Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

ದೇಶಾದ್ಯಂತ ಸ್ಫೋಟ ಸಂಚು; ಪಾಕ್‌, ಬಾಂಗ್ಲಾಗಳ ಉಗ್ರ ಸಾಥ್‌

ಬೆಂಗಳೂರು: ಕೇರಳದ ಕಣ್ಣೂರಿನಲ್ಲಿ ಬಂಧಿತನಾಗಿರುವ  ಪಿ.ಎ. ಸಲೀಂ ಅಲಿಯಾಸ್‌ ರೈಸಲ್‌ಗ‌ೂ ಪಾಕಿಸ್ತಾನದಲ್ಲಿ ನೆಲೆಸಿರುವ ಲಷ್ಕರೆ-ಇ-ತೊಯ್ಬಾ ಸಂಘಟನೆ ಕಮಾಂಡರ್‌ ವಲೀ ಅಲಿಯಾಸ್‌ ರೆಹಾನ್‌ ಅಲಿಯಾಸ್‌ ರಷೀದ್‌ ಓಬೇದುಲ್ಲಾ  ಮತ್ತು ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯ ಮುಖ್ಯಸ್ಥ ರಿಯಾಜ್‌ ಭಟ್ಕಳ್‌ ಜತೆ ನೇರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ಮತ್ತು ದೇಶದ ಹಲವು ಪೊಲೀಸರಿಗೆ ಬೇಕಾಗಿರುವ ಏಳು ಉಗ್ರಗಾಮಿಗಳು ದೇಶಾದ್ಯಂತ ಮತ್ತೆ ಭಯೋತ್ಪಾದನಾ ಚಟುವಟಿಕೆ ನಡೆಸಲು ಸಂಚು ನಡೆಸಿರುವ ಸ್ಫೋಟಕ ಮಾಹಿತಿ ಸಲೀಮ್‌ ಬಂಧನದಿಂದ ಧೃಡಪಟ್ಟಿದೆ. ಈ ಎಲ್ಲ ಏಳು ಮಂದಿ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟಗಳಿಗೆ ಸಹಕರಿಸಿದವರಾಗಿದ್ದು, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಲ್ಲಿ ಉಗ್ರಗಾಮಿ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ಸಲೀಂ ಕೆಲ ಮಾಹಿತಿ ನೀಡಿದ್ದು, ಮುಂದಿನ ಕೆಲ ದಿನಗಳಲ್ಲಿ ಕರ್ನಾಟಕ ಹಾಗೂ ಕೇರಳದಲ್ಲಿ ಸಂಘಟನೆಯನ್ನು ಚುರುಕುಗೊಳಿಸುವ ಜತೆಗೆ ಕೆಲವೆಡೆ ಸ್ಫೋಟದಂಥ ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ ನಡೆಸಲು ಎಲ್‌ಇಟಿ ಕಮಾಂಡರ್‌ ವಲೀ ಅಲಿಯಾಸ್‌ ರೆಹಾನ್‌ ಅಲಿಯಾಸ್‌ ರಷೀದ್‌ ಓಬೇದುಲ್ಲ ಸೂಚಿಸಿದ್ದ ಬಗ್ಗೆಯೂ ಹೇಳಿರುವುದಾಗಿ ತಿಳಿದು ಬಂದಿದೆ.

ಪಾಕ್‌ನಲ್ಲಿ ತರಬೇತಿ
ಪಾಕಿಸ್ತಾನ  ಫೈಸಲಾಬಾದ್‌ ಗುಲಿಸ್ತಾನ್‌ಲ್ಲಿರುವ ಎಲ್‌ಇಟಿ ಕಮಾಂಡರ್‌ ವಲೀ ಜತೆ ಅಲ್ಲೇ ಕೆಲಕಾಲ ತರಬೇತಿ ಪಡೆದಿರುವ ಬಗ್ಗೆ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಜತೆಗೆ, ಅಫ್ಘಾನಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಕೇರಳದ ಕಣ್ಣೂರಿನ ಮರಕ್ಕಾರಂಡಿ ನಿವಾಸಿ ಅಯೂಬ್‌ ಅಲಿಯಾಸ್‌ ಕೆ.ಪಿ. ಶಾಬೀರ್‌, ಪಾಕಿಸ್ತಾನದ ಕರಾಚಿಯ ಸಲೀಂ ಅಲಿಯಾಸ್‌ ಮುಬಷೀರ್‌ ಶಾಹೀದ್‌ ಅಲಿಯಾಸ್‌ ಯಾಹ್ಯಾ ಜತೆಗೂ ನಿಕಟ ಸಂಪರ್ಕದಲ್ಲಿ ಇದ್ದ ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ. ಬಾಂಗ್ಲಾದೇಶದ ಹಮಾರಿಯಾದ ಜಾಹೀದ್‌, ಕೇರಳದ ಪಾಪಿಂಚಿರಿ ಕೊಂಡಂತ್‌ ಶೋಹೇಬ್‌ ಅಲಿಯಾಸ್‌ ಫೈಸಲ್‌  ಅವರೂ ಬಂಧಿತ ಆರೋಪಿಯ ಸಂಪರ್ಕದಲ್ಲಿದ್ದರು ಹಾಗೂ ವಿದೇಶಗಳಲ್ಲಿ  ತಲೆಮರೆಸಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

14 ದಿನ ಪೊಲೀಸ್‌ ವಶಕ್ಕೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಇಂಡಿ¿åನ್‌ ಮುಜಾಹಿದ್ದೀನ್‌ ಸಂಘಟನೆಯ ರೂವಾರಿ ರಿಯಾಜ್‌ ಭಟ್ಕಳ್‌, ಮಸ್ಕಟ್‌ನಲ್ಲಿ ತಲೆಮರೆಸಿಕೊಂಡಿರುವ ಆಲೀ ಅಲಿಯಾಸ್‌ ಇಷಾ ಅಲಿಯಾಸ್‌ ಆಲೀ ಅಬ್ದುಲ್‌ ಅಜೀಜ್‌ ಹೂಟಿ ಸಂಪರ್ಕವೂ ಇರುವುದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಆತನನ್ನು ಹಾಜರುಪಡಿಸಿ 14 ದಿನ ವಶಕ್ಕೆ ಪಡೆದಿರುವ ಪೊಲೀಸ್‌ ತಂಡ ಆತನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದೆ.

2008ರ ಜುಲೈ 25ರ ಸರಣಿ ಬಾಂಬ್‌ ಸ್ಫೋಟದ ಬಳಿಕ  ಕೆಲ ವರ್ಷಗಳ ಕಾಲ ಗಲ್ಫ್ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಸಲೀಂ ಕೆಲ ವರ್ಷಗಳಿಂದ ಕೇರಳದ ಕಣ್ಣೂರಿನಲ್ಲಿ ತಲೆಮರೆಸಿಕೊಂಡಿದ್ದ. ಈಗಾಗಲೇ ಬಂಧನಕ್ಕೊಳಗಾಗಿರುವ ಅಬ್ದುಲ್‌ ಜಬ್ಟಾರ್‌ ಅಲಿಯಾಸ್‌ ಸತ್ತಾರ್‌ ವಿಚಾರಣೆ ವೇಳೆ ಆರೋಪಿ ಸಲೀಂ ಮತ್ತೆ ಸಂಘಟನೆಯಲ್ಲಿ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಜತೆಗೆ ಈತನ ಚಟುವಟಿಕೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಮತ್ತು ಕೇಂದ್ರ ಗುಪ್ತಚರ ದಳ ಹಾಗೂ “ರಾ’ ಕಣ್ಣಿಟ್ಟಿದ್ದು, ಅವುಗಳ ಮಾಹಿತಿ ಆಧಾರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಸಿಸಿಬಿ ಆರೋಪಿಯನ್ನು ಬಂಧಿಸಿದೆ.

ದಲೈಲಾಮ ಪ್ರಕರಣ ಬಳಿಕ ಎಚ್ಚೆತ್ತ ಸಿಸಿಬಿ
2008ರಲ್ಲಿ ನಡೆದಿದ್ದ ಸ್ಫೋಟ ಪ್ರಕರಣದ ಬಳಿಕ ಸಿಸಿಬಿ ಪೊಲೀಸರು 32 ಮಂದಿ ಆರೋಪಿಗಳ ಪೈಕಿ ಕೇವಲ 20 ಮಂದಿಯನ್ನು ಮಾತ್ರ ಬಂಧಿಸಿದ್ದರು. ಅನಂತರ ಪ್ರಕರಣದ ಬಗ್ಗೆ ಸಿಸಿಬಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಆದರೆ, ಇತ್ತೀಚೆಗಷ್ಟೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ರಾಮನಗರದಲ್ಲಿ ತಲೆಮರೆಸಿಕೊಂಡಿದ್ದ ಜೆಎಂಬಿ ಉಗ್ರ ಕೌಸರ್‌ನನ್ನು ಬಂಧಿಸಿದ್ದರು. ಈತನ ವಿಚಾರಣೆ ವೇಳೆ ಆರೋಪಿ ತನ್ನ ಸಂಘಟನೆಯಿಂದ ಬೌದ್ಧ ಧರ್ಮಗುರು ದಲೈಲಾಮರನ್ನು ಹತ್ಯೆಗೈಯಲು ಸಂಚು ರೂಪಿಸಿರುವುದಾಗಿ ಸ್ಫೋಟಕ ಮಾಹಿತಿ ನೀಡಿದ್ದ. ಇದರ ಬೆನ್ನಲ್ಲೇ ವಿಶೇಷ ಕಾರ್ಯಾಚರಣೆ ಆರಂಭಿಸಿದ ಸಿಸಿಬಿ 2008ರ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳ ಬಗ್ಗೆ ನಿಗಾವಹಿಸಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಿಯೊಬ್ಬರ ಸಹಕಾರದಿಂದ ಕಣ್ಣೂರಿನ ಕಾಡೊಂದರಲ್ಲಿ ತಲೆಮರೆಸಿಕೊಂಡಿದ್ದ ಸಲೀಂನನ್ನು ಬಂಧಿಸಿದೆ. ದಲೈಲಾಮಾ ಹತ್ಯೆ ಸಂಚಿನ ಬಗ್ಗೆ ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.

No Comments

Leave A Comment