Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಡಿ.29-ಡಿ.31: ಉಡುಪಿ ಪರ್ಬಲಾಂಛನ ಬಿಡುಗಡೆ

ಉಡುಪಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಡಿ. 29ರಿಂದ ಡಿ. 31ರವರೆಗೆ ಮಲ್ಪೆ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತ ಸಹಿತ ವಿವಿಧ ಸಂಘಟನೆಗಳ “ಉಡುಪಿ ಪರ್ಬ’ ಆಚರಿಸಲು ಸಿದ್ಧತೆಗಳು ನಡೆದಿವೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅವರು ಡಿ. 15ರಂದು “ಉಡುಪಿ ಪರ್ಬ’ದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ಇದಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 60 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ 15 ಲಕ್ಷ ರೂ. ನೀಡಿದೆ. ಉಳಿದಂತೆ ದಾನಿಗಳಿಂದ ನೆರವು ಸ್ವೀಕರಿಸಿ ಪರ್ಬವನ್ನು ಅರ್ಥಪೂರ್ಣವಾಗಿ ಆಚರಿ ಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಡಿ.29ರಂದು ಶಿವಮಣಿ ಕಾರ್ಯಕ್ರಮ
ಡಿ. 29ರಂದು ಮಲ್ಪೆಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. 3 ದಿನವೂ ಸಂಜೆ ಕಾರ್ಯಕ್ರಮಗಳಿರಲಿದೆ. ಡಿ. 29ರಂದು ನೃತ್ಯ ಪ್ರದರ್ಶನ, ಕಲಾಮಣಿ ಶಿವಮಣಿ ತಂಡದವರಿಂದ ವಾದ್ಯ ಸಂಗೀತ ಜರಗಲಿದೆ. ಡಿ. 30ರಂದು ಆಳ್ವಾಸ್‌ ನೃತ್ಯ ವೈಭವ ಹಾಗೂ ಪ್ರಹ್ಲಾದ ಆಚಾರ್ಯ ಅವರಿಂದ ಶ್ಯಾಡೋಪ್ಲೇ, ಡಿ. 31ರಂದು ಸರಿಗಮಪ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರಗಲಿವೆ ಎಂದು ಅವರು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಉಡುಪಿ ರಸ್ತೆ ಸೈಕಲ್‌ ಸ್ಪರ್ಧೆ, ಎಕ್ಸ್‌ ಟ್ರೀಮ್‌ ನ್ಪೋರ್ಟ್ಸ್ ಸ್ಪರ್ಧೆಗಳು, ಬಿಎಂಎಕ್ಸ್‌ ಮತ್ತು ಸ್ಕೇಟ್‌ ಬೋರ್ಡಿಂಗ್‌, ಬೋಟ್‌ ಸ್ಪರ್ಧೆ, ಕಯಾಕಿಂಗ್‌, ಜೆಟ್‌ ಸ್ಕೈ, ವಿಂಡ್‌ ಸರ್ಫಿಂಗ್‌, ಬನಾನ ರೈಡ್‌, ಬೀಚ್‌ ಟಗ್‌ ಆಫ್ ವಾರ್‌, ಟೆರಿಸ್ಟ್ರೀಯಾ ಅಡ್ವೆಂಚರ್‌ ನ್ಪೋರ್ಟ್ಸ್ ಅವರಿಂದ ಬೋಲ್ಡಿರಿಂಗ್‌, ಝಿಪ್‌ ಲೈನ್‌, ಬರ್ಮಾ ಬ್ರಿಡ್ಜ್, ಕಮಾಂಡೊ ಬ್ರಿಡ್ಜ್, ಸ್ಲೇಕ್‌ ಲೈನ್‌ ನಡೆಯಲಿವೆ ಎಂದರು.

ಡಿ.16: ಶಿಲ್ಪ ಕಲಾಶಿಬಿರ
ಡಿ. 16ರಂದು ಮಣ್ಣಪಳ್ಳ ಪರಿಸರದಲ್ಲಿ ಶಿಲ್ಪ ಕಲಾಶಿಬಿರ ಆರಂಭಗೊಳ್ಳಲಿದೆ. ದೇಶದ ಪ್ರಸಿದ್ಧ ಶಿಲ್ಪ ಕಲಾವಿದರು ಇಲ್ಲಿಗೆ ಆಗಮಿಸಿ ಶಿಲ್ಪವನ್ನು ರಚಿಸಲಿದ್ದಾರೆ ಎಂದು ಕಲಾವಿದ-ಸಂಘಟಕ ಪುರುಷೋತ್ತಮ ಅಡ್ವೆ ಮಾಹಿತಿ ನೀಡಿದರು.

ಡಿ.24-31: ಟ್ರೆಕ್ಕಿಂಗ್‌, ಕ್ಯಾಂಪಿಂಗ್‌
ಡಿ.24ರಿಂದ ಡಿ.31ರವರೆಗೆ ಕುದುರೆಮುಖ, ಹೆಬ್ರಿ ಹಾಗೂ ಕೊಲ್ಲೂರು ಪರಿಸರದಲ್ಲಿ ಟ್ರೆಕ್ಕಿಂಗ್‌  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಿ.29ರಂದು ಮರಳು ಶಿಲ್ಪ ರಚನೆ ಸ್ಪರ್ಧೆ, ಚಿತ್ರಕಲೆ ಮತ್ತು ಕಾರ್ಟೂನ್‌ ಶಿಬಿರವನ್ನು ಆಯೋಜಿಸಲಾಗಿದೆ.

ಡಿ. 30-31: ರಾ. ಜೂ. ಈಜು ಸ್ಪರ್ಧೆ
ಡಿ. 30, 31ರಂದು ರಾ. ಜೂ. ಮುಕ್ತ ವಾಟರ್‌ ಸ್ವಿಮ್ಮಿಂಗ್‌ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರು ವರ್ಲ್ಡ್ ಜೂನಿಯರ್‌ ಓಪನ್‌ ವಾಟರ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌ 2018ಕ್ಕೆ ಅರ್ಹತೆಯನ್ನು ಪಡೆಯಲಿದ್ದಾರೆ ಎಂದು ಯುವ ಸಬಲೀಕರಣ ಇಲಾಖೆಯ ಸ.ನಿರ್ದೇಶಕ ರೋಷನ್‌ಕುಮಾರ್‌ ಶೆಟ್ಟಿ ಮಾಹಿತಿ ನೀಡಿದರು.

ಛಾಯಾಚಿತ್ರ ಸ್ಪರ್ಧೆ
ಉಡುಪಿ ಪರ್ಬ ಸಂದರ್ಭದಲ್ಲಿ ಉಡುಪಿ ಮಲ್ಪೆ ಮತ್ತು ಸೈಂಟ್‌ ಮೇರಿಸ್‌ ದ್ವೀಪ ಪರಿಸರದ ಛಾಯಾಚಿತ್ರಗಳನ್ನು ಕ್ಲಿಕ್ಕಿಸುವ ಛಾಯಾಗ್ರಾಹಕರಿಗಾಗಿ ಜಿಲ್ಲಾಡಳಿತ, ಉಡುಪಿ ಪ್ರಸ್‌ ಫೊಟೋಗ್ರಾಫ‌ರ್ಸ್‌ ಕ್ಲಬ್‌ ಹಾಗೂ ಎಸ್‌ಕೆಪಿಎ- ಉಡುಪಿ ವಲಯದ ಆಶ್ರಯದಲ್ಲಿ ಛಾಯಾಚಿತ್ರ ಸ್ಪರ್ಧೆ ಆಯೋಜಿಸಿದೆ. ಬಹುಮಾನ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಅನುಕ್ರಮವಾಗಿ ರೂ.7, ರೂ. 5 ಹಾಗೂ 3 ಸಾವಿರ ನಗದು ಘೋಷಿಸಲಾಗಿದೆ.

ಡಿ. 31ರಂದು ಶ್ವಾನ ಪ್ರದರ್ಶನ, ವೈನ್‌ ಉತ್ಸವ, ಸ್ಕೂಬಾ ಡೈವಿಂಗ್‌ ಫೆಸ್ಟಿವಲ್‌, ಡಿ. 28ರಿಂದ ಡಿ. 30ರವರೆಗೆ ಒತ್ತಿನೆಣೆ ಪಡುವರಿ ಬೀಚ್‌ ಉತ್ಸವ, ಡಿ. 29ರಿಂದ 31ರವರೆಗೆ ಕೋಟೇಶ್ವರ ಕಿನಾರಾ ಬೀಚ್‌ ಉತ್ಸವ, ಡಿ.29ರಂದು ಮಲ್ಪೆ ಬೀಚ್‌ನಲ್ಲಿ ಗೂಡು ದೀಪ ಸ್ಪರ್ಧೆ ಹಾಗೂ ಡಿ. 29ರಿಂದ ಡಿ. 31ರವರೆಗೆ ಆಹಾರ ಮೇಳ ಆಯೋಜಿಸಲಾಗಿದೆ.

ಹೊಸವರ್ಷಕ್ಕೆ ಸುಡುಮದ್ದು ಸ್ವಾಗತ ಹೊಸ ವರ್ಷವನ್ನು ಉಡುಪಿ ಪರ್ಬದ ಮೂಲಕ ಸ್ವಾಗತಿಸುವ ವಿಶೇಷ ಸಂದರ್ಭವಾಗಿ ಡಯಲ್‌ವುಂತ್ರ ಸಹಭಾಗಿತ್ವದಲ್ಲಿ ಡಿ. 31ರಂದು ಮಧ್ಯರಾತ್ರಿ ಮಲ್ಪೆ ಬೀಚ್‌ನಲ್ಲಿ ಸುಡುಮದ್ದು ಕಾರ್ಯಕ್ರಮ ಜರಗಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸ. ನಿರ್ದೇಶಕರಾದ ಅನಿತಾ ಮಾಹಿತಿ ನೀಡಿದರು.

ಉಡುಪಿ ಡಿಸಿ ಪ್ರಿಯಾಂಕಾ, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಅಧ್ಯಕ್ಷ ದಿನಕರಬಾಬು, ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ಹೊಟೇಲ್‌ ವೈಟ್‌ ಲೋಟಸ್‌ ಮಾಲಕ ಪುರುಷೋತ್ತಮ ಶೆಟ್ಟಿ, ಅಸೋಸಿಯೇಶನ್‌ ಆಫ್ ಕೋಸ್ಟಲ್‌ ಟೂರಿಸಂ ಅಧ್ಯಕ್ಷ, ಸಾಯಿರಾಧಾ ಸಮೂಹದ ಮನೋಹರ ಶೆಟ್ಟಿ ಮತ್ತಿತತರರು ಉಪಸ್ಥಿತರಿದ್ದರು.

No Comments

Leave A Comment