Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅಸಭ್ಯ ವರ್ತನೆ: ಆರು ಮಂದಿ ವಶಕ್ಕೆ-ಲಾಠಿ ಪ್ರಹಾರ

ಬೆಂಗಳೂರು: ಬ್ರಿಗೇಡ್‌ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆಯೇ ಕೆಲ ಕಿಡಿಗೇಡಿಗಳು ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ.

ಮಧ್ಯರಾತ್ರಿ 12 ಗಂಟೆಯ ಬಳಿಕ ಆಚರಣೆ ಮುಗಿಸಿಕೊಂಡು ಬ್ರಿಗೇಡ್‌ ರಸ್ತೆಯಿಂದ ಮನೆಯತ್ತ ಹೊರಟಿದ್ದ ವೇಳೆ ನೂಕುನುಗ್ಗಲು ಉಂಟಾಗಿತ್ತು. ಅದೇ ವೇಳೆ ಕೆಲ ಕಿಡಿಗೇಡಿಗಳು, ಯುವತಿಯ ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಆಗ ರಕ್ಷಣೆಗಾಗಿ ಯುವತಿಯರು ಕೂಗಿಕೊಂಡಿದ್ದರು.

ಸ್ಥಳದಲ್ಲಿದ್ದ ಪೊಲೀಸರು, ಆರು ಮಂದಿ ಅನುಮಾನಾಸ್ಪದ ಯುವಕರನ್ನು ವಶಕ್ಕೆ ಪಡೆದು ಆಟೊದಲ್ಲಿ ಠಾಣೆಗೆ ಕರೆದೊಯ್ದರು. ಯುವತಿಯರನ್ನು ರಸ್ತೆಯ ಪಕ್ಕದ ಕಟ್ಟಡದ ಬಳಿ ಕರೆದೊಯ್ದು ವಿಶ್ರಾಂತಿ ಪಡೆಯಲು ಅವಕಾಶ ನೀಡಿದರು. ಇನ್ನು ನೂಕುನುಗ್ಗಲಿನಲ್ಲಿ ಸಿಲುಕಿದ್ದ ಐವರು ಯುವತಿಯರನ್ನು ಪೊಲೀಸರು ರಕ್ಷಿಸಿದರು. ಈ ಬಾರಿ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ವಿದ್ಯುತ್ ದೀಪಗಳನ್ನು ಆರಿಸಲಿಲ್ಲ.

ಪೊಲೀಸರು ವಿರುದ್ಧ ಆಕ್ರೋಶ: ಬ್ರಿಗೇಡ್‌ ರಸ್ತೆಯಲ್ಲಿ ಯುವಕ–ಯುವತಿಯನ್ನು ತಳ್ಳಾಡಿದ ಕಿಡಿಗೇಡಿಗಳು, ಯುವತಿಯ ಜತೆ ಅಸಭ್ಯವಾಗಿ ವರ್ತಿಸಿದ್ದರು. ಅದನ್ನು ಪ್ರಶ್ನಿಸಿದ್ದ ಯುವಕನ ಮೇಲೂ ಹಲ್ಲೆಗೆ ಮುಂದಾಗಿದ್ದರು. ಆಗ ಯುವಕ, ಯುವತಿಯನ್ನು ರಕ್ಷಿಸಿಕೊಂಡು ಬ್ರಿಗೇಡ್‌ ರಸ್ತೆಯಿಂದ ಹೊರಬಂದಿದ್ದರು.

ತಮ್ಮ ಸಹಾಯಕ್ಕೆ ಪೊಲೀಸರು ಬರಲಿಲ್ಲದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಯುವಕ, ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾಧ್ಯಮದವರೊಂದಿಗೆ ಮಾತನಾಡಿ, ‘ಇಲ್ಲಿ ಕೇವಲ ತೋರಿಕೆಗಷ್ಟೇ ಅಧಿಕಾರಿಗಳಿದ್ದಾರೆ. ಕಾಮುಕರು ತಮ್ಮ ಕೃತ್ಯ ಮಾಡುತ್ತಲೇ ಇದ್ದಾರೆ’ ಎಂದರು.

ಪೌರ ರಕ್ಷಕ ದಳದ ಸಿಬ್ಬಂದಿ ಮೇಲೂ ಹಲ್ಲೆ: ಕಾವೇರಿ ಎಂಪೋರಿಯಂ ವೃತ್ತದಲ್ಲಿ ಸೇರಿದ್ದ ಯುವಕರ ಗುಂಪು ಮದ್ಯದ ಅಮಲಿನಲ್ಲಿ ಪೌರ ರಕ್ಷಕ ದಳದ ಸಿಬ್ಬಂದಿ ಜತೆಗೆ ಗಲಾಟೆ ಮಾಡಿತು. ಅದೇ ವೇಳೆ ಹಲ್ಲೆ ನಡೆಸಲು ಮುಂದಾಯಿತು. ಕೂಡಲೇ ರಕ್ಷಣೆಗೆ ಹೋದ ಪೊಲೀಸರು, ಯುವಕರ ಗುಂಪಿನ ಪೈಕಿ ಒಬ್ಬನನ್ನು ವಶಕ್ಕೆ ಪಡೆದು ಅಶೋಕನಗರ ಠಾಣೆಗೆ ಕರೆದೊಯ್ದರು.

ಮಹಿಳಾ ಪೊಲೀಸರಿಗೆ ಕಿರುಕುಳ: ಭದ್ರತೆಗೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸರಿಗೂ ಕೆಲ ಕಿಡಿಗೇಡಿಗಳು ಕಿರುಕುಳ ನೀಡಿದ ಘಟನೆಗಳು ನಡೆದವು. ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣ ಬಳಿಯ ಪ್ರಿಪೇಯ್ಡ್‌ ಆಟೊ ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಕಾನ್‌ಸ್ಟೆಬಲ್‌ ಬಳಿ ಬಂದಿದ್ದ ಕಿಡಿಗೇಡಿಗಳು, ಸೆಲ್ಫಿ ಎಂದು ಪೀಡಿಸಿದರು. ಕೆಲ ಕಾನ್‌ಸ್ಟೆಬಲ್‌ಗಳು ಸ್ಥಳಕ್ಕೆ ಬಂದು, ಆ ಯುವಕರನ್ನು ಓಡಿಸಿದರು.

ಭದ್ರತೆಗೆ ಮೆಚ್ಚುಗೆ: ನಗರ ಪೊಲೀಸರ ಭದ್ರತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರವಿ ಕೃಷ್ಣ, ‘ಉತ್ತಮ ಕೆಲಸ ಮಾಡಿದ್ದಾರೆ ಪೊಲೀಸರು’ ಎಂದು ಟ್ವಿಟ್‌ ಮಾಡಿದ್ದಾರೆ. ಪ್ರೊ. ರಾಜ್ ಪಿಳೈ, ‘ಸಂಚಾರ ಪೊಲೀಸರು ಪ್ರತಿ ರಸ್ತೆಯಲ್ಲೂ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು’ ಎಂದಿದ್ದಾರೆ. ರೋಶನಿ ಕುಮಾರ್, ‘ಹೊಸ ವರ್ಷಾಚರಣೆ ವೇಳೆ ನಿಮ್ಮ (ಪೊಲೀಸ್) ಸೇವೆಗೆ ಧನ್ಯವಾದಗಳು’ ಎಂದಿದ್ದಾರೆ.

*

ಎಂ.ಜಿ.ರಸ್ತೆಯಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

No Comments

Leave A Comment