Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಶಿರಾಡಿ ಘಾಟಿ : ಆಗಸ್ಟ್2 ರಿಂದ ಘನ ವಾಹನ ಸಂಚಾರ ಆರಂಭ

ಪುತ್ತೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಸಿರು ನಿಶಾನೆ ಹಿನ್ನೆಲೆಯಲ್ಲಿ ಆ.2ರಿಂದ ಶಿರಾಡಿ ಘಾಟಿ ಹೆದ್ದಾರಿಯಲ್ಲಿ ಘನ ವಾಹನ ಸಂಚಾರ ಆರಂಭವಾಗಲಿದೆ. ಈ ಮೂಲಕ ಮಂಗಳೂರು ಮತ್ತು ಬೆಂಗಳೂರು ನಡುವಿನ ಸಂಚಾರ ಅವಧಿಯಲ್ಲಿ ಗಣನೀಯ ಇಳಿಕೆಯಾಗಲಿದೆ. ಅಲ್ಪ ಸ್ವಲ್ಪ ಕಾಮಗಾರಿ ಉಳಿದಿದೆಯಾದರೂ ಘನ ವಾಹನಗಳ ಸಂಚಾರಕ್ಕೆ ಅಡ್ಡಿ ಇಲ್ಲ. ಈಗಾಗಲೇ ಲಘು ವಾಹನಗಳು ಸಂಚರಿಸುತ್ತಿವೆ. ಮಡಿಕೇರಿ ರಸ್ತೆಯಲ್ಲಿ ಸಿಗುವ ಸಂಪಾಜೆ ಘಾಟಿ ಕೂಡ ಕುಸಿಯುವ ಅಪಾಯ ಇರುವುದರಿಂದ ಶಿರಾಡಿ ಘಾಟಿಯನ್ನು ಆದಷ್ಟು ಶೀಘ್ರ ಘನ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಅನಿವಾರ್ಯ ಜಿಲ್ಲಾಡಳಿತಕ್ಕೆ ಎದುರಾಗಿದೆ.

ಶಿರಾಡಿ ಘಾಟಿ ರಸ್ತೆಗೆ ಎರಡನೇ ಹಂತದ ಕಾಂಕ್ರೀಟ್‌ ಕಾಮಗಾರಿ ಪೂರ್ಣಗೊಂಡು ಜು. 15ರಂದು ಉದ್ಘಾಟನೆಗೊಂಡಿತ್ತು. ಆದರೆ ರಸ್ತೆ ಅಂಚಿಗೆ ಮಣ್ಣು ಹಾಕುವುದು, ಕೆಲವು ಕಡೆಗಳಲ್ಲಿ ತಡೆಗೋಡೆ ಕಾಮಗಾರಿ ಬಾಕಿ ಇದ್ದುದರಿಂದ ಗುತ್ತಿಗೆದಾರರಿಗೆ ಹೆಚ್ಚುವರಿ 15 ದಿನಗಳ ಸಮಯಾವಕಾಶ ನೀಡಲಾಗಿತ್ತು. ಅಲ್ಲಿಯವರೆಗೆ ಘನ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ, ಪೊಲೀಸ್‌ ವರಿಷ್ಠಾಧಿಕಾರಿ ಸಭೆ ನಡೆಸಿ ನೀಡಿದ್ದ 15 ದಿನಗಳ ಕಾಲಾವಕಾಶ ಜು. 30ಕ್ಕೆ ಕೊನೆಗೊಂಡಿದೆ. ಬಾಕಿ ಕಾಮಗಾರಿಯೂ ಹೆಚ್ಚು-ಕಡಿಮೆ ಪೂರ್ಣಗೊಂಡಿದ್ದು, ಘನ ವಾಹನ ಗಳ ಸಂಚಾರ ಶುರು ಮಾಡ ಬಹುದು ಎಂದು ರಾ. ಹೆ. ಪ್ರಾಧಿಕಾರದಿಂದ ಜಿಲ್ಲಾಧಿಕಾರಿಗೆ ಪತ್ರ ರವಾನಿಸಲಾಗಿದೆ.

ಜಿಲ್ಲಾಧಿಕಾರಿ ಅಂತಿಮ ತೀರ್ಮಾನ ತೆಗೆದುಕೊಂಡಿದ್ದು, ಆ.2ರಿಂದ ಶಿರಾಡಿ ಘಾಟಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತ ಎಂದು ಘೋಷಿಸಿದ್ದಾರೆ. ಈ ಆದೇಶ ಆ.1ರಂದು ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನೆ ಆಗಲಿದೆ. ರಾ. ಹೆ. ಪ್ರಾಧಿಕಾರದ ಪತ್ರ ಹಿನ್ನೆಲೆಯಲ್ಲಿ ಜು. 31ರಂದು ರಾತ್ರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಆ.1ರಿಂದಲೇ ಆದೇಶವನ್ನು ಜಾರಿ ಮಾಡಿದರೆ ಒಂದಷ್ಟು ಗೊಂದಲಕ್ಕೆ ಕಾರಣ ಆಗಬಹುದು ಎಂಬ ಹಿನ್ನೆಲೆಯಲ್ಲಿ, ಆ. 2ರಿಂದ ಎಲ್ಲ ವಾಹನಗಳ ಸಂಚಾರಕ್ಕೆ ಶಿರಾಡಿ ಮುಕ್ತ ಆಗಲಿದೆ ಎನ್ನಲಾಗಿದೆ.

ಇನ್ನೂ ಮುಗಿದಿಲ್ಲ ಕಾಮಗಾರಿ
ಶಿರಾಡಿ ಘಾಟಿಯ ಕಾಂಕ್ರೀಟ್‌ ರಸ್ತೆ ಅಂಚಿನಲ್ಲಿ ಸುಮಾರು 2 ಅಡಿಯಷ್ಟು ಎತ್ತರವಿದೆ. ಹಾಸನದ ಕಂಪಿಶೆಟ್ಟಿ ಹಳ್ಳಿಯಿಂದ ಗ್ರಾವಲ್‌ ಕಲ್ಲಿನ ಪುಡಿಯನ್ನು ಕಾಂಕ್ರೀಟ್‌ ಅಂಚಿಗೆ ಹಾಕಲಾಗುತ್ತಿದೆ. ಸುಮಾರು 13 ಕಿ.ಮೀ. ಉದ್ದದ ಹೊಸ ರಸ್ತೆಯಲ್ಲಿ ಇನ್ನೂ 3 ಕಿ.ಮೀ.ನಷ್ಟು ಮಣ್ಣು ಹಾಕಲು ಬಾಕಿ ಇದೆ. ಮುಂದಿನ 4-5 ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ. ಆವರಣ ಗೋಡೆ ಕೆಲಸ ಪೂರ್ಣಗೊಂಡಿದೆ. ಆದರೆ ಕೆಲವು ಕಡೆಗಳಲ್ಲಿ ಕುಸಿದಿದ್ದು, ಇಲ್ಲಿ ಕಾಮಗಾರಿ ನಡೆಸಲು ಮಳೆ ಅಡ್ಡಿಯಾಗಿದೆ. ಆದ್ದರಿಂದ ರಿಫ್ಲೆಕ್ಟರ್‌ಗಳನ್ನು ಅಳವಡಿಸಿ, ಚಾಲಕರಿಗೆ ಸೂಚನೆ ನೀಡಲಾಗುವುದು. ಅಪಾಯದ ಸ್ಥಳದಲ್ಲಿ ಶೀಟ್‌ ಹಾಕಲಾಗಿದೆ ಎಂದು ಗುತ್ತಿಗೆದಾರ ಸಂಸ್ಥೆಯ ಸಫುìದ್ದೀನ್‌ ತಿಳಿಸಿದ್ದಾರೆ.

ಶಿರಾಡಿಯಲ್ಲಿ ಘನ ವಾಹನಗಳ ಸಂಚಾರ ಶುರು ಮಾಡಬಹುದು ಎಂದು ರಾ.ಹೆ. ಪ್ರಾಧಿಕಾರ ಪತ್ರ ಬರೆದಿದ್ದು, ನಮಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಶಿರಾಡಿಯನ್ನು ಆ. 2ರಿಂದ ಮುಕ್ತ ಮಾಡುತ್ತೇವೆ. ಸಂಪಾಜೆ ಘಾಟಿಬಗ್ಗೆ ಮಡಿಕೇರಿ ಡಿಸಿ ಸೂಕ್ತ ಕ್ರಮ ಕೈಗೊಳ್ಳಬಹುದು.
– ಶಶಿಕಾಂತ ಸೆಂಥಿಲ್‌, ಜಿಲ್ಲಾಧಿಕಾರಿ, ದ.ಕ.

No Comments

Leave A Comment