Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಪೂರ್ವ ಅಫ್ಘಾನಿಸ್ಥಾನದ ಘಜನಿ ನಗರ ತಾಲಿಬಾನ್‌ ವಶದಲ್ಲಿ ?

ಕಾಬೂಲ್‌ : ಪೂರ್ವ ಅಫ್ಘಾನಿಸ್ಥಾನದ ಘಜನಿ ನಗರದ ಮೇಲೆ ತಾನು ನಿಯಂತ್ರಣ ಹೊಂದಿರುವುದಾಗಿ ಉಗ್ರ ಸಂಘಟನೆ ತಾಲಿಬಾನ್‌ ಹೇಳಿಕೊಂಡಿದೆ. ಆದರೆ ಇದೇ ವೇಳೆ ನಗರವು ನಮ್ಮ  ಹಿಡಿದಲ್ಲೇ ಇದೆ ಎಂದು ಸರಕಾರಿ ಪಡೆಗಳು ಹೇಳಿಕೊಂಡಿವೆ.

ತಾಲಿಬಾನ್‌ ಬಂಡುಕೋರರು ಪ್ರಾಂತೀಯ ರಾಜಧಾನಿ ನಗರವಾಗಿರುವ ಘಜನಿ ಗೆ ನಿನ್ನೆಯೇ ನುಗ್ಗಿದ್ದು ಸರಕಾರಿ ಪಡೆಗಳೊಂದಿಗೆ ಭೀಕರ ಗುಂಡಿನ ಕಾಳಗದಲ್ಲಿ ನಿರತರಾಗಿದ್ದಾರೆ.

ತಾಲಿಬಾನ್‌ ಬಂಡುಕೋರರನ್ನು ಹೊರ ಹಾಕುವ ಕಾರ್ಯಾಚರಣೆಯನ್ನು ನಾವು ಯಶಸ್ವಿಯಾಗಿ ನಡೆಸುತ್ತಿದ್ದು ನಗರದ ಮೇಲಿನ ನಿಯಂತ್ರಣ ನಮ್ಮ  ಕೈಯಲ್ಲೇ ಇದೆ ಎಂದು ಸರಕಾರಿ ಪಡೆ ಹೇಳಿದೆ.

ಘಜನಿ ನಗರದಲ್ಲಿ ವಿದ್ಯುತ್‌ ಮತ್ತು ಮೊಬೈಲ್‌ ಸೇವೆಯನ್ನು ಕಡಿದು ಹಾಕಲಾಗಿದೆ. ತಾಲಿಬಾನ್‌ ಉಗ್ರರು ಟೆಲಿಕಮ್ಯುನಿಕೇಶನ್‌ ಟವರ್‌ ಧ್ವಂಸ ಮಾಡಿದ್ದಾರೆ ಎಂದು ಘಜನಿ ಸಂಸದ ಶಾ ಗುಲ್‌ ರಜಾಯೀ ತಿಳಿಸಿದ್ದಾರೆ. ಹೀಗಾಗಿ ನಗರ ಯಾರ ನಿಯಂತ್ರಣದಲ್ಲಿದೆ ಎಂಬುದು ಖಚಿತವಾಗಿಲ್ಲ.

ತಾಲಿಬಾನ್‌ ಉಗ್ರರನ್ನು ಹಿಮ್ಮೆಟ್ಟಿಸಲು ಅಮೆರಿಕ ಪಡೆಗಳು ಹೆಲಿಕಾಪ್ಟರ್‌ಗಳನ್ನು ಮತ್ತು ಕನಿಷ್ಠ ಒಂದು ಡ್ರೋನ್‌ ನಿಯೋಜಿಸಿವೆ. ಹಾಗಿದ್ದರೂ ತಾಲಿಬಾನ್‌ ಬಂಡುಕೋರರು ಘಜನಿ ನಗರ ತಮ್ಮ ವಶದಲ್ಲಿದೆ ಎಂದು ಹೇಳಿಕೊಂಡಿದ್ದಾರೆ.

“ನಿನ್ನೆ ಶುಕ್ರವಾರ ರಾತ್ರಿ ಘಜನಿಯಲ್ಲಿನ ಒಂದು ಸೇನಾ ಬೆಟಾಲಿಯನ್‌ ಮೇಲೆ ನಾವು ಸಂಪೂರ್ಣವಾಗಿ ಜಯಿಸಿದ್ದೇವೆ; ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳನ್ನು ಮತ್ತು ನಾಲ್ಕು ಪಿಕಪ್‌ ಟ್ರಕ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನ್‌ ವಕ್ತಾರ ಝಬೀಹುಲ್ಲಾ ಮುಜಾಹಿದ್‌ ಪತ್ರಕರ್ತರಿಗೆ ರವಾನಿಸಿರುವ ಸಂದೇಶದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

No Comments

Leave A Comment