Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

ರಾಮನಗರದಲ್ಲಿ ಬಾಂಬ್! ಬಳ್ಳಾರಿಯಲ್ಲಿ ಡಿಕೆಶಿ ಸೈಲೆಂಟ್ ಸುದ್ದಿಗೋಷ್ಠಿ

ಬಳ್ಳಾರಿ;ಜಿಲ್ಲೆಯಲ್ಲಿ ಯಾರೂ ಭಯದಿಂದ ಜೀವನ ನಡೆಸಬಾರದು. ಬಳ್ಳಾರಿಯಲ್ಲಿ ಅಭಿವೃದ್ಧಿ ರಾಜಕಾರಣಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ ಹೊರತು, ಸೇಡಿನ ರಾಜಕಾರಣಕ್ಕಲ್ಲ. ಜಿಲ್ಲೆಯ ಅಭಿವೃದ್ಧಿಗೆ ನಾವು ಬದ್ಧ. ಬಳ್ಳಾರಿ ಜನತೆ ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯ ಮಾಡುತ್ತೇವೆ…ಇದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಭರವಸೆಯ ಮಾತುಗಳು.

ಗುರುವಾರ ನಿಗದಿಯಂತೆ ಡಿಕೆಶಿ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಸಂದರ್ಭದಲ್ಲಿ . ಬಳ್ಳಾರಿ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ನಾನು ಯಾವುದೇ ರೀತಿಯ ಬಾಂಬ್ ಹಾಕುತ್ತೇನೆ ಎಂದು ಹೇಳಿಲ್ಲ, ಅಭಿವೃದ್ದಿಯಷ್ಟೇ ನಮ್ಮ ಗುರಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ರೆಡ್ಡಿ ಸಹೋದರರನ್ನು ಟೀಕಿಸಿದ್ದಾರೆ.

ಇದನ್ನೂ ಓದಿ:ಡಿಕೆಶಿ ಚೆಕ್‌,ಬಿಜೆಪಿಗೆ ಶಾಕ್‌;ರಾಮನಗರದಲ್ಲಿ ಹಿಂದೆ ಸರಿದ ಅಭ್ಯರ್ಥಿ!

ಬಳ್ಳಾರಿ , ಹೊಸಪೇಟೆ ಎಲ್ಲಿ ಹೋದರು ಧೂಳು, ಬೂದಿ ಇದೆ. ಜಿಲ್ಲೆಯಲ್ಲಿ ಹಸಿರಿಗಾಗಿ ಕಾರ್ಯಕ್ರಮ ರೂಪಿಸಬೇಕಿದೆ. ಈ ಜಿಲ್ಲೆಯ ನೀರು ಎಲ್ಲರಿಗೂ ಸಿಗುತ್ತಿಲ್ಲ. ಉತ್ತಮ ನೀರು ಸಿಕ್ಕರೂ ಕುಡಿಯಲು ಸಿಗುತ್ತಿಲ್ಲ. ನೀರು ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡಲು ಮೊದಲ ಆದ್ಯತೆ ಸಿಗಬೇಕು. ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿದ್ದೇನೆ. ಜಿಲ್ಲೆಯಲ್ಲಿ ಮೊದಲು ಉತ್ತಮ ಶಿಕ್ಷಣಕ್ಕೆ ಒತ್ತು ನೀಡಬೇಕು. ನಾವು ನುಡಿದಂತೆ ನಡೆದಿದ್ದೇವೆ. ಹೀಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ವಿಜಯನಗರದ ವೈಭವ ಮರುಕಳಿಸಬೇಕು ಎಂದು ಹೇಳಿದರು.

ಬಳ್ಳಾರಿಯಲ್ಲಿನ ಇಸ್ಪೀಟ್ ದಂಧೆಗೆ ಕಡಿವಾಣ ಹಾಕುತ್ತೇವೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಯಾರೇ ಆಗಲಿ, ಕಾನೂನು ವ್ಯಾಪ್ತಿ ಮೀರಿ ನಡೆದರೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಬಳ್ಳಾರಿಯಲ್ಲಿ ಭಯದ ವಾತಾವರಣ ಇರಬಾರದು. ಈ ನೆಲೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಅದನ್ನು ಘೋಷಿಸುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಬಳ್ಳಾರಿ ಅಭಿವೃದ್ಧಿ ಕುರಿತ ಯೋಜನೆಗೆ ಅನುಮತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಬಳ್ಳಾರಿ ಜಿಲ್ಲೆ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಅಭ್ಯರ್ಥಿ ಉಗ್ರಪ್ಪನವರಿಗೆ ಮತ ಚಲಾಯಿಸಿ ಎಂದು ಈ ಸಂದರ್ಭದಲ್ಲಿ ವಿನಂತಿಸಿಕೊಂಡರು.

ನಾನು ಬಾಂಬ್ ಹಾಕುತ್ತೇನೆ ಎಂದು ಹೇಳಿಲ್ಲ!

ನವೆಂಬರ್ ಒಂದರಂದು ಕಾದು ನೋಡಿ, ಬಾಂಬ್ ಹಾಕುತ್ತೇನೆ ಎಂದು ಹೇಳಿದ್ದೀರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನು ಬಾಂಬ್ ಹಾಕುತ್ತೇನೆ ಎಂದು ಹೇಳಿಲ್ಲ, ಬಾಂಬ್ ಹಾಕುವವರು ನಾವಲ್ಲ ಎಂದು ಡಿಕೆಶಿ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. ಏತನ್ಮಧ್ಯೆ ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಕಣದಿಂದ ಹಿಂದೆ ಸರಿಯುವ ಮೂಲಕ ದಿಢೀರ್ ಶಾಕ್ ನೀಡಿದ್ದರು. ಇದರಿಂದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಅವರ ಹಾದಿ ಸುಗಮವಾದಂತಾಗಿದೆ. ಇದು ಇಂದು ನಡೆದ ಬೆಳವಣಿಗೆ. ಇದರ ಹಿಂದಿನ ಮಾಸ್ಟರ್ ಮೈಂಡ್ ಡಿಕೆಶಿ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿಗೆ ಸರಿಯಾದ ಬಾಂಬ್ ಇಟ್ಟ ಡಿಕೆಶಿ, ಬಳ್ಳಾರಿಯಲ್ಲಿ ತಣ್ಣಗೆ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ!

No Comments

Leave A Comment