Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಹಿಂಸಾರೂಪಕ್ಕೆ ತಿರುಗಿದ ಇರಾನ್ ಪ್ರತಿಭಟನೆ, 12 ಸಾವು; ಶಾಂತಿಗಾಗಿ ಅಧ್ಯಕ್ಷ ರೌಹಾನಿ ಮನವಿ

ಟೆಹರಾನ್: ಇರಾನ್‌ ನ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಈ ವರೆಗೂ ಕನಿಷ್ಛ 12 ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಕಲ್ಲು ತೂರಾಟಗಾರರ ಮೇಲೆ ಭದ್ರತಾ ಸಿಬ್ಬಂದಿಗಳು ಫೈರಿಂಗ್ ನಡೆಸಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ ಇರಾನ್ ಅಧ್ಯಕ್ಷ ರೌಹಾನಿ ವಿರುದ್ಧದ ಆಕ್ರೋಶ  ಮತ್ತಷ್ಟು ಗಟ್ಟಿಯಾಗಿದ್ದು, ಪ್ರತಿಭಟನಾಕಾರರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ ಎಂದ ವಿಪಕ್ಷಗಳು ಟೀಕಿಸುತ್ತಿವೆ. ಅಂತೆಯೇ ಸರ್ಕಾರ ತನ್ನ ವಿರುದ್ಧದ ಚೀಕೆ ಟಿಪ್ಪಣಿಗಳನ್ನು ಸಹಿಸಲಾಗದೇ ಪ್ರತಿಭಟನಾಕಾರರ ಮೇಲೆ ಹಲ್ಲೆ  ಮಾಡುತ್ತಿದೆ ಎಂದು ಆರೋಪಿಸಿವೆ.

ಶಾಂತಿಗಾಗಿ ಅಧ್ಯಕ್ಷ ರೌಹಾನಿ ಮನವಿ

ಇನ್ನು ಇರಾನ್ ನಾದ್ಯಂತ ಕಾಡ್ಗಿಚ್ಚಿನಂತೆ ಪ್ರತಿಭಟನೆ ಹಬ್ಬುತ್ತಿದ್ದು, ಅಧ್ಯಕ್ಷ ಹಸನ್ ರೌಹಾನಿ ಅವರು ಶಾಂತಿಯಿಂದ ವರ್ತಿಸುವಂತೆ ಪ್ರತಿಭಟನಕಾರರಿಗೆ ಕರೆ ನೀಡಿದ್ದಾರೆ. ಅಂತೆಯೇ ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ  ಟೀಕೆ, ಟಿಪ್ಪಣಿಗಳಿಗೆ ಇನ್ನೂ ಹೆಚ್ಚಿನ ಅವಕಾಶ ನೀಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ. ಇದೇ ವೇಳೆ ಪ್ರತಿಭಟನೆಯ ಹೆಸರಿನಲ್ಲಿ ಜನರು ಹಿಂಸಾಚಾರಕ್ಕಿಳಿಯುವುದನ್ನು ಖಂಡಿಸಿರುವ ರೌಹಾನಿ, ತನ್ನ ಸರ್ಕಾರವು  ಟೀಕೆಗಳಿಗೆ ಮುಕ್ತ ಅವಕಾಶವನ್ನು ನೀಡುವುದಾಗಿ ತಿಳಿಸಿದರು.

ಕಾಡ್ಗಿಚ್ಚಿನಂತೆ ಹಬ್ಬಿದ ಪ್ರತಿಭಟನೆ

ಮತ್ತೊಂದೆಡೆ ಇರಾನ್ ವಾಯುವ್ಯದಲ್ಲಿ ಸೀಮಿತವಾಗಿದ್ದ ಪ್ರತಿಭಟನೆ ಕ್ಷಣಗಣನೆ ವ್ಯಾಪಕವಾಗಿ ಹಬ್ಬುತ್ತಿದ್ದು, ವಾಯುವ್ಯದ ಪುಟ್ಟ ಪಟ್ಟಣವಾದ ಟಾಕೆಸ್ತಾನ್‌ ನಲ್ಲಿ ಪ್ರತಿಭಟನಕಾರರು ಧರ್ಮಗುರುಗಳ ಶಿಕ್ಷಣ ಕೇಂದ್ರ ಹಾಗೂ ಸರ್ಕಾರಿ  ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ಇಝೆಹ್, ಕೆರ್ಮಾನ್‌ ಶಾ ಹಾಗೂ ಖೊರ್ರಂಬಾದ್,ಶಾಹಿನ್‌ಶಾರ್ ಹಾಗೂ ಝಾಂಜನ್ ನಗರಗಳಲ್ಲಿ ವ್ಯಾಪಕವಾದ ಪ್ರತಿಭಟನೆಗಳು ನಡೆಯುತ್ತಿವೆ.

ಏಕೆ ಈ ಪ್ರತಿಭಟನೆ?

ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವುದನ್ನು ಖಂಡಿಸಿ ಮಾಶಂಡ್ ನಗರದಲ್ಲಿ ಗುರುವಾರ ನಡೆದ ಪ್ರತಿಭಟನೆಯು ಆನಂತರ ಆಡಳಿತ ವಿರೋಧಿ ಚಳವಳಿಯಾಗಿ ಮಾರ್ಪಟ್ಟಿತ್ತು. ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ರವಿವಾರ  ನಡೆದ ಪ್ರತಿಭಟನೆಗೆ ಸಂಬಂಧಿಸಿ ಪೊಲೀಸರು ಇನ್ನೂರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ದೇಶದ ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸುವ ಹಾಗೂ ಸಾಮಾಜಿಕ  ಉದ್ವಿಗ್ನತೆಯನ್ನು ಶಮನಗೊಳಿಸುವಲ ಭರವಸೆಯೊಂದಿಗೆ ಹಸನ್ ರೂಹಾನಿ 2013ರಲ್ಲಿ ಅಧಿಕಾರಕ್ಕೇರಿದ್ದರು. ಆದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೀವನವೆಚ್ಚ ಹಾಗೂ ನಿರುದ್ಯೋಗಪ್ರಮಾಣದಲ್ಲಿ ಶೇ. 12ರಷ್ಟು ಏರಿಕೆಯು,  ದೇಶದಲ್ಲಿ ಆರ್ಥಿಕ ಪ್ರಗತಿ ತುಂಬಾ ಕುಂಠಿತವಾಗಿರುವ ಬಗ್ಗೆ ಭಾರೀ ಸಂಖ್ಯೆಯ ಇರಾನ್ ಪ್ರಜೆಗಳು ಅಸಮಾಧಾನ ಹೊಂದಿದ್ದಾರೆ.

No Comments

Leave A Comment