Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಹಾಸನ: ಕೆಸರಿನಲ್ಲಿ ಸಿಲುಕಿ ರಕ್ಷಿಸಲ್ಪಟ್ಟಿದ್ದ ಆನೆ ಚಿಕಿತ್ಸೆ ಫಲಿಸದೇ ಸಾವು

ಹಾಸನ: ಹಾಸನದಲ್ಲಿ ಕೆಸರಿನಲ್ಲಿ ಸಿಲುಕಿ ಕಾಲು ಮುರಿದುಕೊಂಡು ಬಳಿಕ ರಕ್ಷಿಸಲ್ಪಟ್ಟಿದ್ದ ಕಾಡಾನೆ ಗುರುವಾರ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಡಗರಹಳ್ಳಿ ಗ್ರಾಮದ ಸಮೀಪ ಕೆಸರಿನಲ್ಲಿ ಸಿಲುಕಿ ನಿತ್ರಾಣಗೊಂಡಿದ್ದ ಕಾಡಾನೆ ಗುರುವಾರ ಮೃತಪಟ್ಟಿದೆ. ಆನೆಯೊಂದಿಗೆ ಇದ್ದ ಅದರ ಮರಿ ಆನೆ ಇದೀಗ ಅನಾಥವಾಗಿದೆ. 

ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾಡಾನೆಯನ್ನು 2 ದಿನಗಳ ಹಿಂದೆಯಷ್ಟೇ ರಕ್ಷಣೆ ಮಾಡಲಾಗಿತ್ತು. ಕೆಸರಿನಲ್ಲಿ ಸಿಲುಕಿದ ಪರಿಣಾಮ ಆನೆಯ ಕಾಲು ಮುರಿದಿತ್ತು. ಹೀಗಾಗಿ ಆನೆಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ವನ್ಯಜೀವಿ ವೈದ್ಯರು ಪರದಾಡಿದ್ದರು. ಅದೇ ಸ್ಥಳದಲ್ಲೇ ಆನೆಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ವೈದ್ಯರು ಆನೆಯನ್ನು ಶಿಬಿರಕ್ಕೆ ರವಾನೆ ಮಾಡಿ ಚಿಕಿತ್ಸೆ ಮುಂದುವರಿಸಲು ನಿರ್ಧರಿಸಿದ್ದರು. ಆದರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲು ಅನುಮತಿ ಸಿಗದಿದ್ದರಿಂದ ಅಗತ್ಯ ಚಿಕಿತ್ಸೆ ದೊರಕದೆ ಆನೆ ಮೃತಪಟ್ಟಿದೆ ಎನ್ನಲಾಗಿದೆ.
ಈ ಮೂಲಕ ಸತತ ಆರು ದಿನಗಳ ನರಳಾಟದ ಬಳಿಕ ಮೂಕಪ್ರಾಣಿ ಪ್ರಾಣಬಿಟ್ಟಿದೆ.  6 ತಿಂಗಳ ಮರಿಯ ರೋದನ ಮುಗಿಲು ಮುಟ್ಟಿದ್ದು, ನೆರೆದವರ ಮನಕಲಕುವಂತಿದೆ.
No Comments

Leave A Comment