Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಶರಣ್‌ ಜೊತೆ ಅಪೂರ್ವ; ಸಂತು ನಿರ್ದೇಶನದ ವಿಕ್ಟರಿ 2 ಚಿತ್ರಕ್ಕೆ ನಾಯಕಿ

ರವಿಚಂದ್ರನ್‌ ನಿರ್ದೇಶಿಸಿ, ನಟಿಸಿದ್ದ “ಅಪೂರ್ವ’ ಚಿತ್ರದ ನಾಯಕಿ ಅಪೂರ್ವ ಎಲ್ಲಿ ಹೋದರು ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿತ್ತು. ಎರಡು ವರ್ಷಗಳ ಬಳಿಕ ಅಪೂರ್ವ ಪುನಃ ಸುದ್ದಿಯಾಗಿದ್ದಾರೆ. ಹೌದು, ಅಪೂರ್ವ ಸದ್ದಿಲ್ಲದೆಯೇ ಚಿತ್ರವೊಂದರಲ್ಲಿ ನಟಿಸಿದ್ದಾಗಿದೆ. ಅದು ಶರಣ್‌ ಅಭಿನಯದ “ವಿಕ್ಟರಿ 2′.

“ಅಲೆಮಾರಿ’ ಸಂತು ನಿರ್ದೇಶನದ ಈ ಚಿತ್ರದಲ್ಲಿ ಶರಣ್‌ಗೆ ಜೋಡಿಯಾಗಿ ಅಸ್ಮಿತಾ ಸೂದ್‌ ನಾಯಕಿ ಅಲ್ಲವೇ ಎಂಬ ಇನ್ನೊಂದು ಪ್ರಶ್ನೆ ಎದುರಾಗುವುದು ಸಹಜ. ಅಸ್ಮಿತಾ ಸೂದ್‌ ಕೂಡ ಶರಣ್‌ ಜೊತೆ ಇದ್ದಾರೆ. ಆದರೆ, ಅಸ್ಮಿತಾ ಕೇವಲ ಬೆರಳೆಣಿಕೆ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಆದರೆ, ಅಪೂರ್ವ ಇಡೀ ಚಿತ್ರದುದ್ದಕ್ಕೂ ಆವರಿಸಿಕೊಂಡಿದ್ದಾರೆ. ಹಾಗಾಗಿ, ಶರಣ್‌ ಜೊತೆ ಅಪೂರ್ವಗೆ “ವಿಕ್ಟರಿ 2′ ಎರಡನೇ ಚಿತ್ರ.

“ಅಪೂರ್ವ’ ಚಿತ್ರದ ನಂತರ ಒಂದಷ್ಟು ಕಥೆ ಬಂದರೂ, ಅಪೂರ್ವ ಮಾತ್ರ ಯಾವುದನ್ನೂ ಒಪ್ಪಿಕೊಳ್ಳಲಿಲ್ಲ. ಎರಡು ವರ್ಷಗಳ ಕಾಲ ಸುಮ್ಮನಿದ್ದ ಅಪೂರ್ವ, “ವಿಕ್ಟರಿ 2′ ಕಥೆ ಕೇಳಿದ ಕೂಡಲೇ ನಟಿಸೋಕೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಅಂದಹಾಗೆ,  “ವಿಕ್ಟರಿ 2′ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ, ಇಷ್ಟರಲ್ಲೇ ವಿದೇಶಕ್ಕೆ ಹಾರಿ ಹಾಡುಗಳನ್ನು ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದೆ.

ಸದ್ಯಕ್ಕೆ ಶರಣ್‌ ಅವರು ಇನ್ನೊಂದು ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಅವರು ಹಿಂದಿರುಗಿದ ಬಳಿಕ “ವಿಕ್ಟರಿ 2′ ಚಿತ್ರದ ಹಾಡುಗಳಿಗಾಗಿ ವಿದೇಶಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಈ ಚಿತ್ರಕ್ಕೆ ಅರ್ಜುನ್‌ ಜನ್ಯಾ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಗುರುಪ್ರಶಾಂತ್‌ ರೈ ಅವರ ಸಂಗೀತವಿದೆ.

“ವಿಕ್ಟರಿ 2′ ಅಂದಾಕ್ಷಣ, “ವಿಕ್ಟರಿ’ ಸಿನಿಮಾದ ನೆನಪಾಗುತ್ತೆ. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ ನಿರ್ದೇಶಕ “ಅಲೆಮಾರಿ’ ಸಂತು. ಆದರೆ, “ವಿಕ್ಟರಿ’ ಚಿತ್ರದಲ್ಲಿದ್ದ ಪಾತ್ರಗಳು ಇಲ್ಲೂ ಮುಂದುವರೆಯುತ್ತವೆ. ಆ ಚಿತ್ರ ನೋಡಿದವರಿಗೆ ಈ ಚಿತ್ರ ಬೇರೆ ಅಂತೆನಿಸುತ್ತದೆ. ಇದೊಂದು ಪಕ್ಕಾ ಮನರಂಜನೆಯ ಚಿತ್ರವಾಗಿದ್ದು, ಬಹುತೇಕ ಪ್ರೇಕ್ಷಕರಿಗೆ ನಿರಾಸೆ ಮಾಡುವುದಿಲ್ಲ ಎಂಬ ಗ್ಯಾರಂಟಿ ಕೊಡುತ್ತಾರೆ ನಿರ್ದೇಶಕರು. ಈ ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ತರುಣ್‌ ಸುಧೀರ್‌ ಅವರ ಕಥೆ ಇದೆ.

No Comments

Leave A Comment