Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಪಾಕಿಸ್ಥಾನದ ಸುಳ್ಳಿಗೆ ಭಾರತದ ತಪರಾಕಿ

ನ್ಯೂಯಾರ್ಕ್‌: ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಶನಿವಾರ ಪಾಕ್‌ ವಿರುದ್ಧ ನಡೆಸಿದ ದಾಳಿಗೆ ಸಮರ್ಥನೆ ಮಾಡಲು ಹೋಗಿ ಪಾಕಿಸ್ಥಾನವು ಸುಳ್ಳಿನ ಸುಳಿಗೆ ಸಿಲುಕಿಕೊಂಡಿದೆ. 2014ರಲ್ಲಿ ಪಾಕಿಸ್ಥಾನದ ಪೇಶಾವರದಲ್ಲಿ ನಡೆದ ದಾಳಿ ಭಾರತ ಬೆಂಬಲಿತ ಎಂದು ಪಾಕ್‌ ವಿದೇಶಾಂಗ ಸಚಿವ ಷಾ ಮೆಹಮೂದ್‌ ಖುರೇಶಿ ಆರೋಪ ಮಾಡಿದ್ದು, ಇದಕ್ಕೆ ವಿಶ್ವಸಂಸ್ಥೆಯ ಕಾಯಂ ನಿಯೋಗದ ಸದಸ್ಯೆ ಈನಂ ಗಂಭೀರ್‌ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ಥಾನದ ಆರೋಪವು ದುರ್ಘ‌ಟನೆಯಲ್ಲಿ ಮೃತಪಟ್ಟ ಅಮಾಯಕ ಮಕ್ಕಳಿಗೆ ಮಾಡಿದ ಅವಮಾನ ಎಂದು ಈನಂ ಹೇಳಿದ್ದಾರೆ.

ಪೇಶಾವರದಲ್ಲಿ ದಾಳಿ ನಡೆದಾಗ ಭಾರತದಾದ್ಯಂತ ಶೋಕ ವ್ಯಕ್ತಪಡಿಸಲಾಯಿತು. ಭಾರತದ ಉಭಯ ಸದನಗಳು ಸಂತಾಪ ವ್ಯಕ್ತಪಡಿಸಿದ್ದವು. ಇಡೀ ದೇಶದ ಶಾಲೆಗಳಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಲಾಗಿತ್ತು. ನೆರೆ ದೇಶವನ್ನು ಅಸ್ಥಿರಗೊಳಿಸಲು ಪಾಕಿಸ್ಥಾನ ಹೆಣೆದ ಉಗ್ರರ ಕೃತ್ಯಗಳಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನವಷ್ಟೇ ಈ ಆರೋಪ ಎಂದು ಈನಂ ಆರೋಪಿಸಿದ್ದಾರೆ.

ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಇಮ್ರಾನ್‌ ಖಾನ್‌ ಹೊಸ ಪಾಕಿಸ್ಥಾನದ ಭರವಸೆ ನೀಡಿದರು. ಆದರೆ ಈಗ ನಾವು ನೋಡುತ್ತಿರುವುದು ಹಳೆಯ ನಾಟಕದಲ್ಲಿನ ಹೊಸ ಪಾತ್ರವಷ್ಟೇ ಎಂದು ಈನಂ ಟೀಕಿಸಿದ್ದಾರೆ. ಅಷ್ಟೇ ಅಲ್ಲ, ಭಾರತದ ವಿರುದ್ಧ ಆರೋಪ ಮಾಡುವ ಪಾಕಿಸ್ಥಾನದ ವಾಸ್ತವ ಚಿತ್ರಣ ಬೇರೆಯದನ್ನೇ ತೋರಿಸುತ್ತದೆ. ವಿಶ್ವಸಂಸ್ಥೆ ಘೋಷಿಸಿದ 132 ಉಗ್ರರು ಹಾಗೂ 22 ಉಗ್ರ ಸಂಘಟನೆಗಳು ಪಾಕಿಸ್ಥಾನದಲ್ಲಿ ನೆಲೆ ಹೊಂದಿವೆ ಎಂಬುದನ್ನು ಪಾಕಿಸ್ಥಾನ ನಿರಾಕರಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ಮಾನವ ಹಕ್ಕುಗಳ ಬಗ್ಗೆ ಭಾರತಕ್ಕೆ ಪಾಠ ಹೇಳುವ ಪಾಕಿಸ್ಥಾನ ತನ್ನ ನೆಲದಲ್ಲಿನ ಮಾನವ ಹಕ್ಕುಗಳ ಹೋರಾಟದ ಬಗ್ಗೆ ಗಮನ ಹರಿಸಲಿ ಎಂದು ಪಾಕಿಸ್ಥಾನದ ವಿರುದ್ಧ ಬಲೂಚಿಸ್ಥಾನ ಹಾಗೂ ಸಿಂಧ್‌ ಪ್ರಾಂತ್ಯದ ನಾಗರಿಕರು ಅಮೆರಿಕದಲ್ಲಿನ ಪಾಕ್‌ ರಾಯಭಾರ ಕಚೇರಿ ಎದುರು ಶನಿವಾರ ನಡೆಸಿದ ಪ್ರತಿಭಟನೆಯನ್ನು ಉಲ್ಲೇಖೀಸಿದ್ದಾರೆ.

ಅಷ್ಟೇ ಅಲ್ಲ, ಪಾಕಿಸ್ಥಾನದಲ್ಲಿ ಮಾನವ ಹಕ್ಕುಗಳ ಬಗ್ಗೆ ವಿಶ್ವಸಂಸ್ಥೆಯ ನಿಯೋಗದ ವರದಿಯನ್ನು ಖುರೇಶಿ ಪ್ರಸ್ತಾವಿಸಿದ್ದಾರೆ, ಆದರೆ ಈ ವರದಿಯನ್ನು ವಿಶ್ವಸಂಸ್ಥೆ ಅನುಮೋದಿಸಿಲ್ಲ, ವಿಶ್ವಸಂಸ್ಥೆಯ ಯಾರೂ ಅಧ್ಯಯನ ನಡೆಸುವಂತೆ ಆಗ್ರಹಿಸಿರಲೂ ಇಲ್ಲ ಎಂದು ಪಾಕ್‌ನ ಮತ್ತೂಂದು ಸುಳ್ಳನ್ನು ಅನಾವರಣಗೊಳಿಸಿದ್ದಾರೆ.

ಯೋಗಿ ಆದಿತ್ಯನಾಥ, ಆರೆಸ್ಸೆಸ್‌ ಟಾರ್ಗೆಟ್‌
ಪಾಕ್‌ ವಿರುದ್ಧ ಸುಷ್ಮಾ ಮಾಡಿದ ವಾಗ್ಧಾಳಿಗೆ ವಿಶ್ವಸಂಸ್ಥೆಯಲ್ಲಿ ಪ್ರತಿಕ್ರಿಯಿಸಿದ ರಾಯಭಾರಿ ಸಾದ್‌ ವಾರಿಯಾಚ್‌, ಈ ಭಾಗದಲ್ಲಿ ಉಗ್ರ ಚಟುವಟಿಕೆಗಳಿಗೆ ಆರೆಸ್ಸೆಸ್ಸೇ ಕೇಂದ್ರ. ಹಿಂದೂಗಳೇ ಮೇಲು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹೇಳುತ್ತಾರೆ, ಅಸ್ಸಾಂನಲ್ಲಿ ಬಂಗಾಲಿಗಳಿಗೆ ನಾಗರಿಕ ಹಕ್ಕು ತಿರಸ್ಕರಿಸಲಾಗುತ್ತಿದೆ ಎಂದು ಪ್ರಲಾಪಿಸಿದ್ದಾರೆ.

ಮಹಾತ್ಮನ ಸಂದೇಶ ಇಂದಿಗೂ ಪ್ರಸ್ತುತ
ಕೋಮು ಸೌಹಾರ್ದತೆ ಮತ್ತು ಸಹನೆಯ ಬಗ್ಗೆ ಮಹಾತ್ಮಾ ಗಾಂಧಿಯವರು ಪ್ರತಿಪಾದಿಸುತ್ತಿದ್ದ ಅಂಶ ಹಾಲಿ ದಿನಮಾನಗಳಿಗೂ ಪ್ರಸ್ತುತವಾಗಿದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯ ದರ್ಶಿ ಆ್ಯಂಟೋನಿಯೋ ಗುಟೆರಸ್‌ ಹೇಳಿದ್ದಾರೆ. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಯಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಮೊದಲ ಬಾರಿಗೆ ಸೋಮವಾರದಿಂದ ಅವರು ಭಾರತಕ್ಕೆ  3 ದಿನಗಳ ಭೇಟಿ  ನೀಡುತ್ತಿದ್ದಾರೆ. ಜತೆಗೆ ಅ.2ರಂದು ಗಾಂಧಿಯವರ 150ನೇ ಜನ್ಮದಿನವೂ ಆಗಿರುವ ಕಾರಣ, ಈ ಸಂದರ್ಭದಲ್ಲಿಯೇ ಭಾರತ ಪ್ರವಾಸ ಕೈಗೊಳ್ಳುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ಇಮ್ರಾನ್‌ ಖಾನ್‌ ಒಬ್ಬ ಕಾರಕೂನ. ದೇಶವನ್ನು ನಡೆಸುವುದು ಗುಪ್ತಚರ ದಳ, ಸೇನೆ ಹಾಗೂ ಉಗ್ರರು. ಹೀಗಾಗಿ ಪಾಕ್‌ ಜೊತೆಗೆ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ.
– ಸುಬ್ರಹ್ಮಣ್ಯನ್‌ ಸ್ವಾಮಿ, ಬಿಜೆಪಿ ಮುಖಂಡ

No Comments

Leave A Comment