ಗಾಜಿನ ಪರದೆ, ಇಂಟರ್ ಕಾಮ್ ಮಾತು: ಜಾಧವ್, ತಾಯಿ, ಪತ್ನಿ ಭೇಟಿ
ಹೊಸದಿಲ್ಲಿ : ಬೇಹುಗಾರಿಕೆ ಆರೋಪದಲ್ಲಿ ಬಂಧಿಸಲ್ಪಟ್ಟು ಮರಣದಂಡನೆಗೆ ಗುರಿಯಾಗಿ ಸದ್ಯ ಪಾಕ್ ಜೈಲಿನಲ್ಲಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಯಾದವ್ ಅವರನ್ನು ಇಸ್ಲಾಮಾಬಾದ್ನಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಇಂದು ಸೋಮವಾರ ಅವರ ತಾಯಿ ಮತ್ತು ಪತ್ನಿ ‘ಗಾಜಿನ ಪರದೆಯಿಂದ ಪ್ರತ್ಯೇಕಿಸಲ್ಪಟ್ಟ ಕೋಣೆ’ಯೊಂದರಲ್ಲಿ ಭೇಟಿಯಾದರು. ಈ ಭೇಟಿಗಾಗಿ ಪಾಕ್ ಸರಕಾರ ಜಾಧವ್ ಅವರ ತಾಯಿ ಮತ್ತು ಪತ್ನಿಗೆ ಕಾನ್ಸುಲರ್ ಸಂಪರ್ಕಾವಕಾಶ ಕಲ್ಪಿಸಿತ್ತು.
ಗಾಜಿನ ಪರದೆಯಿಂದ ಪ್ರತ್ಯೇಕಿಸಲ್ಪಟ್ಟ ಕೋಣೆಯಲ್ಲಿ ಇಂಟರ್ ಕಾಮ್ ವ್ಯವಸ್ಥೆಯೊಂದಿಗೆ ಏರ್ಪಡಿಸಲಾದ ಈ ಭೇಟಿಯಲ್ಲಿ ತಾಯಿ ಮತ್ತು ಪತ್ನಿ ಜಾಧವ್ ಅವರೊಂದಿಗೆ ಅರ್ಧ ತಾಸನ್ನು ಕಳೆದರು.
ಈ ಭೇಟಿಗೆ ಮುನ್ನ ಇಸ್ಲಾಮಾಬಾದ್ ಮಾಧ್ಯಮ ವರದಿಗಳಲ್ಲಿ ಕಾನ್ಸುಲರ್ ಸಂಪರ್ಕಾವಕಾಶವನ್ನು ಪಾಕ್ ಸರಕಾರ ನೀಡುವ ಬಗ್ಗೆ ಸಂದೇಹಗಳು ವ್ಯಕ್ತವಾಗಿದ್ದವು; ಹಾಗಾಗಿ ಈ ಭೇಟಿ ನಡೆಯುವುದೇ ಇಲ್ಲವೇ ಎಂಬ ಬಗ್ಗೆ ಕೊನೇ ಕ್ಷಣದ ವರೆಗೂ ಗುಮಾನಿ ಇತ್ತು.
ಕಾನ್ಸುಲರ್ ಸಂಪರ್ಕಾವಕಾಶ ಕಲ್ಪಿಸಿದ ಹೊರತಾಗಿಯೂ ಗಾಜಿನ ಪರದೆಯ ಮೂಲಕವೇ ಜಾಧವ್ ಅವರೊಂದಿಗೆ ಅವರ ತಾಯಿ, ಪತ್ನಿ ಇಂಟರ್ ಕಾಮ್ ಮೂಲಕ ಮಾತನಾಡಬೇಕಾಯಿತು. ಯಾವುದೇ ರೀತಿಯ ದೈಹಿಕ ಭಾವನಾತ್ಮಕ ಸಮ್ಮಿಲನಕ್ಕೆ ಅವಕಾಶ ನೀಡದಿರುವುದೇ ಗಾಜಿನ ಪಾರ್ಟಿಶನ್ ಉದ್ದೇಶವಾಗಿದ್ದುದು ಸ್ಪಷ್ಟವಾಗಿತ್ತು.
ತಾಯಿ, ಪತ್ನಿ ಜತೆಗೆ ಜಾಧವ್ ಇಂಟರ್ ಕಾಮ್ ಫೋನ್ ಮೂಲಕ ಮಾತನಾಡುವ ಚಿತ್ರವನ್ನು ಪಾಕ್ ಸರಕಾರ ಬಿಡುಗಡೆಗೊಳಿಸಿದ್ದು ಅದರಲ್ಲಿ ಜಾಧವ್ ಸೂಟ್ಧಾರಿಯಾಗಿ ಕಂಡು ಬಂದಿದ್ದರು.