Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಬಶೀರ್‌ ಕೊಲೆ ಯತ್ನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ಕೊಟ್ಟಾರ ಚೌಕಿ ಬಳಿ ಜ. 3ರಂದು ಫಾಸ್ಟ್‌ ಫುಡ್‌ ವ್ಯಾಪಾರಿ ಅಬ್ದುಲ್‌ ಬಶೀರ್‌ ಮೇಲೆ ಮಾರಣಾಂತಿಕ ಹ‌ಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ಪಡೀಲ್‌ನ ಅಳಪೆ ಕಂಡೇವು ಮನೆಯ ಸೋದರರಾದ ಧನುಷ್‌ ಪೂಜಾರಿ (22) ಮತ್ತು ಕಿಶನ್‌ ಪೂಜಾರಿ (21), ಕಾಸರಗೋಡು ಉಪ್ಪಳದ ಅಂಬಾರ್‌ ಕೃಷ್ಣನಗರದ ಶ್ರೀಜಿತ್‌ ಪಿ.ಕೆ. ಯಾನೆ ಶ್ರೀಜು (25) ಮತ್ತು ಮಂಜೇಶ್ವರ ಸಮೀಪದ ಕುಂಜತ್ತೂರು ಜೋಗಿಗುಡ್ಡೆ ಮನೆಯ ಸಂದೇಶ್‌ ಕೋಟ್ಯಾನ್‌ (22) ಬಂಧಿತರು.

ಜ.3ರಂದು ರಾತ್ರಿ10 ಗಂಟೆ ವೇಳೆಗೆ ಅಬ್ದುಲ್‌ ಬಶೀರ್‌ ಅವರು ಫಾಸ್ಟ್‌ಫುಡ್‌ ಅಂಗಡಿಯನ್ನು ಬಂದ್‌ ಮಾಡಿ ಮನೆಗೆ ಹೋಗಲು ಹೊರಡುವಷ್ಟರಲ್ಲಿ ಬೈಕ್‌ಗಳಲ್ಲಿ ಬಂದ ಆರೋಪಿಗಳು ಬಶೀರ್‌ ಅವರನ್ನು ಮಾರಕಾಯುಧಗಳಿಂದ ಯದ್ವಾ ತದ್ವಾ ಕಡಿದು ಪರಾರಿಯಾಗಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಬಶೀರ್‌ ಅವರು ರಸ್ತೆ ಬದಿಗೆ ಓಡಿ ಬಂದು ಬಿದ್ದಿದ್ದು, ಅವರನ್ನು ಆ್ಯಂಬುಲೆನ್ಸ್‌ ಚಾಲಕ ಶೇಖರ್‌ ಕುಲಾಲ್‌ ತಮ್ಮ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ದೀಪಕ್‌ ಹತ್ಯೆಗೆ ಪ್ರತೀಕಾರ
ಜ. 3ರಂದು ಕಾಟಿಪಳ್ಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವುದಕ್ಕೆ ಪ್ರತೀಕಾರವಾಗಿ ಬಶೀರ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ಜ. 3ರಂದು ನಗರದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಅವರಿಗೆ ದೀಪಕ್‌ ರಾವ್‌ ಕೊಲೆ ಬಗ್ಗೆ ಮಾಹಿತಿ ಲಭಿಸಿತ್ತು. ಹಾಗಾಗಿ ಯಾರಾದರೂ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಬೇಕೆಂಬ ದುರಾಲೋಚನೆ ಅವರಿಗೆ ಹೊಳೆದಿದ್ದು, ಈ ಹಿನ್ನೆಲೆಯಲ್ಲಿ ಆಯುಧಗಳನ್ನು ಹಿಡಿದುಕೊಂಡು ರಾತ್ರಿ ವೇಳೆ ಬೈಕ್‌ನಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ಕೊಟ್ಟಾರ ಚೌಕಿಯಲ್ಲಿ ಅವರಿಗೆ ಸಿಕ್ಕಿದ್ದು ಅಬ್ದುಲ್‌ ಬಶೀರ್‌. ಈ ಹಿಂದೆ ಕೆಲವು ಬಾರಿ ಚಿಕನ್‌ ತಿನ್ನಲು ಬಶೀರ್‌ ನಡೆಸುತ್ತಿದ್ದ ಫಾಸ್ಟ್‌ಫ‌ುಡ್‌ ಅಂಗಡಿಗೆ ಆರೋಪಿಗಳು ಬಂದಿದ್ದರು. ಬಶೀರ್‌ ಪರಿಚಯ ಇಲ್ಲದಿದ್ದರೂ ಅವರು ಮುಸ್ಲಿಂ ಎಂಬುದು ಆರೋಪಿಗಳಿಗೆ ತಿಳಿದಿತ್ತು. ಹಾಗೆ ಬಂದು ಆರೋಪಿಗಳು ಬಶೀರ್‌ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿದ್ದರು ಎಂದು ಆಯುಕ್ತರು ವಿವರಿಸಿದರು.

ಪತ್ತೆ ತಂಡಕ್ಕೆ ಪ್ರಶಂಸೆ, ಬಹುಮಾನ ಘೋಷಣೆ
ಘಟನೆ ನಡೆದ ಮೂರೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣವನ್ನು ಭೇದಿಸಿದ ತಂಡವನ್ನು ಪೊಲೀಸ್‌ ಇಲಾಖೆ ಪ್ರಶಂಸಿಸಿದ್ದು, ಸೂಕ್ತ ಬಹುಮಾನವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಪೊಲೀಸ್‌ ಅಯುಕ್ತರು ತಿಳಿಸಿದರು.

ಹಳೆ ಅರೋಪಿಗಳು
ಎಲ್ಲ ನಾಲ್ವರು ಆರೋಪಿಗಳು ಹಳೆ ಆರೋಪಿಗಳಾಗಿದ್ದಾರೆ. ಆರೋಪಿ ಧನುಷ್‌ ಪೂಜಾರಿ ಮೇಲೆ ಈ ಹಿಂದೆ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಮತ್ತು ದೊಂಬಿ ಪ್ರಕರಣ ದಾಖಲಾಗಿದೆ. ಕಿಶನ್‌ ಪೂಜಾರಿ ವಿರುದ್ಧ 3 ಪ್ರಕರಣ ಈ ಹಿಂದೆ ದಾಖಲಾಗಿವೆ. ಸೋದರರಾಗಿರುವ ಇವರು ಕಳೆದ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡ್ಯಾರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪವಿದೆ.

ಆರೋಪಿ ಶ್ರೀಜಿತ್‌ ಮೇಲೆ ಈ ಹಿಂದೆ ಕಾಸರಗೋಡು ವ್ಯಾಪ್ತಿಯಲ್ಲಿ 6 ಪ್ರಕರಣಗಳು ಮತ್ತು ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣ ದಾಖಲಾಗಿದೆ. ಇನ್ನೋರ್ವ ಆರೋಪಿ ಸಂದೇಶ್‌ ಕೋಟ್ಯಾನ್‌ ವಿರುದ್ಧ ಈ ಹಿಂದೆ ಕಾಸರಗೋಡಿದ ಬದಿಯಡ್ಕ ಪೊಲೀಸ್‌ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಇಬ್ಬರು ರೌಡಿಶೀಟರ್‌ಗಳು
ಆರೋಪಿಗಳು ಈ ಹಿಂದೆ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿನಲ್ಲಿ ಹೊರಗೆ ಬಂದಿದ್ದರು. ಧನುಷ್‌ ಮತ್ತು ಕಿಶನ್‌ ಮೇಲೆ ರೌಡಿ ಶೀಟರ್‌ ಹಾಕಲಾಗಿತ್ತು. ಅವರ ಮೇಲೆ ಗೂಂಡಾ ಕಾಯ್ದೆ ಜಾರಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಕಾಸರಗೋಡಿನ ಆರೋಪಿಗಳ ಕುರಿತಂತೆ ಅಲ್ಲಿನ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗುವುದು. ಆರೋಪಿಗಳು ಯಾವುದೇ ಸಂಘಟನೆಗಳಿಗೆ ಸೇರಿದವರೇ ಎನ್ನುವ ಕುರಿತು ಮುಂದಿನ ತನಿಖೆಯಿಂದ ತಿಳಿದು ಬರ ಬೇಕಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪುನಃ ಪೊಲೀಸ್‌ ಕಸ್ಟಡಿಗೆ ಪಡೆಯಲಾಗುವುದು ಎಂದು ಆಯುಕ್ತರು ವಿವರಿಸಿದರು.

ಪತ್ತೆ ಕಾರ್ಯಾಚರಣೆಯು ಸಿಸಿಬಿ ಇನ್ಸ್‌ಪೆಕ್ಟರ್‌ ಶಾಂತಾರಾಮ ನೇತೃತ್ವದಲ್ಲಿ ನಡೆದಿದ್ದು, ಪಿಎಸ್‌ಐ ಶ್ಯಾಂಸುಂದರ್‌, ಎಎಸ್‌ಐ ಹರೀಶ್‌, ಸಿಬಂದಿ ರಾಮ ಪೂಜಾರಿ, ಗಣೇಶ್‌, ಚಂದ್ರಶೇಖರ್‌, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್‌, ರಾಜೇಂದ್ರ ಪ್ರಸಾದ್‌, ಅಬ್ದುಲ್‌ ಜಬ್ಟಾರ್‌, ಮಣಿ, ಪ್ರಶಾಂತ್‌ ಶೆಟ್ಟಿ, ಅಶಿತ್‌ ಡಿ’ಸೋಜಾ, ತೇಜ ಕುಮಾರ್‌, ರಿತೇಶ್‌ ಅವರು ಭಾಗವಹಿಸಿದ್ದರು.

ಪ್ರಕರಣದ ತನಿಖೆಯನ್ನು ಸಿಸಿಬಿ ಘಟಕದ ಎಸಿಪಿ ವಲೆಂಟೈನ್‌ ಡಿ’ಸೋಜಾ ಅವರು ನಡೆಸುತ್ತಿದ್ದಾರೆ.

No Comments

Leave A Comment