Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಆರ್ಜೆಂಟೀನಾಕ್ಕೆ ಇಂದು ಅಗ್ನಿಪರೀಕ್ಷೆ

ನಿಜ್ನಿ ನೊವೊYರೊಡ್‌: ಕೂಟದ ನೆಚ್ಚಿನ ತಂಡವೆಂದು ಸುದ್ದಿಯಲ್ಲಿದ್ದ, ಲಿಯೋನೆಲ್‌ ಮೆಸ್ಸಿ ಸಾರಥ್ಯದ ಆರ್ಜೆಂಟೀನಾ ತಂಡವೀಗ ತೀವ್ರ ಇಕ್ಕಟ್ಟಿನಲ್ಲಿದೆ. ಗುರುವಾರ ರಾತ್ರಿಯ ತನ್ನ ದ್ವಿತೀಯ ಲೀಗ್‌ ಪಂದ್ಯದಲ್ಲಿ ಕ್ರೊವೇಶಿಯಾವನ್ನು ಎದುರಿಸಲಿದ್ದು, ಮುಂದಿನ ಸುತ್ತು ತಲುಪಬೇಕಾದರೆ ಗೆಲುವು ಅನಿವಾರ್ಯ ಎಂಬ ಸ್ಥಿತಿಯಲ್ಲಿದೆ.

ಆರ್ಜೆಂಟೀನಾದ ಇಂಥದೊಂದು ಸ್ಥಿತಿಗೆ ಕಾರಣ ಐಸ್‌ಲ್ಯಾಂಡ್‌ ಎದುರಿನ “ಡಿ’ ವಿಭಾಗದ ಪಂದ್ಯವನ್ನು 1-1 ಅಂತರದಿಂದ ಡ್ರಾ ಮಾಡಿಕೊಂಡದ್ದು ಹಾಗೂ ಕ್ರೊವೇಶಿಯಾ ತನ್ನ ಮೊದಲ ಪಂದ್ಯದಲ್ಲಿ ನೈಜೀರಿಯಾವನ್ನು 2-0 ಗೋಲುಗಳಿಂದ ಮಣಿಸಿದ್ದು.

ಐಸ್‌ಲ್ಯಾಂಡ್‌ ವಿರುದ್ಧ ಥಂಡಾ!
ಸಾಮಾನ್ಯ ಮಟ್ಟದ ತಂಡ ವಾಗಿದ್ದ, ಇದೇ ಮೊದಲ ಸಲ ಆಡಲಿಳಿದಿದ್ದ ಐಸ್‌ಲ್ಯಾಂಡ್‌ ವಿರುದ್ಧ ಆರ್ಜೆಂಟೀನಾ ತೀರಾ ಕಳಪೆ ಪ್ರದರ್ಶನ ನೀಡಿದ್ದು ತಂಡದ ಒಟ್ಟು ಸಾಮರ್ಥ್ಯವನ್ನೇ ಸಂಶಯಿಸುವಂತೆ ಮಾಡಿದೆ. ಮೆಸ್ಸಿಯ ಪೆನಾಲ್ಟಿ ವೈಫ‌ಲ್ಯ ಕೂಡ ಚಿಂತೆಗೆ ಕಾರಣವಾಗಿದೆ.

4 ವರ್ಷಗಳ ಹಿಂದೆ ಬ್ರಝಿಲ್‌ನಲ್ಲಿ ಫೈನಲ್‌ ತಲುಪಿ ಪ್ರಶಸ್ತಿ ವಂಚಿತವಾಗಿದ್ದ ಆರ್ಜೆಂಟೀನಾ ಪಡೆ ಕ್ರೊವೇಶಿಯಾ ವಿರುದ್ಧ ತನ್ನ ಸಾಮರ್ಥ್ಯಕ್ಕೂ ಮಿಗಿಲಾದ  ಪ್ರದರ್ಶನ  ನೀಡಬೇಕಾದುದು ಅನಿವಾರ್ಯ. ಅಕಸ್ಮಾತ್‌ ಈ ಪಂದ್ಯದಲ್ಲೂ ಹಿನ್ನಡೆ ಅನುಭವಿಸಿದರೆ ಆರ್ಜೆಂಟೀನಾ 2002ರ ಬಳಿಕ ಮೊದಲ ಬಾರಿಗೆ ಮೊದಲ ಸುತ್ತಿನಿಂದಲೇ ನಿರ್ಗಮಿಸುವ ಸಂಕಟಕ್ಕೆ ಸಿಲುಕಲಿದೆ. ಹೀಗಾಗಿಯೇ ಈ ಪಂದ್ಯ ಮೆಸ್ಸಿ ಪಡೆಯ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ.

ಮೆಸ್ಸಿಗೆ ಸಂಪೂರ್ಣ ಬೆಂಬಲ
ಐಸ್‌ಲ್ಯಾಂಡ್‌ ವಿರುದ್ಧ ಆರ್ಜೆಂಟೀನಾ ತೋರ್ಪ ಡಿಸಿದ ಆಟ ಡೀಗೊ ಮರಡೋನಾ ಸಹಿತ ಎಲ್ಲರಿಂದಲೂ ಟೀಕೆಗೊಳಗಾಗಿತ್ತು. “ನಿಜಕ್ಕೂ ಇದು ನಾಚಿಕೆಗೇಡು’ ಎಂದು ಮರಡೋನಾ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನು ಆರ್ಜೆಂಟೀನಾ ಆಟಗಾರರು ಗಂಭೀರ ವಾಗಿಯೇ ತೆಗೆದು ಕೊಂಡಿದ್ದಾರೆ. “ನಾವೆಲ್ಲರೂ ಮೆಸ್ಸಿ ಜತೆಗಿದ್ದೇವೆ. ಸಹ ಆಟಗಾರರಿಂದ ತನಗೆ ಹಿಂದಿ ಗಿಂತ ಅಧಿಕ ಬೆಂಬಲವಿದೆ ಎಂದು ಮೆಸ್ಸಿಗೂ ತಿಳಿದಿದೆ’ ಎಂದಿದ್ದಾರೆ ತಂಡದ ಸ್ಟಾರ್‌ ಸ್ಟ್ರೈಕರ್‌ ಪೌಲೊ ಡಿಬಾಲ.

“ತನ್ನ ತಂಡಕ್ಕಾಗಿ, ದೇಶಕ್ಕಾಗಿ ಏನು ಮಾಡ ಬೇಕೆಂಬುದು ಮೆಸ್ಸಿಗೆ ಚೆನ್ನಾಗಿ ಗೊತ್ತು. ಇದನ್ನು ಅವರು ಖಂಡಿತ ಸಾಧಿಸಿ ತೋರಿಸಲಿದ್ದಾರೆ’ ಎಂಬುದು ಡಿಫೆಂಡರ್‌ ಕ್ರಿಸ್ಟಿಯನ್‌ ಅನ್ಸಾಲ್ದಿ ಹೇಳಿಕೆ.

ಈ ನಿರ್ಣಾಯಕ ಪಂದ್ಯಕ್ಕಾಗಿ ಆರ್ಜೆಂಟೀನಾ ತನ್ನ ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಸಂಕಟದಲ್ಲೂ ದಿಟ್ಟ ಆಟ
ಕ್ರೊವೇಶಿಯಾ ಈ ಕೂಟಕ್ಕೆ ಆಗಮಿಸುವ ವೇಳೆ ಸಾಕಷ್ಟು ಸಮಸ್ಯೆಗಳನ್ನು ಹೊತ್ತುಕೊಂಡೇ ಬಂದಿತ್ತು. ನಾಯಕ ಲ್ಯೂಕಾ ಮೊಡ್ರಿಕ್‌ ವಿರುದ್ಧ ಭ್ರಷ್ಟಾಚಾರ ಪ್ರಕರಣವೊಂದು ದಾಖಲಾದದ್ದು ಇದರಲ್ಲಿ ಪ್ರಮುಖವಾದುದು. ಬಳಿಕ ಸ್ಟ್ರೈಕರ್‌ ನಿಕೋಲ ಕಲಿನಿಕ್‌ ಬೆನ್ನು ನೋವಿನಿಂದ ತವರಿಗೆ ವಾಪಸಾಗಬೇಕಾಯಿತು. ಆದರೂ ನೈಜೀರಿಯಾ ವಿರುದ್ಧ ಕ್ರೊವೇಶಿಯನ್ನರ ಆಟ ಅಮೋಘ ಮಟ್ಟದಲ್ಲಿತ್ತು. ಇದು ಆರ್ಜೆಂಟೀನಾ ವಿರುದ್ಧವೂ ಪುನರಾವರ್ತನೆಗೊಂಡೀತೇ? ಕಾದು ನೋಡಬೇಕು.

ಫಿಫಾ ನೋಟ
ಆರ್ಜೆಂಟೀನಾ-ಕ್ರೊವೇಶಿಯಾ
– ಆರ್ಜೆಂಟೀನಾ-ಕ್ರೊವೇಶಿಯಾ ಈವರೆಗೆ 4 ಸಲ ಮುಖಾಮುಖೀಯಾಗಿವೆ. ಇದರಲ್ಲಿ ಒಂದು ಮಾತ್ರ ವಿಶ್ವಕಪ್‌ ಪಂದ್ಯವಾಗಿತ್ತು. 1998ರ ಈ ಮುಖಾಮುಖೀಯನ್ನು ಆರ್ಜೆಂಟೀನಾ 1-0 ಅಂತರದಿಂದ ಜಯಿಸಿತ್ತು. ಉಳಿದೆಲ್ಲವೂ ಫ್ರೆಂಡ್ಲಿ ಮ್ಯಾಚ್‌ ಆಗಿದ್ದವು. ಇದರಲ್ಲಿ ಇತ್ತಂಡಗಳು ತಲಾ ಒಂದೊಂದು ಜಯ ಕಂಡರೆ, ಉಳಿದೊಂದು ಪಂದ್ಯ ಡ್ರಾ ಆಗಿತ್ತು.
– ಇತ್ತಂಡಗಳು 2014ರ ಬಳಿಕ ಮೊದಲ ಸಲ ಮುಖಾಮುಖೀಯಾಗುತ್ತಿವೆ. ಅಂದಿನ ಫ್ರೆಂಡ್ಲಿ ಪಂದ್ಯದಲ್ಲಿ ಲಿಯೋನೆಲ್‌ ಮೆಸ್ಸಿ ಪೆನಾಲ್ಟಿ ಸಾಹಸದಿಂದ ಆರ್ಜೆಂಟೀನಾ 2-1ರಿಂದ ವಿಜಯಿಯಾಗಿತ್ತು.
– ಲಿಯೋನೆಲ್‌ ಮೆಸ್ಸಿ ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲು ಹೊಡೆದದ್ದೇ ಕ್ರೊವೇಶಿಯಾ ವಿರುದ್ಧ. ಅದು 2006ರ ಫ್ರೆಂಡ್ಲಿ ಪಂದ್ಯವಾಗಿತ್ತು. ಇದನ್ನು ಕ್ರೊವೇಶಿಯಾ 3-2 ಗೋಲುಗಳಿಂದ ಗೆದ್ದಿತ್ತು.
– ಕ್ರೊವೇಶಿಯಾ ಕಳೆದ ಸತತ 5 ವಿಶ್ವಕಪ್‌ ಪಂದ್ಯಗಳಲ್ಲಿ ಗೋಲು ಬಾರಿಸಿ ಮೆರೆದಿದೆ. ಇದು ಕ್ರೊವೇಶಿಯಾದ ವಿಶ್ವಕಪ್‌ ದಾಖಲೆಯಾಗಿದೆ.

No Comments

Leave A Comment