Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಸರಕಾರ ಸುಭದ್ರ: ಎಚ್‌ಡಿಕೆ ಉಭಯ ಜಿಲ್ಲೆಗಳಿಗೆ ಅಭಿವೃದ್ಧಿಯ ಅಭಯ * ಉಡುಪಿಗೆ ನೂರು ಕೋಟಿ ಭರವಸೆ

ಉಡುಪಿ/ಮಂಗಳೂರು: ಸಮ್ಮಿಶ್ರ ಸರಕಾರ ಸಾಮರಸ್ಯದಿಂದ ನಡೆಯುತ್ತಿರುವಾಗ ಅಭದ್ರತೆಯ ಮಾತೇಕೆ ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.  ಕುಮಾರಸ್ವಾಮಿ ತಮ್ಮ ಸರಕಾರ ಸುಭದ್ರ ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ, “ಎಲ್ಲವೂ ಸಾಮರಸ್ಯದಿಂದಲೇ ನಡೆಯುತ್ತಿದ್ದು, ಸರಕಾರ ಸುರಕ್ಷಿತವಾಗಿದೆ. ಬೆಳಗಾವಿಯಲ್ಲಿ ಜಾರಕಿಹೊಳಿ, ಲಕ್ಷ್ಮೀ ಹೆಬ್ಟಾಳ್ಕರ್‌ ಮಧ್ಯೆಯ ವಿವಾದದಿಂದ ತೊಂದರೆ ಇಲ್ಲ’ಎಂದು ಹೇಳಿದರು.

“ಒಂದುವೇಳೆ ಟೆನ್ಶನ್‌ನಲ್ಲಿರುತ್ತಿದ್ದರೆ ಬೆಂಗಳೂರಿನಲ್ಲಿದ್ದು ರಾಜಕೀಯ ನಿರ್ವಹಣೆಯಲ್ಲಿ ಮುಳುಗಿರುತ್ತಿದ್ದೆ. ಇಲ್ಲೇಕೆ ಬಂದು ಪ್ರಗತಿ ಪರಿಶೀಲನೆಯಲ್ಲಿ ತೊಡಗಿಕೊಳ್ಳುತ್ತಿದ್ದೆ’ ಎಂದು ಕೇಳಿದರಲ್ಲದೇ, “ಸರಕಾರದ ಭವಿಷ್ಯ ಕುರಿತಂತೆ ನಿಮ್ಮ ವರದಿಗಳೆಲ್ಲ ಅಸಹಜ. ನಿಮ್ಮ ಖುಷಿಗೆ ಏನಾದ್ರೂ ಬರೊಳ್ಳಿ’ ಎಂದು ಹೇಳಿ ಸುಮ್ಮನಾದರು.

ಉಭಯ ಜಿಲ್ಲೆಗಳಿಗೆ ಅಭಯ
ಉಭಯ ಜಿಲ್ಲೆಗಳ ಪ್ರಗತಿ ಪರಿಶೀಲನೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಯವರು, ಎರಡೂ ಜಿಲ್ಲೆಗಳ ಪ್ರಗತಿಗೆ ಸಹ ಕರಿಸುವುದಾಗಿ ಅಭಯ ನೀಡಿದ್ದಾರೆ.  ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಸಂಭವಿಸಿದ 141 ಕೋಟಿ ರೂ. ನಷ್ಟಕ್ಕೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ 75ರಿಂದ 100 ಕೋಟಿ ರೂ. ಅನುದಾನ ಒದಗಿಸುವುದಾಗಿ ಹೇಳಿದರೆ, ಜನಸಾಮಾನ್ಯರಿಗೆ ಸುಲಭವಾಗಿ ಮರಳು ಸಿಗುವಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಆದೇಶಿಸಿದರು. ಮರಳು ಸಮಸ್ಯೆ ಪರಿಹರಿಸಲು ಬೆಂಗಳೂರಿನಲ್ಲಿ ಕರಾವಳಿ ಶಾಸಕರ ಸಭೆ ಕರೆದು ಚರ್ಚಿಸುವುದಾಗಿಯೂ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಲು ಬೆಂಗಳೂರಿನಲ್ಲಿ ಶೀಘ್ರ ಜನಪ್ರತಿನಿಧಿ
ಗಳ ಸಭೆ ಕರೆಯುವುದಾಗಿ ಮಂಗಳೂರಿನಲ್ಲಿ ಪ್ರಕಟಿಸಿದರು. ಎಂಡೋಸಲ್ಫಾನ್‌ ಸಂತ್ರಸ್ತರಿಗೂ ಶಾಶ್ವತ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ವರದಿ ಸಲ್ಲಿಕೆ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮಳೆ ಹಾನಿಗೂ ಸೂಕ್ತ ಪರಿಹಾರದ ಭರವಸೆ ನೀಡಿದರು.

ಶ್ರೀ ಕೃಷ್ಣ ಮಠಕ್ಕೆ ಭೇಟಿ
ಇದೇ ಸಂದರ್ಭ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಿಂದ ಪ್ರಸಾದ ಸ್ವೀಕರಿಸಿ, ದೇವರ ಸನ್ನಿಧಿಗೆ ಇನ್ನೊಮ್ಮೆ ಪುರಸೊತ್ತು ಮಾಡಿಕೊಂಡು ಬರುವೆ ಎಂದು ಹೇಳಿದರು.

ಕ್ರೀಡಾಳು ಪೂವಮ್ಮರಿಗೆ ಅಭಿನಂದನೆ 
ಏಶ್ಯಾಡ್‌ ಗೇಮ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಕರಾವಳಿಯ ಎಂ.ಆರ್‌. ಪೂವಮ್ಮನವರಿಗೆ ಮುಖ್ಯಮಂತ್ರಿ ಒಟ್ಟು 40 ಲಕ್ಷ ರೂ. ಬಹುಮಾನ ನೀಡಿ ಅಭಿನಂದಿಸಿದರು. ಪೂವಮ್ಮನವರ ಕುಟಂಬಕ್ಕೆ ಸೂಕ್ತ ನಿವೇಶನ ಒದಗಿಸುವ ಭರವಸೆಯನ್ನೂ ನೀಡಿದರು.

ಎತ್ತಿನಹೊಳೆ: ಅಕ್ರಮವಾಗಿದ್ದರೆ ಕ್ರಮ
ಎತ್ತಿನಹೊಳೆ ಯೋಜನೆ ಅನುಷ್ಠಾನದಲ್ಲಿ ಏನಾದರೂ ಅಕ್ರಮ ನಡೆದಿದ್ದರೆ ಕಾನೂನುಕ್ರಮ ಕೈಗೊಳ್ಳಲು ಈಗಲೂ ಬದ್ಧ ಎಂದ ಸಿಎಂ, ಪಶ್ಚಿಮ ಘಟ್ಟದ ಕುರಿತು ಕಸ್ತೂರಿ ರಂಗನ್‌ ವರದಿಯಲ್ಲಿನ ವೈಜ್ಞಾನಿಕ ಸಲಹೆ ಮತ್ತು ಹೈದರಾಬಾದ್‌ ತಜ್ಞರ ಶಿಫಾರಸು ಆಧರಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ
ಸಿಆರ್‌ಝಡ್‌ ಕಚೇರಿ ಮಂಗಳೂರಿಗೆ ವರ್ಗಾಯಿಸಲು ಆಧಿಕಾರಿಗಳೊಂದಿಗೆ ಚರ್ಚೆ, ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಸೇರಿದಂತೆ ಮಾಧ್ಯಮಗಳಲ್ಲಿ ಬಂದ ಕರಾವಳಿಗರ ಕೆಲವು ಪ್ರಮುಖ ಬೇಡಿಕೆಗಳನ್ನು ಗಮನಿಸಿದ್ದು ಸ್ಪಂದಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

No Comments

Leave A Comment