Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ದಿನೇಶ್‌ ಪಾಲಿಗೆ ಕೆಪಿಸಿಸಿ ಹೊಣೆ ಈಶ್ವರ್‌ ಖಂಡ್ರೆ ಕಾರ್ಯಾಧ್ಯಕ್ಷ

ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರನ್ನಾಗಿ ಗಾಂಧಿನಗರ ಶಾಸಕ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷರನ್ನಾಗಿ ಭಾಲ್ಕಿ ಶಾಸಕ ಈಶ್ವರ್‌ ಖಂಡ್ರೆ ಅವರನ್ನು ನೇಮಕ ಮಾಡಿ ಕಾಂಗ್ರೆಸ್‌ ಹೈಕಮಾಂಡ್‌ ಆದೇಶ ಹೊರಡಿಸಿದೆ.

ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಮಣೆ ಹಾಕಿದೆ. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ತಮ್ಮ ಹಿಡಿತ ಬಲಗೊಳಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ದಿನೇಶ್‌ಗುಂಡೂರಾವ್‌ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಆಯ್ಕೆಯಾದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದಿನೇಶ್‌ ಗುಂಡೂರಾವ್‌ ನೇಮಕಕ್ಕೆ ಸಹಮತ ವ್ಯಕ್ತಪಡಿಸಿದ್ದರು.

ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರೂ ತಮಗೆ ಮಾನ್ಯತೆ ದೊರೆಯುತ್ತಿಲ್ಲ ಎಂದು ಬೇಸರಗೊಂಡಿದ್ದ ಸಿದ್ದರಾಮಯ್ಯ, ಮೊದಲಿಗೆ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಮೌನ ವಹಿಸಿದ್ದರಾದರೂ ನಂತರ ಪಕ್ಷ ತಮ್ಮ ಹಿಡಿತದಿಂದ ಕೈತಪ್ಪಬಹುದು ಎಂದು ಕೆಪಿಸಿಸಿಗೆ ಎಚ್‌.ಕೆ. ಪಾಟಿಲ್‌ ಬದಲು ದಿನೇಶ್‌ ಗುಂಡೂರಾವ್‌ ಅಥವಾ ವೀರಶೈವ ಲಿಂಗಾಯತ ಸಮುದಾಯದ ಈಶ್ವರ್‌ ಖಂಡ್ರೆ ಅವರಲ್ಲಿ ಯಾರನ್ನಾದರೂ ನೇಮಿಸುವಂತೆ ಹೈ ಕಮಾಂಡ್‌ಗೆ ಮನವಿ ಮಾಡಿದ್ದರು. ಹೀಗಾಗಿ, ದಿನೇಶ್‌ಗುಂಡೂರಾವ್‌ ಹಾಗೂ  ಈಶ್ವರ್‌ ಖಂಡ್ರೆ ಇಬ್ಬರಿಗೂ ಅವಕಾಶ ಕಲ್ಪಿಸಿ ಹೈಕಮಾಂಡ್‌ ಆದೇಶ ಹೊರಡಿಸಿದೆ ಎಂದು ಹೇಳಲಾಗಿದೆ.

ಈ ನಡುವೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವ ರು ದಿನೇಶ್‌ ಗುಂಡೂರಾವ್‌ ನೇಮಕಕ್ಕೆ ಪರೋಕ್ಷ ವಿರೋಧ ವ್ಯಕ್ತಪಡಿಸಿ, ಹಿರಿಯ ಸಂಸದರಾಗಿರುವ ಕೆ.ಎಚ್‌.ಮುನಿಯಪ್ಪಅಥವಾ ಬಿ.ಕೆ. ಹರಿಪ್ರಸಾದ್‌ ಅವರ ಹೆಸರು ಚಾಲ್ತಿಗೆ ಬರುವಂತೆ ನೋಡಿಕೊಂಡಿದ್ದರು. ಪರಮೇಶ್ವರ್‌ ಪರೋಕ್ಷವಾಗಿ ತಾವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಹಿರಿಯ ನಾಯಕರ ಹೆಸರು ತೇಲಿ ಬಿಟ್ಟು ಗೊಂದಲ ಸೃಷ್ಠಿಸುವ ಪ್ರಯತ್ನ ನಡೆಸಿದರು ಎಂಬ ಮಾತುಗಳು ಕೇಳಿ ಬಂದವು.

ಈ ಮಧ್ಯೆ, ಎಚ್‌.ಕೆ. ಪಾಟೀಲರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೈಕಮಾಂಡ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ನೀಡುವ ಬಗ್ಗೆ ಆಲೋಚನೆ ಮಾಡಿತ್ತು. ಅದರಂತೆ ಎಚ್‌.ಕೆ. ಪಾಟಿಲ್‌ ಜೊತೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸ್ವತ: ಮಾತನಾಡಿದ್ದರು. ಎಚ್‌.ಕೆ. ಪಾಟೀಲ್‌ ಕೂಡ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದರು. ಒಂದು ಹಂತದಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಕೂಡ ಅವರ ಬೆಂಬಲಕ್ಕೆ ನಿಂತಿದ್ದರು.

ಆದರೆ, ಕೃಷ್ಣ ಬೈರೇಗೌಡ, ರಿಜ್ವಾನ್‌ ಹರ್ಷದ್‌ ಸೇರಿದಂತೆ ಯುವನಾಯಕರ ತಂಡವು ದಿನೇಶ್‌
ಗುಂಡೂರಾವ್‌ ಪರ ಗಟ್ಟಿಯಾಗಿ ನಿಂತಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಮತವೂ ದೊರೆತಿದ್ದರಿಂದ ಅಂತಿಮವಾಗಿ ಹೈಕಮಾಂಡ್‌ ದಿನೇಶ್‌ ಗುಂಡೂರಾವ್‌ಗೆ ಮಣೆ ಹಾಕಿದೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

ಡಾ.ಜಿ.ಪರಮೇಶ್ವರ್‌ ಅವರು ಸರ್ಕಾರ ಹಾಗೂ ಪಕ್ಷದ ಮೇಲೆ ಹಿಡಿತ ಸಾಧಿಸುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಬ್ರೇಕ್‌ ಹಾಕಿದ್ದು, ಕೆ.ಎಚ್‌.ಮುನಿಯಪ್ಪ, ಎಚ್‌.ಕೆ.ಪಾಟೀಲ್‌ ಅವರನ್ನು ಮಾಡಿದರೆ ಅಪಸ್ವರ ಏಳಬಹುದು. ದಿನೇಶ್‌ಗುಂಡೂರಾವ್‌ ಎಲ್ಲರಿಗೂ ಹೊಂದಿಕೊಂಡು ಹೋಗುತ್ತಾರೆ ಎಂದು ಇತ್ತೀಚೆಗೆ ಎಐಸಿಸಿ ಉಸ್ತುವಾರಿ ಸಿ.ಕೆ.ವೇಣುಗೋಪಾಲ್‌ ಅವರ ಬಳಿಯೂ ಹೇಳಿದ್ದರು. ಹೀಗಾಗಿ, ಹೈಕಮಾಂಡ್‌ ಸಿದ್ದರಾಮಯ್ಯ ಅವರ ಮಾತಿಗೂ ಬೆಲೆ ಕೊಟ್ಟಂತಾಗಲಿ, ಕಟ್ಟಾ ಕಾಂಗ್ರೆಸ್ಸಿಗರು ಆ ಹುದ್ದೆಯಲ್ಲಿರಲಿ ಎಂದು ದಿನೇಶ್‌ಗುಂಡೂರಾವ್‌ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗಿದೆ.

ಕಾರ್ಯಾಧ್ಯಕ್ಷರಾಗಿ ಉತ್ತರ ಕರ್ನಾಟಕ ಹಾಗೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಈಶ್ವರ್‌ ಖಂಡ್ರೆ ಅವರನ್ನು ನೇಮಿಸುವ ಮೂಲಕ ಪ್ರಾದೇಶಿಕ ಹಾಗೂ ಜಾತಿ ಪ್ರಾತಿ ನಿಧ್ಯವೂ ದೊರೆಯುವಂತೆ ಮಾಡುವಲ್ಲಿ ಕಾಂಗ್ರೆಸ್‌ ಹೈ ಕಮಾಂಡ್‌ ಯಶ್ವಸ್ವಿಯಾದಂತಾಗಿದೆ. ಹಿರಿಯರ ಹೆಸರು ಮುಂದಿಟ್ಟು ಅಧಿಕಾರದಲ್ಲಿ ಮುಂದುವರೆಯಬೇಕೆಂಬ ಪರಮೇಶ್ವರ್‌ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ.

ಹಿಂದುಳಿದ ವರ್ಗಕ್ಕೆ ಇಲ್ಲ
ಸಮ್ಮಿಶ್ರ ಸರ್ಕಾರದಲ್ಲಿ ದಲಿತ ಸಮುದಾಯದ ಡಾ.ಜಿ.ಪರಮೇಶ್ವರ್‌ ಉಪ ಮುಖ್ಯಮಂತ್ರಿ
ಯಾಗಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಲಿಂಗಾಯತ ಅಥವಾ ಹಿಂದುಳಿದ ವರ್ಗಕ್ಕೆ ನೀಡಬೇಕು ಎಂಬ ವಾದವೂ ಇತ್ತು.  ಸಮನ್ವಯ ಸಮಿತಿ ಅಧ್ಯಕ್ಷರೂ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೂ ಸಿದ್ದರಾಮಯ್ಯ ಅವರೇ ಆಗಿರುವುದರಿಂದ ಹಿಂದುಳಿದ ವರ್ಗಕ್ಕೆ ಅವಕಾಶ ಸಿಕ್ಕಿದೆ ಎಂದು ಬ್ರಾಹ್ಮಣ ಸಮುದಾಯದ ದಿನೇಶ್‌ಗುಂಡೂರಾವ್‌ ಆಯ್ಕೆ ಮಾಡಲಾಗಿದೆ.

No Comments

Leave A Comment