ಮೇವು ಹಗರಣ; ಲಾಲೂಗೆ 3.5 ವರ್ಷ ಜೈಲು, 5 ಲಕ್ಷ ರೂ. ದಂಡಪಾಟ್ನ: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್ ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಗೆ ರಾಂಚಿಯ ವಿಶೇಷ ಸಿಬಿಐ ಕೋರ್ಟ್ ಮೂರುವರೆ ವರ್ಷ ಜೈಲುಶಿಕ್ಷೆ ಹಾಗೂ ಐದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.ಮೇವು ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಶೇಷ ಕೋರ್ಟ್ ನ್ಯಾಯಾಧೀಶ ಶಿವಪಾಲ್ ಸಿಂಗ್ ರಾಂಚಿಯ ಬಿರ್ಸಾ ಮುಂಡಾ ಜೈಲಲ್ಲಿರುವ ಲಾಲು ಯಾದವ್ರ ವಿಚಾರಣೆ ಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ್ದರು. ಈ ಸಂದರ್ಭದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ತಮಗೆ ಅನಾರೋಗ್ಯ ಮತ್ತು ಇಳಿ ವಯಸ್ಸಿನ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣ ಕಡಿತ ಮಾಡಬೇಕು ಎಂದು ಕೋರಿದ್ದರು.ಯಾದವ್ ಮಾತ್ರವಲ್ಲದೆ ಆರ್ಜೆಡಿ ನಾಯಕ ಆರ್.ಕೆ.ರಾಣಾ, ನಿವೃತ್ತ ಐಎಎಸ್ ಅಧಿಕಾರಿಗಳಾದ ಪೂಲ್ ಚಂದ್ ಸಿಂಗ್, ಮಹೇಶ್ ಪ್ರಸಾದ್ ಮತ್ತು ಇತರ ಅಧಿಕಾರಿಗಳ ಪರ ವಕೀಲರು ತಮ್ಮ ವಾದ ಮಂಡಿಸಿದ್ದರು.ಹೈಲೈಟ್ಸ್:*ಮೇವು ಹಗರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಯ ಪ್ರಮಾಣ ಪ್ರಕಟಿಸುವುದನ್ನು ಕೋರ್ಟ್ ಈ ವಾರದಲ್ಲಿ ಮೂರು ಬಾರಿ ಮುಂದೂಡಿತ್ತು.*ಪ್ರಕರಣದ ತೀರ್ಪನ್ನು ನೀಡಿದ್ದ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು, ಶಿಕ್ಷೆಯ ಪ್ರಮಾಣ ಘೋಷಿಸುವ 2 ದಿನ ಮುನ್ನ ಲಾಲೂ ಗೆ ಸಂಬಂಧಪಟ್ಟ ವ್ಯಕ್ತಿಯೊಬ್ಬರು ತನಗೆ ದೂರವಾಣಿ ಕರೆ ಮಾಡಿರುವುದಾಗಿ ತಿಳಿಸಿದ್ದರು.*ನಾನು ನಿಮ್ಮ ಬಗ್ಗೆ ಹಲವಾರು ವಿಷಯಗಳನ್ನು ಕೇಳಿದ್ದೇನೆ, ಆದರೆ ನೀವು ಆ ಬಗ್ಗೆ ಚಿಂತಿಸಬೇಡಿ. ನಾನು ಕೇವಲ ಕಾನೂನನ್ನು ಮಾತ್ರ ಅನುಸರಿಸುತ್ತೇನೆ ಎಂದು ಜಡ್ಜ್ ಲಾಲೂಗೆ ತಿಳಿಸಿದ್ದರು.