Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಗುಜರಾತ್‌ : 70,000 ವಲಸೆ ಕಾರ್ಮಿಕರ ಪಲಾಯನ,ಸಣ್ಣ ಫ್ಯಾಕ್ಟರಿಗಳು ಬಂದ್

ಅಹ್ಮದಾಬಾದ್‌/ಮುಂಬಯಿ : ಗುಜರಾತ್‌ನಲ್ಲಿ ಜೀವ ಬೆದರಿಕೆ ಎದುರಾಗಿರುವ ಕಾರಣಕ್ಕೆ ಮಧ್ಯಪ್ರದೇಶ, ಬಿಹಾರ ಮತ್ತು ಉತ್ತರ ಪ್ರದೇಶದ ಸುಮಾರು 70,000 ಹಿಂದಿ ಭಾಷಿಕ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿರುವ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲೀಗ ನವರಾತ್ರಿ ಶಾಪಿಂಗ್‌ ಸಂದರ್ಭದಲ್ಲೇ ವ್ಯಾಪಾರೋದ್ಯಮಗಳ ಮೇಲೆ ಭಾರೀ ದುಷ್ಪರಿಣಾಮ ಕಂಡು ಬರುತ್ತಿದೆ.

ಕಳೆದ ತಿಂಗಳಲ್ಲಿ  ಗುಜರಾತ್‌ನ ಸಬರ್‌ಕಾಂತಾ ಜಿಲ್ಲೆಯಲ್ಲಿ 14 ತಿಂಗಳ ಹೆಣ್ಣು ಮಗುವಿನ ಮೇಲೆ ಬಿಹಾರಿ ವಲಸೆ ಕಾರ್ಮಿಕನೋರ್ವ ಅತ್ಯಾಚಾರ ನಡೆಸಿದನೆಂಬ ಕಾರಣಕ್ಕೆ ರಾಜ್ಯದಲ್ಲಿನ ಹಿಂದಿ ಭಾಷಿಕ ವಲಸೆ ಕಾರ್ಮಿಕರನ್ನು ಗುರಿ ಇರಿಸಿ ದಾಳಿ ನಡೆಯತೊಡಗಿರುವ ಕಾರಣ ಜೀವ ಭಯದಿಂದ ಈ ಮೂರೂ ರಾಜ್ಯಗಳ 70,000 ವಲಸೆ ಕಾರ್ಮಿಕರು ಪಲಾಯನ ಮಾಡಿದ್ದಾರೆ.

ಗುಜರಾತ್‌ನ ಅತ್ಯಂತ ದೊಡ್ಡ ಕೈಗಾರಿಕಾ ಜಿಲ್ಲೆಯಾಗಿರುವ ಅಹ್ಮದಾಬಾದ್‌ ನಲ್ಲೀಗ ಹಿಂದಿ ಭಾಷಿಕ ವಲಸೆ ಕಾರ್ಮಿಕರು ಇಲ್ಲದೆ ಅತ್ಯಧಿಕ ಸಂಖ್ಯೆಯ ಸಣ್ಣ ಪುಟ್ಟ ಕೈಗಾರಿಕಾ ಘಟಕಗಳು ಮುಚ್ಚಿವೆ. ಹಾಗೆಯೇ ರಸ್ತೆ ಬದಿಯ ತಿಂಡಿ ತಿನಸುಗಳ ಅಂಗಡಿಗಳು ಕೂಡ ಮುಚ್ಚಿವೆ. ಇವುಗಳಲ್ಲೆಲ್ಲ ಬಹುತೇಕ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶದ ವಲಸೆ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿ ದುಡಿಯುತ್ತಿದ್ದರು. ಗುಜರಾತ್‌ನಿಂದ ಪಲಾಯನ ಮಾಡಿರುವ ಈ ಕಾರ್ಮಿಕರು ಇನ್ನು ಗುಜರಾತ್‌ಗೆ ಮರಳುತ್ತಾರೋ ಇಲ್ಲವೋ ಎಂಬ ಆತಂಕ ಇಲ್ಲಿನ ವ್ಯಾಪಾರೋದ್ಯಮ ವಲಯಗಳಲ್ಲಿ ಮೂಡಿದೆ.

ಹಸುಳೆಯ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫ‌ಲವಾದರೆ ರಾಜ್ಯದಲ್ಲಿನ ವಲಸೆ ಕಾರ್ಮಿಕರಿಗೆ ಇಲ್ಲಿ ಜೀವಿಸಲು ನಾವು ಬಿಡೆವು ಎಂದು ವಿರೋಧ ಪಕ್ಷದ ಶಾಸಕನೋರ್ವ ತನ್ನ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದೇ ವಲಸೆ ಕಾರ್ಮಿಕರ ಸಾಮೂಹಿಕ ಪಲಾಯನಕ್ಕೆ ಕಾರಣವೆಂದು ತಿಳಿಯಲಾಗಿದೆ.

ಈ ನಡುವೆ ಪೊಲೀಸರು ವಿವಿಧ ಹಿಂಸಾ ಪ್ರಕರಣಗಳಲ್ಲಿ ಸುಮಾರು 500ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ವಲಸೆ ಕಾರ್ಮಿಕರ ಮೇಲಿನ ಆಕ್ರೋಶಕ್ಕೆ ಈ ತನಕ ಯಾವುದೇ ಜೀವ ಬಲಿಯಾಗಿಲ್ಲವಾದರೂ ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶದ ಕಾರ್ಮಿಕರು ತಮಗೆ ಜೀವ ಬೆದರಿಕೆ ಇರುವುದನ್ನು ಮನಗಂಡು ರಾಜ್ಯದಿಂದ ಪಲಾಯನ ಮಾಡಿರುವುದು ಸ್ಪಷ್ಟವಿದೆ ಎಂದು ವರದಿಗಳು ತಿಳಿಸಿವೆ.

No Comments

Leave A Comment