಿನ ಭಗವಂತನಿಗೆ ಮೇರು ಪರ್ವತದ ಪಾಂಡುಕಶಿಲೆಯ ಮೇಲೆ ಸಮುದ್ರ ದಿಂದ ಮಾಡಿದ ಅಭಿಷೇಕದ ಸಂಕೇತವಾಗಿ ಜಲಾಭಿಷೇಕ ಎಂದು ಪುರಾಣ ಕಥಾನಕ ಹೇಳುತ್ತದೆ. ಜಿನ ಭಗವಂತ ಅದ್ಭುತ ಜ್ಞಾನದಿಂದ ಮೂರು ಲೋಕದ ಮೇಲೆ ಜ್ಞಾನದ ಮಳೆಯನ್ನು ಸುರಿಸಿದ್ದರ ಸಂಕೇತವಾಗಿ ಈ ಸ್ನಾನಜಲದ ಪ್ರವಾಹವು ಜನತೆಗೆ ಶಾಂತಿ, ಐಶ್ವರ್ಯ, ಸಂತೋಷ, ದೀರ್ಘಾಯುಷ್ಯ ನೀಡುವುದೆಂಬ ವಿವರಣೆ ಇದೆ. ನಾಳಿಕೇರಾಭಿಷೇಕ ಬಾಹುಬಲಿಯು ಶಾರೀರಿಕ ಹಾಗೂ ಮಾನಸಿಕವಾದ ಸರ್ವ ದೋಷಗಳಿಂದ ಅತೀತರೆಂದು ನಂಬಿಕೆ. ಆದ್ದರಿಂದ ಭಕ್ತರೂ ತಮ್ಮ ದೋಷಗಳನ್ನು ನಿವಾರಿಸಿಕೊಳ್ಳಲು, ಶಾರೀರಿಕವಾದ ದೋಷಗಳನ್ನು ಪರಿಹರಿಸಿಕೊಳ್ಳಲು ತಂಪಾದ ಮತ್ತು ಪರಿಶುದ್ಧವಾದ ನಾಳಿಕೇರಾಭಿಷೇಕ ನಡೆಸಲಾಗುತ್ತಿದೆ.

ಇಕ್ಷುರಸಾಭಿಷೇಕ
ಕಬ್ಬಿನ ರಸದ ಅಭಿಷೇಕವಾಗುತ್ತಿದ್ದಂತೆ ಬಾಹು ಬಲಿ ತುಷಾರ ಸಿಂಚನಗೊಂಡಂಥ ಮೂರ್ತಿ. ಜೈನ ಪುರಾಣದ ಪ್ರಕಾರ ಬಾಹುಬಲಿಯು ಕಾಮದೇವ. ಅಂತಹ ಕಾಮನನ್ನು ನಿಗ್ರಹಿಸಿ, ಕಬ್ಬಿನ ಜಲ್ಲೆಯನ್ನು ಹಿಂಡಿದ ರಸದಿಂದ ತ್ತೈಲೋಕಾ ಧಿಪತಿ ಜಿನ ಭಗವಂತ ಅಭಿಷೇಕ ಮಾಡಿಸಿ ಕೊಂಡು ಎಲ್ಲ ಕರ್ಮಗಳನ್ನು ನಾಶ ಮಾಡಿ ಕೊಂಡರೆಂಬ ಕಲ್ಪನೆಯ ಆಧಾರದಲ್ಲಿ ಇಕ್ಷುರಸಾ ಭಿಷೇಕ. ಮಾನವನಿಗೆ ಅಂಟಿಕೊಂಡ ಕರ್ಮ ನಾಶವಾಗುವುದೆಂಬ ನಂಬಿಕೆ.

ಕ್ಷೀರಾಭಿಷೇಕ
ಹಾಲಿನ ಅಭಿಷೇಕ ಆರಂಭವಾದಾಗ ಬಾಹು ಬಲಿ ಧವಳದ ಮೂರ್ತಿಯಂತೆ ಕಂಗೊಳಿಸಿದ. ಹಾಲು ಬಿಳಿ, ಶುಭ್ರ, ನಿರ್ಮಲ. ಲೋಕವೆಲ್ಲ ಶುಭ್ರವಾಗಿ, ಶಾಂತಿ ನೆಲೆಸಿ, ಸಂತುಷ್ಟಿ, ಪುಷ್ಟಿ ಆರೋಗ್ಯ ಲಭಿಸುವುದೆಂದು ನಂಬಿಕೆ.

ಅಕ್ಕಿ ಹಿಟ್ಟಿನ ಅಭಿಷೇಕ
ಕ್ಷೀರಾಭಿಷೇಕದ ಬಳಿಕ ಅಕ್ಕಿಹಿಟ್ಟಿನ ಅಭಿ ಷೇಕ. ಕ್ಷೀರಾಭಿಷೇಕದಿಂದ ಉಂಟಾದ ಜಿಗುಟು ನಿವಾರಿಸಲು ಇದು ನಡೆಯುತ್ತದೆ. ಆತ್ಮಕ್ಕೆ ಅಂಟಿಕೊಂಡ ಕೊಳೆ ಎಂಬ ಜಿಗುಟನ್ನು ಭಕ್ತನು ನಿವಾರಿಸಿಕೊಳ್ಳಬೇಕೆಂಬುದರ ಸಂಕೇತವಿದು.

ಸ್ವರ್ಣ ಮೂರುತಿ
ಅರಸಿನಾಭಿಷೇಕ ಆರಂಭವಾಗುತ್ತಿದ್ದಂತೆಯೇ ಬಾಹುಬಲಿ ಸ್ವರ್ಣ ಮೂರ್ತಿಯಾದ. ಬಿಸಿಲು, ಗಾಳಿ, ಮಳೆ ಎನ್ನದೆ ನಿಂತಿರುವ ಬಾಹುಬಲಿಯ ಮೂರ್ತಿಯ ರಕ್ಷಣೆಗೆ ಈ ವೈವಿಧ್ಯಮಯ ದ್ರವ್ಯಾಭಿಷೇಕ ನಡೆಯುವುದೆಂಬ ವಿವರಣೆ ಇದೆ.

ಕಷಾಯಾಭಿಷೇಕ
ಕಷಾಯ ಅಭಿಷೇಕವಾಗುತ್ತಿದ್ದಂತೆಯೇ ಕಡು ಹವಳದ ಮೂರ್ತಿ. ಈ ಕಷಾಯದಲ್ಲಿ 18 ವಿವಿಧ ಕೆತ್ತೆಗಳ ಚೂರ್ಣವಿರುತ್ತದೆ. ಕಷಾಯರಹಿತ ಭಗವಂತನಿಗೆ ಇದನ್ನು ಅಭಿಷೇಕ ಮಾಡುವುದರ ಫಲವಾಗಿ ಮಾನವನು ಕ್ರೋಧ, ಮಾಯೆ, ಲೋಭ ಗಳೆಂಬ ಕಷಾಯಗಳಿಂದ ಮುಕ್ತನಾಗುತ್ತಾನೆ ಎಂಬ ನಂಬಿಕೆ. ಈ ಕಷಾಯ ಗಳ ಲೇಪನವನ್ನು ತೊಳೆಯುವುದಕ್ಕಾಗಿ ಮೂರ್ತಿಗೆ ನಾಲ್ಕು ಮಹಾಕಲಶ ಕುಂಭಾಭಿಷೇಕ ನಡೆಸಲಾಯಿತು.

ಗಂಧ ಚಂದನಾಭಿಷೇಕ
ಗಂಧ ಚಂದನಾಭಿಷೇಕವಾಗುತ್ತಿದ್ದಂತೆ ಬಾಹು ಬಲಿ ಮೂರ್ತಿ ಮಾಣಿಕ್ಯದ ಮೂರ್ತಿಯಾಗಿ ಕಂಡ. ಕೆಂಪು ಚಂದನದ ಅಭಿಷೇಕವಾಗುತ್ತಿದ್ದಂತೆ ವರ್ಣನಾತೀತ ಸೌಂದರ್ಯ. ಗಂಧ ಚಂದನ ಬೆರೆತು ಬಾಹುಬಲಿಯ ಗುಂಗುರು ಕೂದಲಿನಿಂದ ಮುಖಕ್ಕಿಳಿದು, ಹರವಾದ ಎದೆಯನ್ನು ಬಳಸಿ ನಾಭಿಯಿಂದ ಮುಂದುವರಿದು, ಪಾದಗಳನ್ನು ತೋಯಿಸಿತು. ಗಂಧ ಚಂದನದ ಜತೆ ಏಲಕ್ಕಿ, ಲವಂಗ, ಪಚ್ಚೆ ಕರ್ಪೂರ, ಕುಂಕುಮ ಕೇಸರಿ, ಅರಸಿನ, ಜಾಯಿ ಕಾಯಿ ಮುಂತಾದ ಸುಗಂಧ ದ್ರವ್ಯ ಬೆರೆತಿರುತ್ತದೆ. ಜನರ ಸಾಂಸಾರಿಕ ದುಃಖಗಳನ್ನು ಗಂಧೋದಕ ನಾಶಪಡಿಸುತ್ತದೆ. ಧರ್ಮರೂಪೀ ಬಳ್ಳಿಯನ್ನು ಬೆಳೆಸುತ್ತದೆ. ಸ್ವರ್ಗ ಮತ್ತು ಮೋಕ್ಷಗಳೆಂಬ ಫಲಗಳನ್ನು ನೀಡುತ್ತದೆ ಎಂಬ ನಂಬಿಕೆ.

ಮಾಲೆ- ಮಂಗಳಾರತಿ
ಕನಕಾಭಿಷೇಕ, ಪುಷ್ಪವೃಷ್ಟಿ. ಹೀಗೆ ಬಾಹು ಬಲಿಯ ಸಾನ್ನಿಧ್ಯದಲ್ಲಿ ಅನನ್ಯ ಲೋಕದ ಸೃಷ್ಟಿ. ಭಕ್ತರಿಗೆ ಒಂದೊಂದು ಕ್ಷಣವೂ ಭಕ್ತಿ ಭಾವನೆಯ ದಿವ್ಯ ಲೋಕ. ಪುಷ್ಪದಳಗಳು ಬಾಹುಬಲಿಯನ್ನು ಮುತ್ತಿಕ್ಕುತ್ತಿದ್ದಂತೆಯೇ ಬೃಹತ್‌ ಹೂ ಮಾಲೆ ಆಲಂಕರಿಸಿತು. ಮಂಗಳಾರತಿಯಾಗುತ್ತಿದ್ದಂತೆಯೇ ಮುಗಿಲು ಮುಟ್ಟುವ ಹಾಗೆ- “ಶ್ರೀ ಭಗವಾನ್‌ ಬಾಹುಬಲಿ ಕೀ ಜೈ’ ಎಂಬ ಉದ್ಘೋಷ. ಮಹಾಮಸ್ತಕಾಭಿಷೇಕದ ಸಂಭ್ರಮವನ್ನು ಸಾಂಕೇತಿಸುವ ಹಾಗೆ ಭಕ್ತಾದಿಗಳಿಂದ ಆನಂದ ನರ್ತನ.

1008 ಕಲಶ 
ಮುಂಜಾನೆ 6.30ರಿಂದ ನಿತ್ಯವಿಧಿ ಸಹಿತ ಅಗ್ರೋದಕ‌ ಮೆರವಣಿಗೆಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಿಕರ ನೇತೃತ್ವದಲ್ಲಿ ಆರಂಭವಾದ ಶ್ರೀ ಬಾಹುಬಲಿ ಸ್ವಾಮಿಯ 1008 ಕಲಶಗಳ ಮಹಾ ಮಸ್ತಕಾಭಿಷೇಕ ಮೊದಲ ದಿನ ಸಂಪನ್ನಗೊಂಡಾಗ ಅಪರಾಹ್ನ 2.30.

ಕಾಶ್ಮೀರದ ಕೇಸರಿ, ಥೇಮ್ಸ್‌ ನ ನಂಟು
ಇಂಗ್ಲೆಂಡ್‌ನ‌ಲ್ಲಿರುವ ಜೈನ ಬಂಧುಗಳು ಅಲ್ಲಿನ ಪವಿತ್ರ ಥೇಮ್ಸ್‌ ನದಿಯ ಜಲವನ್ನು ನವೀನ್‌ ಅವರ ಮೂಲಕ ಅಭಿಷೇಕಕ್ಕೆ ಹೆಗ್ಗಡೆಯವರಿಗೆ ಹಸ್ತಾಂತರಿಸಿದರು. ಅಂತೆಯೇ ಕೇಸರಿಯನ್ನು ಕಾಶ್ಮೀರದಿಂದ ತರಲಾಗಿತ್ತು.

ಜನ ಮಂಗಲ ಕಲಶ
ಬಾಹುಬಲಿ ಸಂಗೀತ, ಧಾರ್ಮಿಕ ನೃತ್ಯ ಸಹಿತ ಶ್ರದ್ಧಾ ಕಲಶ, ದಿವ್ಯ ಕಲಶ, ರತ್ನ ಕಲಶ, ಜನ ಮಂಗಲ ಕಲಶಗಳ ಅಭಿಷೇಕ ಆರಂಭದಲ್ಲಿ ಜರಗಿತು. ಎಲ್ಲ ಅಭಿಷೇಕಗಳ ಆರಂಭವನ್ನು ಹೆಗ್ಗಡೆ ದಂಪತಿ ನೆರವೇರಿಸಿದರು.

ಮಂಗಲ ಮೂರ್ತಿ
ಕಲ್ಕಚೂರ್ಣ ಅಭಿಷೇಕದಲ್ಲಿ ಬಾಹುಬಲಿಯು ಕಂಡದ್ದು “ಮುಗಿಲ ನಡುವೆ ತೇಲಾಡುವ ಮಂಗಲ ಮೂರ್ತಿ’ ಎಂಬಂತೆ.

ರಂಗ್‌ ಮಾ ರಂಗ್‌
ರಂಗ್‌ ಮಾ ರಂಗ್‌ ಮಾ ರಂಗ್‌ ಮಾ ರೇ- ಪ್ರಭು, ಸಾರಾ ಹಿ ರಂಗ್‌ ಮಾ ರಂಗ್‌ ಗಯೊರೆ ಎಂಬ ಹಾಡು ಅಭಿಷೇಕದ ಸಂದರ್ಭದಲ್ಲಿ ಪ್ರತಿಧ್ವನಿಸಿತು.

ಸಂತೋಷದ ಆಡಿಟ್‌ ಅಸಾಧ್ಯ
ಪ್ರತಿ ಬಾರಿಯ ಮಹಾಮಸ್ತಕಾಭಿಷೇಕವು ಭಿನ್ನವಾದ ಭಾವನೆಗಳನ್ನು ನೀಡುತ್ತಿದ್ದು, ಈ ಬಾರಿ ಮಸ್ತಕಾಭಿಷೇಕಕ್ಕೆ ಹೆಚ್ಚಿನ ಪ್ರಚಾರ ಲಭಿಸಿದೆ. ಪ್ರಸ್ತುತ ದಿನಗಳಲ್ಲಿ ಕ್ಷೇತ್ರದ ಕಾರ್ಯಗಳು ಎಲ್ಲರಿಗೂ ಪ್ರೇರಣೆಯಾಗಿದ್ದು, ಧಾರ್ಮಿಕ ಕಾರ್ಯಗಳಲ್ಲಿ  ಎಲ್ಲರೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅಭಿಷೇಕ ಮಾಡುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಅತೀವ ಸಂತಸ ವ್ಯಕ್ತಪಡಿಸಿದ್ದು, ನಮ್ಮ ಸಂತೋಷವನ್ನು ಆಡಿಟ್‌ ಮಾಡಲು  ಸಾಧ್ಯವಿಲ್ಲ.
 -ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ

ಪ್ರತಿಷ್ಠೆಯ ಸಂಕಲ್ಪ ಸಾಕ್ಷಾತ್ಕಾರ
ಪಂಪನ ಆದಿ ಪುರಾಣದಲ್ಲಿ  ಬಾಹುಬಲಿಯ ಕುರಿತ ಸಾಹಿತ್ಯವನ್ನು ಓದುವಾಗ ರೋಮಾಂಚನವಾಗುತ್ತದೆ. ಭಾರತೀಯ ಎಲ್ಲ ಭಾಷೆಗಳಲ್ಲೂ ಬಾಹುಬಲಿಯ ಕುರಿತು ಸಾಹಿತ್ಯ ರಚನೆಗೊಂಡಿದೆ. ಇಂತಹ ಬಾಹುಬಲಿಯ ಮೂರ್ತಿ ಪ್ರತಿಷ್ಠಾಪನೆ ಕುರಿತ ರತ್ನವರ್ಮ ಹೆಗ್ಗಡೆ ಹಾಗೂ ರತ್ನಮ್ಮನವರ ಸಂಕಲ್ಪವನ್ನು ಡಾ| ವೀರೇಂದ್ರ ಹೆಗ್ಗಡೆ ಅವರು ಸಾಕ್ಷಾತ್ಕಾರಗೊಳಿಸಿದ್ದಾರೆ.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಶ್ರೀ ಕ್ಷೇತ್ರ ಶ್ರವಣಬೆಳಗೊಳ

ಶಾಂತಿ-ಸಮೃದ್ಧಿಗೆ ಪೂರಕ
ಪ್ರಸ್ತುತ ಧರ್ಮಸ್ಥಳದ ಭಗವಾನ್‌ ಬಾಹುಬಲಿಯ ಅಡಿಯಿಂದ ಮುಡಿಯ ವರೆಗೆ ಆಪಾದಮಸ್ತಕಾಭಿಷೇಕವನ್ನು ಕಾಣುತ್ತಿದ್ದೇವೆ. ಬಾಹುಬಲಿಯ ಆರಾಧನೆ ಸಾವಿರಾರು ವರ್ಷಗಳಿಂದ ನಡೆದು ಬಂದಿದ್ದು, ಜಗತ್ತಿನಲ್ಲಿ ಅಹಿಂಸೆ, ಶಾಂತಿ, ಸುಖ, ಸಮೃದ್ಧಿ ನೆಲೆಸಲು ಬಾಹುಬಲಿಯ ಈ ಅಭಿಷೇಕ ಪೂರಕವಾಗಲಿದೆ. ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಬಯಲು ಪ್ರದೇಶದಲ್ಲಿ ಬಾಹುಬಲಿ ತಪಸ್ಸು ಮಾಡಿದ ಪರಿಣಾಮ ಆತನನ್ನು ನಾವು ಈ ರೀತಿ ಬೆಟ್ಟ ಪ್ರದೇಶದಲ್ಲೇ ಆರಾಧನೆ ಮಾಡುತ್ತಿದ್ದೇವೆ. ಡಾ| ಹೆಗ್ಗಡೆ ಅವರು ನನ್ನ ವಿದ್ಯಾರ್ಥಿಯಾಗಿದ್ದು, ಅವರ ಮನೆತನದ ಬೆಳವಣಿಗೆ ಅಪೂರ್ವವಾಗಿದೆ.
ನಾಡೋಜ ಹಂಪಾ ನಾಗರಾಜಯ್ಯ ಹಿರಿಯ ಸಾಹಿತಿಗಳು

2ನೇ ದಿನದ ಮಹಾಮಸ್ತಕಾಭಿಷೇಕ
2ನೇ ದಿನದ ಮಹಾಮಸ್ತಕಾಭಿಷೇಕವು ಫೆ. 17ರಂದು ಬೆಳಗ್ಗೆ 8ರಿಂದ ನಿತ್ಯವಿಧಿ ಸಹಿತ ಅಗ್ರೋದಕ ಮೆರವಣಿಗೆ, ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ, ಸಂಜೆ ಧ್ವಜಪೂಜೆ, ಶ್ರೀಬಲಿ ವಿಧಾನ, ಮಹಾಮಂಗಳಾರತಿಯೊಂದಿಗೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 7ಕ್ಕೆ ಅಮೃತವರ್ಷಿಣಿ ಸಭಾಂಗಣದಲ್ಲಿ ಶಂಕರ್‌ ಮಹದೇವನ್‌, ಸಿದ್ದಾರ್ಥ ಮಹಾದೇವನ್‌, ಶಿವಂ ಮಹಾದೇವನ್‌ ಮತ್ತು ತಂಡದಿಂದ ಗಾನ ನಿನಾದ, ಅಂತಾರಾಷ್ಟ್ರೀಯ ಕಲಾವಿದ ವಿಲಾಸ್‌ ನಾಯಕ್‌ ಅವರಿಂದ ಚಿತ್ರ ಚಮತ್ಕಾರ ನಡೆಯಲಿದೆ.

No Comments

Leave A Comment