Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಕೊಡಗಿನಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಮನೆ ನಿರ್ಮಾಣ: ಸಿಎಂ ಕುಮಾರಸ್ವಾಮಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರವಾಹ ಮತ್ತು ಭೂ ಕುಸಿತದಿಂದ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಸಂಪೂರ್ಣ ವೆಚ್ಚ ಭರಿಸಿ ಮನೆ ನಿರ್ಮಿಸಿಕೊಡಲಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಸಿಎಂ ಕುಮಾರಸ್ವಾಮಿ ಮಡಿಕೇರಿಯಲ್ಲಿ ಅತಿವೃಷ್ಟಿಯ ಅಬ್ಬರಕ್ಕೆ ನೊಂದ ನಿರಾಶ್ರಿತರಿಗಾಗಿ ಆರಂಭಿಸಿರುವ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದರು.ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ಪ್ರಾಕೃತಿಕ ವೈಪರೀತ್ಯಕ್ಕೆ ಸಿಲುಕಿ ಮನೆ ಕಳೆದುಕೊಂಡವರು ಆತಂಕಪಡಬೇಕಾಗಿಲ್ಲ.

ರಾಜ್ಯ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಿ ಮನೆ ನಿರ್ಮಿಸಿಕೊಡಲಿದೆ. ಈಗಾಗಲೇ ಮೃತಪಟ್ಟವರ ಕುಟುಂಬಗಳಿಗೆ ತಲಾ 5ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಹಾನಿಗೊಳಗಾದ ಕಡೆಗಳಲ್ಲಿ ರಸ್ತೆ ದುರಸ್ತಿ ಕಾರ್ಯ ಮಾಡಲಾಗುವುದು. ಸಂಕಷ್ಟಕ್ಕೊಳಗಾಗಿರುವ ರಕ್ಷಣೆಗೆ ಈಗಾಗಲೇ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತೊಡಗಿದ್ದಾರೆ ಎಂದು ಹೇಳಿದರು.

ಸೋಮವಾರಪೇಟೆ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮದಲ್ಲಿ ಸುಮಾರು 60 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ, ಅವರ ರಕ್ಷಣೆಯಲ್ಲಿ ರಕ್ಷಣಾ ಸಿಬ್ಬಂದಿ ನಿರತರಾಗಿದ್ದಾರೆ ಎಂದರು.ಭಾರೀ ಮಳೆ, ಪ್ರವಾಹ ಮತ್ತು ಭೂ ಕುಸಿತಗಳಿಂದ ರಾಜ್ಯದ 4 ಜಿಲ್ಲೆಗಳಲ್ಲಿ ಆಗಿರುವ ಹಾನಿ, ಬೆಳೆನಾಶ ಇತ್ಯಾದಿಗಳ ಬಗ್ಗೆ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಕೇಂದ್ರದ ಪರಿಹಾರಗಳನ್ನು ಆಧರಿಸಿಕೊಂಡು ರಾಜ್ಯ ಸರ್ಕಾರ ಪರಿಹಾರಗಳನ್ನು ಘೋಷಿಸಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

No Comments

Leave A Comment