Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಜಗತ್ತು ಜಯಿಸಿದ ಫ್ರಾನ್ಸ್‌ :ಚೊಚ್ಚಲ ಟ್ರೋಫಿಯ ಕ್ರೊವೇಶಿಯ ಕನಸು ಭಗ್ನ

ಮಾಸ್ಕೊ: ಆಕ್ರಮಣಕಾರಿ ಆಟದಲ್ಲಿ ಕ್ರೊವೇಶಿಯವನ್ನು ಓವರ್‌ಟೇಕ್‌ ಮಾಡಿದ ಫ್ರಾನ್ಸ್‌ 2018ನೇ ಫಿಫಾ ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಜಗತ್ತನ್ನೇ ತುದಿಗಾಲಲ್ಲಿ ನಿಲ್ಲಿಸಿದ ರವಿವಾರದ ಪ್ರಶಸ್ತಿ ಕಾಳಗದಲ್ಲಿ ಫ್ರಾನ್ಸ್‌ 4-2 ಗೋಲುಗಳಿಂದ ಕ್ರೊವೇಶಿಯವನ್ನು ಕೆಡವಿತು. ಮೊದಲ ಸಲ ಪ್ರಶಸ್ತಿ ಸುತ್ತಿಗೆ ನುಗ್ಗಿ ಬಂದ ಕ್ರೊವೇಶಿಯ ಸೋತರೂ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಇದು ಫ್ರಾನ್ಸ್‌ಗೆ ಒಲಿದ 2ನೇ ವಿಶ್ವಕಪ್‌ ಪ್ರಶಸ್ತಿ. ಇದಕ್ಕೂ ಮುನ್ನ ಸರಿಯಾಗಿ 20 ವರ್ಷಗಳ ಹಿಂದೆ (1998) ಫ್ರೆಂಚ್‌ ಪಡೆ ತವರಿನ ಪ್ಯಾರಿಸ್‌ ಮೇಲಾಟದಲ್ಲಿ ಬಲಿಷ್ಠ ಬ್ರಝಿಲ್‌ ವಿರುದ್ಧ 3-0 ಜಯಭೇರಿ ಮೊಳಗಿಸಿತ್ತು.

ಸ್ವ-ಗೋಲಿನ ಆಘಾತ!
ಭಾರೀ ಉತ್ಸಾಹದಲ್ಲಿದ್ದ ಕ್ರೊವೇಶಿಯ ಆಕ್ರಮಣಕಾರಿ ಆಟಕ್ಕೆ ಇಳಿಯಿತಾದರೂ 18ನೇ ನಿಮಿಷದಲ್ಲೇ ದೊಡ್ಡದೊಂದು ಎಡವಟ್ಟು ಮಾಡಿಕೊಂಡಿತು. ಫ್ರಾನ್ಸ್‌ನ ಫ್ರೀ-ಕಿಕ್‌ ಒಂದನ್ನು ತಡೆಯಲು ಹೋದ ಮಾರಿಯೊ ಮ್ಯಾಂಝುಕಿಕ್‌, ಸ್ವ-ಗೋಲಿನ ಕಂಟಕಕ್ಕೆ ಸಿಲುಕಬೇಕಾಯಿತು. ಅವರ ತಲೆಯ ಮೂಲಕ ಸಿಡಿದು ಹೋದ ಚೆಂಡು ನೇರವಾಗಿ ಕ್ರೊವೇಶಿಯದ ಗೋಲುಪೆಟ್ಟಿಗೆಗೆ ನುಗ್ಗಿತು! ಈ ರೀತಿಯಾಗಿ ಫ್ರಾನ್ಸ್‌ 1-0 ಮುನ್ನಡೆಯನ್ನು ಸಂಭ್ರಮಿಸಿತು. ಇದು ವಿಶ್ವಕಪ್‌ ಫೈನಲ್‌ನಲ್ಲಿ ದಾಖಲಾದ ಮೊದಲ ಸ್ವ-ಗೋಲು.

21ನೇ ನಿಮಿಷದಲ್ಲಿ ಕ್ರೊವೇಶಿಯದ ಲೂಕಾ ಮೊಡ್ರಿಕ್‌ ಫ್ರೀ-ಕಿಕ್‌ ಅವಕಾಶ ಪಡೆದರೂ ಗೋಲಾಗಿಸುವಲ್ಲಿ ವಿಫ‌ಲರಾದರು. ಆದರೆ 28ನೇ ನಿಮಿಷದಲ್ಲಿ ಇವಾನ್‌ ಪೆರಿಸಿಕ್‌ ಅವರ ಸಿಡಿಲಿನಂಥ ಹೊಡೆತವೊಂದು ಫ್ರೆಂಚ್‌ ಪಾಳೆಯವನ್ನು ನಡುಗಿಸಿತು. ಪಂದ್ಯ ಸಮಬಲಕ್ಕೆ ಬಂತು.

38ನೇ ನಿಮಿಷದಲ್ಲಿ ಫ್ರಾನ್ಸ್‌ ಮತ್ತೆ ಮುನ್ನುಗ್ಗಿತು. ಅಂಟೋನಿ ಗ್ರೀಝಮನ್‌ ಆಕರ್ಷಕ ಗೋಲಿನ ಮೂಲಕ ಫ್ರೆಂಚ್‌ ಪಾಳೆಯದಲ್ಲಿ ಸಂಭ್ರಮ ಮೂಡಿಸಿದರು. ವಿರಾಮದ ವೇಳೆ ಫ್ರಾನ್ಸ್‌ 2-1ರ ಮುನ್ನಡೆ ಸಾಧಿಸಿತು.

ಗೋಲುಗಳ ಸುರಿಮಳೆ
ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಇನ್ನಷ್ಟು ಆಕ್ರಮಣಕಾರಿ ಆಟಕ್ಕಿಳಿದವು. ಆದರೆ ಗೋಲುಗಳ ಓಟದಲ್ಲಿ ಕ್ರೊವೇಶಿಯ ಹಿಂದೆ ಬಿತ್ತು. 59ನೇ ನಿಮಿಷದಲ್ಲಿ ಪೌಲ್‌ ಪೋಗ್ಬ, 65ನೇ ನಿಮಿಷದಲ್ಲಿ ಕೈಲಿಯನ್‌ ಎಂಬಪೆ ಬಡಬಡನೆ ಗೋಲು ಬಾರಿಸಿ ಫ್ರಾನ್ಸ್‌ ಮುನ್ನಡೆಯನ್ನು 4-1ಕ್ಕೆ ವಿಸ್ತರಿಸಿದರು. ಆಗಲೇ ಕ್ರೊವೇಶಿಯದ ಕನಸು ಕಮರಿ ಹೋಗಲಾರಂಭಿಸಿತ್ತು. ಇತ್ತ ಎಂಬಪೆ, ಫ‌ುಟ್‌ಬಾಲ್‌ ಲೆಜೆಂಡ್‌ ಪೀಲೆ ಬಳಿಕ ವಿಶ್ವಕಪ್‌ ಫೈನಲ್‌ನಲ್ಲಿ ಗೋಲು ಹೊಡೆದ ಅತೀ ಕಿರಿಯ ಆಟಗಾರನಾಗಿ ದಾಖಲಾದರು.

ಸ್ವ-ಗೋಲು ಹೊಡೆದ ತಪ್ಪಿಗೋ ಏನೋ, ಮ್ಯಾಂಝುಕಿಕ್‌ 69ನೇ ನಿಮಿಷದಲ್ಲಿ ಸುಲಭದ ಗೋಲೊಂದರ ಮೂಲಕ ಪ್ರಾಯಶ್ಚಿತ್ತ ಮಾಡಿಕೊಂಡರು. ಇದರಲ್ಲಿ ಫ್ರಾನ್ಸ್‌ ಕೀಪರ್‌ ಹ್ಯೂಗೊ ಲಾರಿಸ್‌ ಅವರ ನೆರವು ದೊಡ್ಡ ಮಟ್ಟದಲ್ಲಿತ್ತು. ಕೈಗೆ ಬಂದ ಚೆಂಡನ್ನು ಅವರು ಗೋಲಿಗೆ ನುಗ್ಗುವುದನ್ನು ಕಾಣಬೇಕಾಯಿತು. ಒಟ್ಟಾರೆ ಕ್ರೊವೇಶಿಯದ ಹಿನ್ನಡೆ 2-4ಕ್ಕೆ ಇಳಿಯಿತು.

ಝಗಮಗಿಸಿದ ಸಮಾರೋಪ
ಸುತ್ತಲೂ ಕಣ್ಣು ಕುಕ್ಕುವಂಥ ಬೆಳಕಿನ ಅಲಂಕಾರ, ಮೈದಾನದ ತುಂಬೆಲ್ಲಾ ನೀಲಿ ಬಣ್ಣದ ಫ‌ುಟ್‌ಬಾಲ್‌ ಚೆಂಡಿನ ಮೇಲಿನ ಶೈಲಿಯ ನೆಲಹಾಸು, ಧ್ವನಿವರ್ದಕಗಳಲ್ಲಿ ವಿಶ್ವಕಪ್‌ ಟೂರ್ನಿಯ ಲಿವ್‌ ಇಟ್‌ ಅಪ್‌ ಹಾಡಿನ ಹೊನಲು… ಮಾಸ್ಕೋದ ಲುಕ್ನಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಈ ಬಾರಿಯ ಫ‌ುಟ್‌ಬಾಲ್‌
“ಜಗತ್‌ ಜಾತ್ರೆ’ಯ ಸಮಾರೋಪ ಸಮಾರಂಭದ ಮನಮೋಹಕ ದೃಶ್ಯಗಳಿವು. ಮೈದಾನದ ಮಧ್ಯಭಾಗದಲ್ಲಿ ಸ್ವರ್ಣ ವರ್ಣದ ವೇದಿಕೆ ಸುತ್ತಲಿನ ನೀಲಿ ಬಣ್ಣದ ನೆಲಹಾಸಿನ ಮೇಲೆ ನೂರಾರು ಕಲಾವಿದರು ಜಗತ್ತನ್ನು ಕ್ರೀಡಾ ಸ್ಫೂರ್ತಿಯಿಂದ ಬೆಸೆಯುವ ಫ‌ುಟ್‌ಬಾಲ್‌ ಕ್ರೀಡೆಯ ವೈಶಿಷ್ಟéವನ್ನು ಬಿಂಬಿಸುವ ಪ್ರದರ್ಶನ ನೀಡಿದರು. ಇದೇ ವೇಳೆ, ಗಾಯಕ ನಿಕಿ ಜಾಮ್‌ ಹಾಗೂ ರಸಿಕರ ಕಂಗಳ ಸೆಳೆದ ಕೊಸೊವೊ ಗಾಯಕಿ ಎರಾ ಇಸ್ಟ್ರೆμ ಅವರು ಮೈದಾನದೊಳಕ್ಕೆ ಕಾಲಿಟ್ಟಿದ್ದು ಪ್ರೇಕ್ಷಕರನ್ನು ಪುಳಕಿತರನ್ನಾಗಿಸಿತು. ಕೆಲವೇ ನಿಮಿಷಗಳಲ್ಲಿ “ಲಿವ್‌ ಇಟ್‌ ಅಪ್‌’ ಹಾಡನ್ನು ರಚಿಸಿ, ಸಂಯೋಜಿಸಿದ್ದ ಹಾಲಿವುಡ್‌ ನಟ ವಿಲ್‌ ಸ್ಮಿತ್‌ ವೇದಿಕೆಗೆ ಆಗಮಿಸಿ ನೆರೆದ ಜನರನ್ನು ತಮ್ಮ ಹಾಡಿನ ಮೂಲಕ ರಂಜಿಸಿದರು. ಇದಾದ ಬಳಿಕ ಫೈನಲ್‌ ಪಂದ್ಯಕ್ಕೆ ಚಾಲನೆ ನೀಡಲಾಯಿತು.

ಫೈನಲ್‌ ಪಂದ್ಯಕ್ಕೆ  ಗಣ್ಯಾತಿಗಣ್ಯರ ದಂಡು
ಭಾನುವಾರ ರಾತ್ರಿಯ ವಿಶ್ವಕಪ್‌ ಫೈನಲ್‌ಗೆ ಜಾಗತಿಕ ಗಣ್ಯರನೇಕರು ಸಾಕ್ಷಿಯಾದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಇವರಲ್ಲಿ ಪ್ರಮುಖರು. ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್‌ ಮ್ಯಾಕ್ರನ್‌, ಕ್ರೊಯೇಷಿಯದ ಅಧ್ಯಕ್ಷೆ ಕೊಲಿಂಡಾ ಗ್ರಾಬರ್‌ ಕಿಟರೋವಿಕ್‌, ಕತಾರ್‌ನ ದೊರೆ ಶೇಖ್‌ ತಮೀಮ್‌ ಬಿನ್‌ ಹಮದ್‌ ಅಲ್ತಾನಿ ಇದ್ದರು. 2022ರ ವಿಶ್ವಕಪ್‌ ಆತಿಥ್ಯ ಕತಾರ್‌ ಪಾಲಾಗಿರುವುದರಿಂದ ಅಲ್ತಾನಿ ಫೈನಲ್‌ ವೇಳೆ ಉಪಸ್ಥಿತರಿದ್ದರು. ಉಳಿದಂತೆ ತಾರೆಯರಾದ, ಓಟಗಾರ ಉಸೇನ್‌ ಬೋಲ್ಟ್, ಇಂಗ್ಲಿಷ್‌ ಗಾಯಕ ಮಿಕ್‌ ಜಾಗರ್‌ ಮೊದಲಾದವರು ಫ್ರಾನ್ಸ್‌-ಕ್ರೊಯೇಷಿಯ ಸಮರ ವೀಕ್ಷಿಸಿದರು.

No Comments

Leave A Comment