Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಹಳಗನ್ನಡ ಸಾಹಿತ್ಯ ವೈಭವ ಶುರು

ಚನ್ನರಾಯಪಟ್ಟಣ: ಹಳಗನ್ನಡ ಸಾಹಿತ್ಯಕ್ಕೆ ರಾಜ, ಮಹಾರಾಜರು, ಪಂಪ, ರನ್ನ ಕವಿಗಳ ಕೊಡುಗೆ ಅಪಾರ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಶ್ಲಾಘಿಸಿದ್ದಾರೆ.

ಜೈನಕಾಶಿ ಶ್ರವಣಬೆಳಗೊಳದ ಚಾವುಂಡರಾಯ ಸಭಾಮಂಟಪದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಖೀಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಶಾಲೆಗಳಲ್ಲಿದ್ದ ಹಳಗನ್ನಡದ ಪ್ರೀತಿ ಇಂದು ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು. ಪ್ರಾಥಮಿಕ ಶಿಕ್ಷಣದಲ್ಲಿ ಹಳಗನ್ನಡ ಓದಿದ್ದು, ನಂತರ ಕುವೆಂಪು ಅವರ  ಶ್ರೀರಾಮಾಯಣ ದರ್ಶನಂ ಓದಿದ್ದನ್ನು ಸ್ಮರಿಸಿದರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶ್ರೀಕ್ಷೇತ್ರದಲ್ಲಿ ಅನೇಕ ಸಮ್ಮೇಳನಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ. ಅದರ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ತೆಗೆದುಕೊಂಡು ಆಗಮಿಸುವ ಲಕ್ಷಾಂತರ ಜನಕ್ಕೆ ತೊಂದರೆಯಾಗದಂತೆ ಕಾರ್ಯಕ್ರಮ ರೂಪಿಸಿ ಯಶಸ್ವಿಯಾಗಿದ್ದಾರೆ. ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಎಲ್ಲಾ ವರ್ಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಲವು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.  ಇದು ಅವರಿಗೆ ಕನ್ನಡದ ಮೇಲಿನ ಅಭಿಮಾನ ತೋರಿಸುತ್ತದೆ. ಅವರು ಯುವ ಸಾಹಿತಿಗಳಿಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ವಿಧಾನಸೌಧವಾಗಬೇಕು. ಹಳಗನ್ನಡ ಕುರಿತ ಸಂಶೋಧನೆಗಳು ನಡೆಯುತ್ತಿಲ್ಲ ಎಂದು ಶ್ರೀಗಳ ಜೊತೆ ಚರ್ಚಿಸಿದ್ದು, ಈ ಸಮ್ಮೇಳನ ಆಯೋಜನೆಗೆ ಕಾರಣವಾಗಿದೆ. ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಳಗನ್ನಡದ ಸಂಸ್ಕೃತಿಯನ್ನು ತಿಳಿಯಬೇಕು. ಹಳಗನ್ನಡದಲ್ಲಿರುವ ಸೋಬಗು, ವಿದ್ವತ್ತನ್ನು ಅರಿಯಬೇಕು. ಆಗ ನಾಡಿನ ಸಂಸ್ಕೃತಿ, ನಮ್ಮ ಸಾಹಿತ್ಯ ಶ್ರೀಮಂತವಾಗುತ್ತದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಮ್ಮೇಳನಕ್ಕೆ ಆಗಮಿಸಿದ್ದ ಗಣ್ಯರು ಭಗವಾನ್‌ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಡಾ.ಷ.ಶೆಟ್ಟರ್‌, ಹಿರಿಯ ಸಾಹಿತಿಗಳಾದ ಡಾ.ಹಂಪ ನಾಗರಾಜಯ್ಯ, ಹಿರಿಯ ಕವಿ ಪೊ›.ಎಸ್‌.ಜಿ.ಸಿದ್ದರಾಮಯ್ಯ, ಸಾಹಿತಿ ಕೆ.ವೈ.ನಾರಾಯಣಸ್ವಾಮಿ, ಶಾಸಕ ಸಿ.ಎನ್‌.ಬಾಲಕೃಷ್ಣ, ಹಾಸನ ಕಸಾಪ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಉಪಸ್ಥಿತರಿದ್ದರು.

No Comments

Leave A Comment