ಜಾತ್ಯತೀತ ಸಮಾಜ, ರಾಷ್ಟ್ರ ನಿರ್ಮಾಣ ಯುವ ಜನತೆ ಪಾತ್ರ ಹಿರಿದು; ಸಲೀಂ ಅಹಮದ್

ಉಡುಪಿ;ಸೆ.22. ದೇಶದ ಒಟ್ಟು ಜನಸಂಖ್ಯೆಯ ಶೇ.70ರಷ್ಟು ಮಂದಿ ಯುವ ಜನತೆಯನ್ನು ಹೊಂದಿರುವ ಭಾರತ, ಅತ್ಯಂತ ಅಧಿಕ ಯುವಶಕ್ತಿಯನ್ನು ಹೊಂದಿರುವ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿದೆ. ಜಾತ್ಯತೀತ ಸಮಾಜ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಹಿರಿದು ಎಂದು ನೆಹರೂ ಯುವ ಕೇಂದ್ರ ಸಂಘಟನೆ ಡೈರೆಕ್ಟರ್ ಜನರಲ್ ಸಲೀಂ ಅಹಮದ್ ಹೇಳಿದರು.

ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಆಶ್ರಯದಲ್ಲಿ ಶನಿವಾರ ನಡೆದ ಜಿಲ್ಲಾ ನೆಹರೂ ಯುವ ಕೇಂದ್ರ ಉದ್ಘಾಟನೆ ಸಂದರ್ಭ ಆಯೋಜಿಸಲಾಗಿದ್ದ ಜಿಲ್ಲಾ ಯುವ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ರಾಷ್ಟ್ರವ್ಯಾಪಿ 501ನೆಹರೂ ಯುವ ಕೇಂದ್ರಗಳಿದ್ದವು. ಈ ಬಾರಿ 123 ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಯುವ ಕೇಂದ್ರದ ಮೂಲಕ ನಾಯಕತ್ವ ನಿರ್ಮಾಣ ಸೇರಿದಂತೆ ಯುವ ಜನತೆಗೆ ಪೂರಕವಾದ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕೇಂದ್ರ ವತಿಯಿಂದ ಈಗಾಗಲೇ 200 ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಆಯೋಜಿಸಲಾಗಿದೆ. ಯುವ ಜನತೆಯಲ್ಲಿ ಸ್ವಾತಂತ್ರ್ಯ ಚಳುವಳಿ ಮಾಹಿತಿ, ರಾಷ್ಟ್ರಭಕ್ತಿ ಪ್ರಜ್ಞೆ , ಕ್ರೀಡೆ ಇತ್ಯಾದಿಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.

2012ನೇ ವರ್ಷದಲ್ಲಿ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕೌಶಲಾಭಿವೃದ್ಧಿ ಕಾರ್‍ಯಕ್ರಮ ಆಯೋಜಿಸುವ ಮೂಲಕ ಯುವಜನತೆ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಲಾಗುತ್ತಿದೆ ಎಂದರು.

ಕೇಂದ್ರವನ್ನು ಉದ್ಘಾಟಿಸಿದ ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನೆಹರೂ ಯುವ ಕೇಂದ್ರ ಸ್ಥಾಪಿಸಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದ್ದು, ನೂತನವಾಗಿ ಅಸ್ತಿತ್ವಗೊಂಡ ಜಿಲ್ಲೆಗಳಲ್ಲೂ ಕೇಂದ್ರ ಸ್ಥಾಪಿಸಲಾಗಿದೆ. ಯುವ ಜನತೆಯನ್ನು ರಾಷ್ಟ್ರೀಯ ವಾಹಿನಿಯಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಮಹಿಳಾ ಸಬಲೀಕರಣಕ್ಕೂ ಅವಕಾಶ ಕಲ್ಪಿಸಲಾಗುವುದು. ಯುವ ಜನತೆ ವಿಶ್ವಭ್ರಾತೃತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಸಂಸದ ಕೆ. ಜಯಪ್ರಕಾಶ ಹೆಗ್ಡೆ, ರಾಜ್ಯ ಮೂರನೇ ಹಣಕಾಸು ಆಯೋಗ ಅನುಷ್ಠಾನ ಸಮಿತಿ ಕಾರ್‍ಯಪಡೆ ಅಧ್ಯಕ್ಷ ಎ. ಜಿ. ಕೊಡ್ಗಿ, ಶಾಸಕರಾದ ಲಾಲಾಜಿ ಮೆಂಡನ್ ಮತ್ತು ಗೋಪಾಲ ಭಂಡಾರಿ, ಜಿ. ಪಂ. ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಉಡುಪಿ ತಾ. ಪಂ. ಅಧ್ಯಕ್ಷ ದೇವದಾಸ ಹೆಬ್ಬಾರ್ ಅಭ್ಯಾಗತರಾಗಿದ್ದರು.

ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಸಿ. ಜೆ. ಎಫ್. ಡಿ’ಸೋಜಾ, ವಲಯ ನಿರ್ದೇಶಕ ಆರ್. ನಟರಾಜನ್ ಇದ್ದರು. ಚೇರ್ಕಾಡಿ ಉದಯಕುಮಾರ್ ಶೆಟ್ಟಿ ಮತ್ತು ಶೈಜಾ ಮ್ಯಾಥ್ಯೂ ಸದ್ಭಾವನಾ ಜ್ಯೋತಿ ತಂದರು. ಎಸ್. ವಿ. ಜಮಾದಾರ್ ಸ್ವಾಗತಿಸಿದರು.