Log In
BREAKING NEWS >
ವಿಶ್ವಯೋಗ ದಿನಾಚರಣೆಯ ಅ೦ಗವಾಗಿ ಶುಕ್ರವಾರದ೦ದು ವಿವಿದೆಡೆಯಲ್ಲಿ ಸ್ಥಳೀಯ ಸ೦ಘ-ಸ೦ಸ್ಥೆಯ ಆಶ್ರಯದಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ಜರಗಲಿದೆ.....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ನಾಗರಿಕರ ನೆರವಿಗಿದೆ “ಪಿಂಕ್‌ ಹೊಯ್ಸಳ’

ಘಟನೆ 1- ಎಲೆಕ್ಟ್ರಾನಿಕ್‌ ಸಿಟಿ: ಆಗ ತಾನೇ ಹುಟ್ಟಿದ ಹಸುಳೆ. ಜನ್ಮ ಕೊಟ್ಟ ತಾಯಿ ಆ ಮಗುವನ್ನು ದಾರಿ ಬದಿಯ ಪೊದೆಯೊಂದರಲ್ಲಿ ಎಸೆದು ಹೋಗಿದ್ದರು. ಅಪರಿಚಿತ ವ್ಯಕ್ತಿ ಮೂಲಕ ಮಾಹಿತಿ ಪಡೆದ ಪಿಂಕ್‌ ಹೊಯ್ಸಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಆ ಮಗುವನ್ನು ರಕ್ಷಣೆ ಮಾಡಿದರು. ಆ ಮುದ್ದಾದ ಕಂದನ ಹಸಿವಿನ ಆಕ್ರಂದನ ಕೇಳಿದ ಪಿಂಕ್‌ ಹೊಯ್ಸಳ ಸಿಬ್ಬಂದಿ ತನ್ನ ಎದೆ ಹಾಲುಣಿಸಿ ಮಾತೃ ಪ್ರೇಮ ಮೆರೆದಿದ್ದರು.

ಘಟನೆ 2 – ಜಾಲಹಳ್ಳಿ: ಆಗ ತಾನೇ ಕೆಲಸ ಮುಗಿಸಿ ಮಹಿಳೆಯೊಬ್ಬರು ಮನೆ ಕಡೆ ಹೋಗಲು ಜಾಲಹಳ್ಳಿ ವೃತ್ತದಲ್ಲಿ ರಸ್ತೆ ದಾಟುತ್ತಿದ್ದರು. ಹಿಂದೆ ಬಂದ ವ್ಯಕ್ತಿಯೊಬ್ಬ ಆಕೆಯ ಹಿಂಬದಿ ಮುಟ್ಟಿ ಅಸಭ್ಯವಾಗಿ ವರ್ತಿಸಿದಲ್ಲದೆ, ಇದನ್ನು ಪ್ರಶ್ನಿಸಿದಕ್ಕೆ ಆಕೆ ಮೇಲೆ ಹಲ್ಲೆ ಕೂಡ ನಡೆಸಿದ್ದ. ಇದರಿಂದ ಕೋಪಗೊಂಡ ಆಕೆ ಚಪ್ಪಲಿಯಿಂದ ಹೊಡೆದಳು. ಆಕ್ರೋಶಗೊಂಡ ಆರೋಪಿ, ಆಕೆಗೆ ಇನ್ನಷ್ಟು ಥಳಿಸಿದ. ಕೂಡಲೇ ಮಹಿಳೆ ನಮ್ಮ-100ಕ್ಕೆ ಕರೆ ಮಾಡಿ ದೂರು ನೀಡಿದ್ದರು. ಬಳಿಕ ಅಲ್ಲೇ ಇದ್ದ ಸಂಚಾರ ಪೊಲೀಸ್‌ ಕಾನ್‌ಸ್ಟೆಬಲ್‌ಗ‌ೂ ದೂರು ನೀಡಿದ್ದರು. ಪೊಲೀಸ್‌ ಸಿಬ್ಬಂದಿ ಬರುತ್ತಿದ್ದಂತೆ ಆತ ಪರಾರಿಯಾಗಲು ಯತ್ನಿಸಿದ್ದ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪಿಂಕ್‌ ಹೊಯ್ಸಳ ಸಿಬ್ಬಂದಿ ಆರೋಪಿಯನ್ನು ಸೆರೆ ಹಿಡಿದರು.

ಘಟನೆ 3 – ಬಸವನಗುಡಿ: ಬಸ್‌ ನಿಲ್ದಾಣದಲ್ಲಿ ಯುವಕನೊಬ್ಬ ಯುವತಿಯ ಕೈ ಹಿಡಿದುಕೊಂಡು, ತನ್ನನ್ನು ಪ್ರೀತಿಸುವಂತೆ ಗಲಾಟೆ ಮಾಡುತ್ತಿದ್ದ. ಅದನ್ನು ನೋಡಿದ ಸ್ಥಳೀಯರೊಬ್ಬರು ಫೋಟೋ ಸಹಿತ “ಸುರಕ್ಷಾ’ ಆ್ಯಪ್‌ ಮೂಲಕ ದೂರು ನೀಡಿದ್ದರು. ಈ ಮಾಹಿತಿ ಪಡೆದ ಬಸವನಗುಡಿ ಠಾಣೆಯ ಪಿಂಕ್‌ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿದರು.

ಘಟನೆ 4 – ಮಹಾತ್ಮ ಗಾಂಧಿ ರಸ್ತೆ: ತಡರಾತ್ರಿ 2 ಗಂಟೆ ಸುಮಾರಿಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಮಹಿಳೆ ಒಬ್ಬರೇ ನಿಂತಿದ್ದರು. ಕ್ಯಾಬ್‌ ಸಿಗುತ್ತಿಲ್ಲ. ಸುರಕ್ಷಾ ಆ್ಯಪ್‌ನಲ್ಲಿ ಆಕೆ, ನನಗೆ ಭಯ ಆಗುತ್ತಿದೆ. ಕ್ಯಾಬ್‌ಗಳು ಸಿಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿದರು. ಕೇವಲ ಆರು ನಿಮಿಷದಲ್ಲಿ ಪಿಂಕ್‌ ಹೊಯ್ಸಳ ಪ್ರತ್ಯಕ್ಷ! ಬಳಿಕ ಪೊಲೀಸರೇ ಮಹಿಳೆಯನ್ನು ಮನೆಗೆ ಬಿಟ್ಟು ಬಂದರು.

ಇದೆಲ್ಲ, ಯಾವುದೋ ಸಿನಿಮಾ ದೃಶ್ಯಗಳಲ್ಲ. ಬೆಂಗಳೂರು ಪೊಲೀಸರು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ನಿಯೋಜಿಸಿರುವ “ಪಿಂಕ್‌ ಹೊಯ್ಸಳ’ ಸಿಬ್ಬಂದಿ ನಿರ್ವಹಿಸಿರುವ ಯಶಸ್ವಿ ಕಾರ್ಯಗಳು. ನಗರ ಪೊಲೀಸ್‌ ಇಲಾಖೆ, “ನಮ್ಮ-100′ ಮತ್ತು “ಸುರಕ್ಷಾ’ ಆ್ಯಪ್‌ಗ್ಳ ಮೂಲಕ ಬರುವ ದೂರುಗಳನ್ನಾಧರಿಸಿ ಕೇವಲ 9 ನಿಮಿಷಗಳ ಒಳಗೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿದೆ. ಜತೆಗೆ ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳ ಮೂಲಕ ಬರುವ ದೂರುಗಳ ಆಧಾರದಲ್ಲೂ ಕ್ರಮ ಕೈಗೊಳ್ಳುತ್ತಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯ ಪ್ರತಿಯೊಂದು ಠಾಣೆ ವ್ಯಾಪ್ತಿಯಲ್ಲೂ ಒಂದು ಪಿಂಕ್‌ ಹೊಯ್ಸಳ ಕಾರ್ಯನಿರ್ವಹಿಸುತ್ತಿದೆ. ಪಾಳಿ ಆಧಾರದಲ್ಲಿ ಸಿಬ್ಬಂದಿ ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಾರೆ. ಅಲ್ಲದೆ, ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಸಂಚರಿಸುವ ಕಾರ್ಖಾನೆ, ಶಾಲೆ, ಕಾಲೇಜು ಬಳಿ ಪಿಂಕ್‌ ಹೊಯ್ಸಳ ವಾಹನ ನಿಯೋಜಿಸಲಾಗುತ್ತದೆ. ಈ ವಾಹನಗಳಲ್ಲಿ ಇಬ್ಬರು ಮಹಿಳಾ ಸಿಬ್ಬಂದಿ, ಪುರುಷ ಚಾಲಕ ಇರುತ್ತಾರೆ. ಜತೆಗೆ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಕೂಡ ಕೊಡಲಾಗಿದೆ.

ಪಿಂಕ್‌ ಹೊಯ್ಸಳ ಕಾರ್ಯನಿರ್ವಹಣೆ ಹೇಗೆ?: “ನಮ್ಮ-100′ ಮತ್ತು “ಸುರಕ್ಷಾ’ ಆ್ಯಪ್‌ ಮೂಲಕ ಬರುವ ದೂರುಗಳನ್ನು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಕಮಾಂಡೊ ಸೆಂಟರ್‌ ಸಿಬ್ಬಂದಿ ಸ್ವೀಕರಿಸುತ್ತಾರೆ. ತುರ್ತುಸ್ಥಿತಿಯಲ್ಲಿರುವ ಮಹಿಳೆ, ಮಕ್ಕಳ ಸ್ಥಳವನ್ನು “ಲೈವ್‌ ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ’ ಹಾಗೂ ಜಿಪಿಎಸ್‌ ಮೂಲಕ ಗುರುತಿಸುತ್ತಾರೆ.

ನಂತರ ದೂರುದಾರರು ನೋಂದಾಯಿಸಿರುವ ಸ್ನೇಹಿತ ಅಥವಾ ಸಂಬಂಧಿಕರ ಮೊಬೈಲ್‌ ಸಂಖ್ಯೆಗೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುತ್ತಾರೆ. ಅಲ್ಲದೆ, ಹತ್ತಿರದ ಪಿಂಕ್‌ ಹೊಯ್ಸಳ ಸಿಬ್ಬಂದಿಗೂ ಮಾಹಿತಿ ರವಾನಿಸಲಾಗುತ್ತದೆ. ಕೂಡಲೇ ಪಿಂಕ್‌ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಂಕಷ್ಟದಲ್ಲಿ ಸಿಲುಕಿದವರನ್ನು ರಕ್ಷಿಸುತ್ತಾರೆ. ಅಲ್ಲದೆ, ಮೆರವಣಿಗೆ, ಹಬ್ಬದ ದಿನಗಳಲ್ಲಿ ದೇವಾಲಯ ಬಳಿ ಪಿಂಕ್‌ ಹೊಯ್ಸಳ ಪಡೆಯನ್ನು ನಿಯೋಜನೆ ಮಾಡಲಾಗುತ್ತದೆ.

ಮಹಿಳಾ ಸಿಬ್ಬಂದಿಗೇ ಸುರಕ್ಷತೆ ಇಲ್ಲ: ಪಿಂಕ್‌ ಹೊಯ್ಸಳದಲ್ಲಿ ಕರ್ತವ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗೇ ರಕ್ಷಣೆ ಇಲ್ಲ. ಕಳೆದ ಡಿಸೆಂಬರ್‌ನಲ್ಲಿ ವೈಯಾಲಿಕಾವಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪಿಂಕ್‌ ಹೊಯ್ಸಳದ ಇಬ್ಬರು ಮಹಿಳಾ ಸಿಬ್ಬಂದಿಯ ಜತೆ ಮದ್ಯ ವ್ಯಸನಿಗಳು, ಅಸಭ್ಯವಾಗಿ ವರ್ತಿಸಿದ್ದರು. ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.

63,071 ಕರೆಗಳು: ಕಳೆದ ಆರು ತಿಂಗಳಲ್ಲಿ ಪಿಂಕ್‌ ಹೊಯ್ಸಳಗೆ ಸಂಬಂಧಿಸಿದಂತೆ ಸುಮಾರು 63,071 ಕರೆಗಳು ಬಂದಿದ್ದು, ಎಲ್ಲ ದೂರುಗಳಿಗೆ ತಕ್ಷಣದಲ್ಲೇ ಸ್ಪಂದಿಸಲಾಗಿದೆ. ಶಾಲಾ, ಕಾಲೇಜು ಹಾಗೂ ಸಾಫ್ಟ್ವೇರ್‌ ಕಂಪನಿಗಳು, ಬಸ್‌ ನಿಲ್ದಾಣ ಹಾಗೂ ಜನನಿಬಿಡ ಪ್ರದೇಶಗಳಿಂದಲೇ ಹೆಚ್ಚು ಕರೆಗಳು ಬರುತ್ತವೆ. ರಾತ್ರಿ ವೇಳೆಯೂ ಹೆಚ್ಚು ಕರೆಗಳು ಬರುತ್ತಿವೆ. ಪ್ರತಿ ನಿತ್ಯ ಕನಿಷ್ಠ 300ಕ್ಕೂ ಹೆಚ್ಚು ಕರೆಗಳು ಪಿಂಕ್‌ ಹೊಯ್ಸಳ ಕುರಿತಾಗಿಯೇ ಬರುತ್ತವೆ ಎಂದು ಕಮಾಂಡೊ ಸೆಂಟರ್‌ ಅಧಿಕಾರಿಗಳು ಮಾಹತಿ ನೀಡಿದ್ದಾರೆ.

ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ದೂರುಗಳ ಬಗ್ಗೆ ಕ್ರಮಕೈಗೊಳ್ಳಲು ಪಿಂಕ್‌ ಹೊಯ್ಸಳ ನಿಯೋಜಿಸಲಾಗಿದೆ. ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಪಿಂಕ್‌ ಹೊಯ್ಸಳ ಗಸ್ತು ತಿರುಗಲಿದ್ದು, ಸಿಬ್ಬಂದಿ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳಿರುತ್ತವೆ. ನಮ್ಮ-100 ಮತ್ತು ಸುರಕ್ಷಾ ಆ್ಯಪ್‌ ಮೂಲಕ ಬರುವ ದೂರುಗಳನ್ನಾಧರಿಸಿ ಕೇವಲ 9 ನಿಮಿಷಗಳಲ್ಲಿ ಪಿಂಕ್‌ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋಗಿ ಕ್ರಮಕೈಗೊಳ್ಳುತ್ತಾರೆ.
-ಟಿ.ಸುನಿಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ

ನಮ್ಮ-100 ಮೂಲಕ ಬರುವ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿ ದೂರುಗಳ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಿಂಕ್‌ ಹೊಯ್ಸಳ ಸಿಬ್ಬಂದಿಗೆ ರವಾನಿಸಲಾಗುತ್ತದೆ. ಮಹಿಳೆಯರಿಗೆ ಸಂಬಂಧಿಸಿದ ಕರೆಗಳನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸಲಿದ್ದಾರೆ. ಪಿಂಕ್‌ ಹೊಯ್ಸಳ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
-ಕೆ.ಅಜಯ್‌ ಕುಮಾರ್‌, ಕಂಟ್ರೋಲ್‌ ರೂಂ ಪ್ರಭಾರ ಡಿಸಿಪಿ

No Comments

Leave A Comment