Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಪೆರ್ಣಂಕಿಲ: ವಿದ್ಯುತ್‌ ತಂತಿ ತಗುಲಿ ತಾಯಿ, ಮಗಳ ಸಾವು

ಹೆಬ್ರಿ: ವಿದ್ಯುತ್‌ ಎಂದರೆ ಭಯಪಟ್ಟು ಮಾರು ದೂರ ನಿಲ್ಲುತ್ತಿದ್ದ ಹಾಗೂ ಅದೇ ಕಾರಣದಿಂದ ಮನೆಗೆ ವಿದ್ಯುತ್‌ ಸಂಪರ್ಕ ಪಡೆದಿರದಿದ್ದ ತಾಯಿ ಮತ್ತು ಮಗಳು ಮನೆಯ ಅಂಗಳದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿ ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಪೆರ್ಣಂಕಿಲ ಸಮೀಪದ ಗುಂಡುಪಾದೆಯಲ್ಲಿ ಜು. 19ರಂದು ಬೆಳಗ್ಗೆ ಸಂಭವಿಸಿದೆ. ಕೊಡಿಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪೆರ್ಣಂಕಿಲ ಸಮೀಪದ ಗುಂಡುಪಾದೆಯ ಜಲಜಾ ಯಾನೆ ಗೋಪಿ ನಾಯಕ್‌ (80) ಮತ್ತು ಅವರು ಪುತ್ರಿ ಸುಮತಿ ನಾಯಕ್‌ (55) ಮೃತಪಟ್ಟವರು.

ಘಟನೆಯ ವಿವರ
ರಸ್ತೆ ಬದಿಯಲ್ಲಿರುವ ಇವರ ಮನೆಯ ಎದುರು ಹಾದು ಹೋದ ವಿದ್ಯುತ್‌ ಲೈನ್‌ ನ ತುಕ್ಕು ಹಿಡಿದ ತಂತಿ ಗಾಳಿ ಮಳೆಗೆ ತುಂಡಾಗಿ ಅಂಗಳದಲ್ಲಿ ಬಿದ್ದಿತ್ತು. ಬೆಳಗ್ಗೆ ಜಲಜಾ ಅವರು ಅಂಗಳದಲ್ಲಿ ಯಾವುದೋ ತಂತಿ ಬಿದ್ದಿರಬೇಕು ಎಂದು ಭಾವಿಸಿ ಅದನ್ನು ಎತ್ತಿ ಕಾಂಪೌಂಡನಿಂದ ಹೊರ ಹಾಕಲು ಮುಂದಾದಾಗ ವಿದ್ಯುತ್‌ ಪ್ರವಹಿಸಿ  ಒದ್ದಾಡುತ್ತಿದ್ದರು. ಅದನ್ನು ಗಮನಿಸಿ ತಾಯಿಯನ್ನು ರಕ್ಷಿಸಲು ಹೋದ ಮಗಳು ಕೂಡ ಸಾವನ್ನಪ್ಪಿದ್ದಾರೆ.

ಮೆಸ್ಕಾಂ ಸಿಬಂದಿ ಕರೆ ಸ್ವೀಕರಿಸಲಿಲ್ಲ 
ಮುಂಜಾನೆ ಹೊತ್ತು ನರಳಾಟದ ಸದ್ದು ಕೇಳಿದ ಪಕ್ಕದ ಮನೆಯವರು ಬಂದು ನೋಡಿದಾಗ ತಾಯಿ – ಮಗಳು ವಿದ್ಯುತ್‌ ತಂತಿಯನ್ನು ಹಿಡಿದು ಹೊರಳಾಡುತ್ತಿದ್ದರು. ಕೂಡಲೇ ಮೆಸ್ಕಾಂ ಸಿಬಂದಿಗೆ ಕರೆ ಮಾಡಿದಾಗ ಪೋನ್‌ ಸ್ವೀಕರಿಸಲಿಲ್ಲ. ಅನಂತರ ಮಣಿಪಾಲ ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್‌ ಸ್ಥಗಿತಗೊಳಿಸಲಾಯಿತು. ಒಂದು ವೇಳೆ ಘಟನೆ ನಡೆದ ಕೂಡಲೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರೆ ಬದುಕುತ್ತಿದ್ದರೇನೋ ಎಂದು ಸ್ಥಳೀಯರಾದ ದೇವೇಂದ್ರ ನಾಯಕ್‌ ಹೇಳುತ್ತಾರೆ.

ತರಕಾರಿ ಮಾರಾಟದಿಂದ ಜೀವನ
ಮನೆಯಲ್ಲಿ ಇವರಿಬ್ಬರೇ ವಾಸಿಸುತ್ತಿದ್ದರು. ಜಲಜಾ ಅವರು ಮನೆಯಲ್ಲಿ ಸೊಪ್ಪು ತರಕಾರಿಗಳನ್ನು ಬೆಳೆಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಮಗಳು ಅನಾರೋಗ್ಯದ ಕಾರಣದಿಂದ ಮದುವೆಯಾಗಿರಲಿಲ್ಲ. ಪುತ್ರ ರಮೇಶ್‌  ಅವರು ತಾಯಿಯೊಂದಿಗೆ  ವೈಮನಸ್ಸು ಹೊಂದಿದ್ದು, ಶಿರ್ವದ ಮಟ್ಟಾರಿನಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

ಮೆಸ್ಕಾಂ ನಿರ್ಲಕ್ಷ್ಯ
ಇಲ್ಲಿದ್ದುದು ಸುಮಾರು 35 ವರ್ಷ ಹಿಂದಿನ ವಿದ್ಯುತ್‌ ಕಂಬವಾಗಿದ್ದು, ತಂತಿಗಳು ತುಕ್ಕು ಹಿಡಿದಿವೆ. ಈ ಬಗ್ಗೆ ಮೆಸ್ಕಾಂಗೆ ತಿಳಿಸಿದರೂ ಎಚ್ಚೆತ್ತುಕೊಳ್ಳಲಿಲ್ಲ. ಈ ಮಾರ್ಗದಲ್ಲಿ ಹಲವಾರು ಅಪಾಯಕಾರಿ ಮರಗಳಿದ್ದು, ಅದನ್ನು ತೆರವುಗೊಳಿಸುವಂತೆ ಮೆಸ್ಕಾಂಗೆ ವಿನಂತಿಸಿದರೆ, ಮರವನ್ನು ನೀವೇ ಕಡಿಯಿರಿ ಎಂದು ಗದರುತ್ತಾರೆ. ಘಟನೆಗೆ ಮೆಸ್ಕಾಂ ನಿರ್ಲಕ್ಷ್ಯವೇ ಕಾರಣ ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಹಿರಿಯಡಕ ಠಾಣಾಧಿಕಾರಿ ಶ್ರೀಕಾಂತ್‌ ಕೆ., ಕೊಡಿಬೆಟ್ಟು ಗ್ರಾ.ಪಂ.ಅಧ್ಯಕ್ಷ ರಾಜು ಪೂಜಾರಿ, ಶಾಸಕ ಲಾಲಾಜಿ ಆರ್‌ ಮೆಂಡನ್‌, ಹಿರಿಯಡಕ ರೈತರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ.

ವಿದ್ಯುತ್‌ ಭಯದಿಂದ ಸಂಪರ್ಕ ಪಡೆದಿರಲಿಲ್ಲ!
ಈ ಮನೆಗೆ ವಿದ್ಯುತ್‌ ಸಂಪರ್ಕವಿಲ್ಲ. ವಿದ್ಯುತ್‌ ಎಂದರೆ ಇವರಿಗೆ ಭಯವಿದ್ದು, ಶಾಕ್‌ ಹೊಡೆಯುತ್ತದೆ ಎಂಬ ಭಯದಿಂದ ಸಂಪರ್ಕ ಪಡೆದಿಲ್ಲ. ಉಚಿತವಾಗಿ ಸಂಪರ್ಕ ನೀಡುತ್ತೇವೆ ಎಂದರೂ ಅವರು ನಿರಾಕರಿಸಿದ್ದರು.

ಮೆಸ್ಕಾಂ ವಿರುದ್ಧ ದೂರು
ಸಾರ್ವಜನಿಕ ರಸ್ತೆ ಹಾಗೂ ಮನೆಯ ಸಮೀಪ ಹಾದು ಹೋದ ತುಕ್ಕು ಹಿಡಿದ ತಂತಿಯನ್ನು ದುರಸ್ತಿಗೊಳಿಸುವಂತೆ ವಿದ್ಯುತ್‌ ಇಲಾಖಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜವಾಗಿಲ್ಲ. ಮೆಸ್ಕಾಂ ಇಲಾಖೆಯ ಮೂಡುಬೆಳ್ಳೆ ಶಾಖಾಧಿಕಾರಿ ಅವರ ನಿರ್ಲಕ್ಷ್ಯದ ಪರಿಣಾಮ ಅವಘಡ ಸಂಭವಿಸಿದೆ ಎಂದು ರಮೇಶ್‌ ಆರ್‌.ನಾಯಕ್‌ ಹಿರಿಯಡಕ ಠಾಣೆಗೆ ದೂರು ನೀಡಿದ್ದಾರೆ.

No Comments

Leave A Comment