Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ಶಾಸಕರ ಅತೃಪ್ತಿ ಶಮನ; ಸಿದ್ದು ಕೈ ಮೇಲು

ಬೆಂಗಳೂರು: ಪಕ್ಷದ ನಾಯಕರ ವಿರುದಟಛಿ ಬಂಡಾಯವೆದ್ದು ಸುಮಾರು ಎರಡು ತಿಂಗಳು ಯಾವುದೇ ನಾಯಕರ ಮಾತಿಗೆ ಸ್ಪಂದಿಸದೆ ದೂರ ಉಳಿದಿದ್ದ ಕಾಂಗ್ರೆಸ್‌ನ ಅತೃಪ್ತ ಶಾಸಕರಾದ ರಮೇಶ್‌ ಜಾರಕಿಹೊಳಿ ಹಾಗೂ ಬಿ.ನಾಗೇಂದ್ರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಕ್ಷದಲ್ಲಿಯೇ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಪಕ್ಷ ಹಾಗೂ ಸರ್ಕಾರದ ಮೇಲೆ ತಮ್ಮ ಹಿಡಿತವನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹಮದ್‌ ನೇತೃತ್ವದಲ್ಲಿ ರಮೇಶ್‌ ಜಾರಕಿಹೊಳಿ ಹಾಗೂ ಬಿ.ನಾಗೇಂದ್ರ ಅವರು ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ತೆರಳಿದರು. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂಬ ಭರವಸೆಯೊಂದಿಗೆ ತಮ್ಮ ಅಸಮಾಧಾನಕ್ಕೆ ಕಾರಣ ಹಾಗೂ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದಿರುವುದಕ್ಕೆ ಸಮಜಾಯಿಷಿ ನೀಡಿದ್ದಾರೆ.

ಸಂಪುಟದಿಂದ ಕೈ ಬಿಟ್ಟ ನಂತರ ರಮೇಶ್‌ ಜಾರಕಿಹೊಳಿ ಅವರು ನಾಗೇಂದ್ರ ಜತೆ ಸೇರಿ ಮುಂಬೈ ಸೇರಿದ್ದರು. ಅವರ ಅಸಮಾಧಾನವನ್ನೇ ಬಿಜೆಪಿಯವರು ದಾಳವಾಗಿ ಬಳಸಿಕೊಂಡು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಇಪ್ಪತ್ತಕ್ಕೂ ಹೆಚ್ಚು ಶಾಸಕರನ್ನು ಸಂಪರ್ಕಿಸಿ ಬಿಜೆಪಿ ಸೇರುವಂತೆ ಆಮಿಷ ಒಡ್ಡಿ, ಆಪರೇಷನ್‌ ಕಮಲಕ್ಕೆ ಪ್ರಯತ್ನ ನಡೆಸಿದ್ದರು.ಆದರೆ, ಯಡಿಯೂರಪ್ಪ ಅವರ ಆಡಿಯೋ ಪ್ರಕರಣದ ನಂತರ ಬದಲಾದ ಪರಿಸ್ಥಿತಿಯಲ್ಲಿ ಅತೃಪ್ತರು ಅಧಿವೇಶನಕ್ಕೆ ಆಗಮಿಸಿ, ಪಕ್ಷಾಂತರ ಕಾಯ್ದೆಯ ತೂಗುಗತ್ತಿಯಿಂದ ಪಾರಾಗಿದ್ದರು. ಶುಕ್ರವಾರ ಸಚಿವ ಜಮೀರ್‌ ಅಹಮದ್‌ ಜತೆ ಒಂದು ಸುತ್ತು ಮಾತುಕತೆ ನಡೆಸಿದ ನಂತರ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿ ಪಕ್ಷ ತೊರೆಯುವುದಿಲ್ಲ ಎಂದು ಭರವಸೆ ನೀಡಿದರು.

ಸಿದ್ದರಾಮಯ್ಯ ಕೈ ಮೇಲು: ಪಕ್ಷದಲ್ಲಿ ಉಂಟಾಗಿದ್ದ ಬಿರುಗಾಳಿಯನ್ನು ತಣ್ಣಗಾಗಿಸಿ ಅತೃಪ್ತರನ್ನು ಶಾಂತಗೊಳಿಸುವಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೆ, ಬಜೆಟ್‌ ಅಧಿವೇಶನದಲ್ಲಿ ಸರ್ಕಾರಕ್ಕೆ ಇದ್ದ ಅವಿಶ್ವಾಸ ನಿರ್ಣಯದ ಭೀತಿಯಿಂದಲೂ ಪಾರು ಮಾಡಿ ಮತ್ತೆ ಸರ್ಕಾರವನ್ನು ತಮ್ಮ ಹಿಡಿತಕ್ಕೆ ಅವರು ತೆಗೆದುಕೊಂಡಿದ್ದಾರೆ ಎಂಬಮಾತುಗಳು ಕೇಳಿ ಬರುತ್ತಿವೆ. ಬಜೆಟ್‌ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಶಾಸಕಾಂಗ ಪಕ್ಷದ ವತಿಯಿಂದ ವಿಪ್‌ ನೀಡಿ, ಖುದ್ದು ಸಚೇತನಾ ಪತ್ರ ಬರೆದಿದ್ದರು. ಅಧಿವೇಶನಕ್ಕೆ ಬಂದು ಅಚ್ಚರಿ ಮೂಡಿಸಿದ್ದ ಅತೃಪ್ತರು ನಂತರ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿತ್ತು.

ಬದಲಾದ ಲೆಕ್ಕಾಚಾರ: ಆದರೆ, ಆಡಿಯೋ ಪ್ರಕರಣದ ನಂತರ ಅತೃಪ್ತ ಶಾಸಕರ ಸಂಖ್ಯೆ 11 ರಿಂದ ನಾಲ್ಕಕ್ಕೆ ಇಳಿದಿದ್ದರಿಂದ ಅವರಿಂದ ರಾಜೀನಾಮೆ ಕೊಡಿಸಿದರೆ ಪ್ರಯೋಜನವಿಲ್ಲ ಎಂದು ಬಿಜೆಪಿ ಕೈ ಚೆಲ್ಲಿತು ಎನ್ನಲಾಗಿದೆ. ಹೀಗಾಗಿ, ನಾಲ್ವರು ತಮ್ಮ ಬೇಡಿಕೆ ಈಡೇರಿಸುವ ಭರವಸೆ ಪಡೆದು ಪಕ್ಷದ ತೆಕ್ಕೆಗೆ ಬಂದಿದ್ದಾರೆ.

ದೂರು ಜೀವಂತ
ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಶಾಸಕ ಸ್ಥಾನದಿಂದ ಉಚ್ಚಾಟಿಸುವಂತೆ ಸ್ಪೀಕರ್‌ ರಮೇಶ್‌ ಕುಮಾರ್‌ಗೆ ನೀಡಿರುವ ದೂರು ಜೀವಂತವಾಗಿಡಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದ್ದಾರೆ. ಅತೃಪ್ತರು ಮತ್ತೆ ಬಂಡಾಯ ಹಾಗೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದರೆ ಸ್ಪೀಕರ್‌ ಮೂಲಕ ನೋಟಿಸ್‌ ನೀಡಿ ಮತ್ತೆ ಸಂಕಷ್ಟಕ್ಕೆ ಸಿಲುಕಿಸುವ ಅಸ್ತ್ರ ವನ್ನು ಬಳಸುವುದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.

No Comments

Leave A Comment