Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

‘ನಂಗೆ ಅವರು ಬೇಕು’: ಮಂಡ್ಯದ ಹುತಾತ್ಮ ಯೋಧ ಗುರುವಿನ ಪತ್ನಿಯ ಆಕ್ರಂದನ

ಮಂಡ್ಯ: ಜಮ್ಮುವಿನ ಪುಲ್ವಾಮದಲ್ಲಿ ಗುರುವಾರ ಜೈಶ್ ಉಗ್ರರ ಅಟ್ಟಹಾಸಕ್ಕೆ ಒಳಗಾಗಿ ಹುತಾತ್ಮರಾದ 42 ಯೋಧರ ಪೈಕಿ ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ವೀರ ಯೋಧ ಗುರು ಎಚ್. ಅವರೂ ಸೇರಿದ್ದಾರೆ. ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧ ಇವರು. ಯೋಧ ಗುರು ಅವರಿಗೆ 10 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಗುಡಿಗೆರೆ ಕಾಲನಿಯ ಕಲಾವತಿ ಅವರನ್ನು ಯೋಧ ಗರು ಅವರು ವಿವಾಹವಾಗಿದ್ದರು. ಉಗ್ರ ದಾಳಿಯಲ್ಲಿ ಯೋಧ ಗುರು ಮೃತಪಟ್ಟ ಸುದ್ದಿ ಇವರ ಮನೆಗೆ ಮುಟ್ಟುತ್ತಿದ್ದಂತೆ ಅವರ ಪತ್ನಿ ತೀವ್ರ ಆಘಾತಕ್ಕೊಳಗಾದರು. ಅವರ ರೋದನ ಅಲ್ಲಿದ್ದವರ ಮನಕಲುಕುವಂತಿತ್ತು. ‘ಅವರು ಕಾಲ್ ಮಾಡಿದ ಸಂದರ್ಭದಲ್ಲಿ ನನಗೆ ಮಾತನಾಡಲು ಆಗಲಿಲ್ಲ ; ಆದರೆ ಈಗ ಮಾತನಾಡೋಣ ಅಂದ್ರೆ ಅವರೇ ಇಲ್ಲ, ನನಗೆ ಅವರು ಬೇಕು..’ ಎಂದು ರೋದಿಸುತ್ತಾ ವೀರಯೋಧನ ಪತ್ನಿ ಹೇಳುತ್ತಿದ್ದರೆ ಅಲ್ಲಿದ್ದವರ ದುಃಖದ ಕಟ್ಟೆ ಒಡೆಯುತ್ತಿತ್ತು.

ವಿಪರ್ಯಾಸವೆಂದರೆ ಯೋಧ ಗುರು ಅವರು ಗುರುವಾರ ಬೆಳಿಗ್ಗೆ ತಮ್ಮ ಪತ್ನಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ ಪತ್ನಿ ಅವರು ಮನೆ ಕೆಲಸದಲ್ಲಿದ್ದ ಕಾರಣ ತನ್ನ ಪತಿಯೊಂದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಸಂಜೆ ಕಲಾವತಿ ಅವರು ಮರಳಿ ಪತಿಗೆ ಕರೆ ಮಾಡಿದ ಸಂದರ್ಭದಲ್ಲಿ ಆ ಕಡೆಯಿಂದ ಯಾವುದೇ ಪ್ರತ್ಯುತ್ತರ ಸಿಕ್ಕಿರಲಿಲ್ಲ. ಸಂಜೆಯ ಹೊತ್ತಿಗೆ ಪುಲ್ವಾಮದಲ್ಲಿ ಸೇನಾ ವಾಹನದ ಮೇಲೆ ಉಗ್ರದಾಳಿಯಾಗಿದೆ ಎಂಬ ಸುದ್ದಿ ಸಿಕ್ಕಿತ್ತು, ರಾತ್ರಿ ಹೊತ್ತಿಗೆ ಯೋಧ ಗುರು ಹುತಾತ್ಮರಾಗಿರುವ ಸುದ್ದಿಯೂ ಹೊರಬಿತ್ತು.

ತಮ್ಮ ಮಗ ಮತ್ತು ಸೊಸೆಗಾಗಿ ಯೋಧ ಗುರು ಅವರ ತಂದೆ ಹೊಸ ಮನೆಯೊಂದನ್ನು ಕಟ್ಟಿಸಿದ್ದರು ಮತ್ತು ಇತ್ತೀಚೆಗೆ ತಾನೆ ಅದರ ಗೃಹ ಪ್ರವೇಶವೂ ನಡೆದಿತ್ತು. ಆದರೆ ನೂತನ ಮನೆಯಲ್ಲಿ ಸಂಸಾರ ಮಾಡುವ ಅವರ ಆಸೆ ಕೊನೆಗೂ ಈಡೇರಲೇ ಇಲ್ಲ. ಯೋಧ ಗುರು ಅವರು ರಜೆ ಮುಗಿಸಿ ಫೆಬ್ರವರಿ 10ರಂದು ಮರಳಿದ್ದರು ಮತ್ತು ಫೆಬ್ರವರಿ 15 ಗುರುವಾರದಂದು ಇವರು ಮರಳಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಸಂದರ್ಭದಲ್ಲೇ ಉಗ್ರದಾಳಿಗೆ ಪ್ರಾಣಾರ್ಪಣೆ ಮಾಡಬೇಕಾಗಿ ಬಂದಿದ್ದು ದುರ್ವಿಧಿಯೇ ಸರಿ.

No Comments

Leave A Comment