Log In
BREAKING NEWS >
BJP ಅಂತಿಮ ಪಟ್ಟಿ ಪ್ರಕಟ, 4 ಕ್ಷೇತ್ರ ನಿಗೂಢ; ಶೋಭಾಗೂ ಟಿಕೆಟ್ ಇಲ್ಲ....ನೋಯ್ಡಾ : ಮಹಾ ಪಾತಕಿ ಬಾಲರಾಜ್‌ ಭಾಟಿ ಎನ್‌ಕೌಂಟರ್‌ಗೆ ಬಲಿ...

ಮರ್ಯಾದಾ ಹತ್ಯಾ ಪ್ರಕರಣ; ಯುವತಿಯ ತಂದೆ ಸೇರಿ 6 ಮಂದಿಗೆ ಗಲ್ಲು

ಚೆನ್ನೈ: ಮೇಲ್ಜಾತಿ ಯುವತಿಯನ್ನು ಮದುವೆಯಾಗಿದ್ದಕ್ಕೆಆಕ್ರೋಶಿತಗೊಂಡ ಯುವತಿ ಕುಟುಂಬಸ್ಥರು ವಿ.ಶಂಕರ್(23) ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಹಾಡಹಗಲೇ ತಮಿಳುನಾಡಿನ ತಿರುಪುರ್ ನಲ್ಲಿ ನಡೆಸಿದ್ದ ಮರ್ಯಾದಾ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಗೆ ಕೋರ್ಟ್ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಶಂಕರ್ ಎಂಬ ದಲಿತ ವಿದ್ಯಾರ್ಥಿಯನ್ನು ತಿರುಪುರ್ ಮಾರ್ಕೆಟ್ ಸ್ಥಳದಲ್ಲಿ ಬರ್ಬರವಾಗಿ ಹತ್ಯೆಗೈದಿದ್ದರು. ಈ ಸಂದರ್ಭದಲ್ಲಿ ಪತ್ನಿ ಕೌಶಲ್ಯಾ(19ವರ್ಷ) ಕೂಡಾ ಜತೆಗಿದ್ದು, ಆಕೆ ಮೇಲೂ ಬೈಕ್ ನಿಂದ ದಾಳಿ ನಡೆಸಲಾಗಿತ್ತು. ಕೌಶಲ್ಯ ಪೋಷಕರೇ ಬಾಡಿಗೆ ಗೂಂಡಾಗಳನ್ನು ಕರೆಯಿಸಿ ಈ ಕೃತ್ಯ ಎಸಗಿದ್ದರು.

ಈ ಎಲ್ಲಾ ಘಟನೆ ಸ್ಥಳೀಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಈ ಸುದ್ದಿ ಕಳೆದ ವರ್ಷ ಪ್ರಸಾರವಾದಾಗ ಇಡೀ ದೇಶವೇ ಬೆಚ್ಚಿಬಿದ್ದಿತ್ತು.

ಆರು ಮಂದಿಗೆ ಗಲ್ಲುಶಿಕ್ಷೆ:

ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಪುರ್ ನ್ಯಾಯಾಲಯದ ನ್ಯಾಯಾಧೀಶರಾದ ಅಲಮೇಲು ನಟರಾಜ್ ಅವರು ಹತ್ಯೆ ಪ್ರಕರಣದಲ್ಲಿ ಎಲ್ಲಾ 8 ಮಂದಿಯನ್ನು ದೋಷಿ ಎಂದು ಘೋಷಿಸಿದ್ದರು. ಇದರಲ್ಲಿ ಮೃತ ಶಂಕರ್ ಮಾವ ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.

ಕೌಶಲ್ಯಾ ತಂದೆ ಚಿನ್ನಸಾಮಿ ಸೇರಿದಂತೆ ಆರು ಮಂದಿಗೆ ಗಲ್ಲುಶಿಕ್ಷೆಯಾಗಿದೆ. ಕೌಶಲ್ಯಾ ತಾಯಿ ಅಣ್ಣಾಲಕ್ಷ್ಮೀ, ಪಂಡಿಥುರೈ ಹಾಗೂ ವಿದ್ಯಾರ್ಥಿ ಪ್ರಸನ್ನನ್ನು ಕೋರ್ಟ್ ಖುಲಾಸೆಗೊಳಿಸಿದೆ.

2016ರ ಮಾರ್ಚ್ 13ರಂದು ಉದುಮಲ್ ಪೇಟ್ ಎಂಬಲ್ಲಿ ಕೌಶಲ್ಯಾ ಹಾಗೂ ಆಕೆಯ ಪತಿ ಶಂಕರ್ ಮೇಲೆ ಭೀಕರವಾಗಿ ದಾಳಿ ನಡೆಸಿದ್ದರು. ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆಯೇ ಶಂಕರ್ ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದ್ದ, ಪತ್ನಿ ಕೌಶಲ್ಯಾ ಪವಾಡಸದೃಶ ಎಂಬಂತೆ ಬದುಕುಳಿದಿದ್ದಳು.

ಪೊಲ್ಲಾಚಿಯಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ಸಂದರ್ಭದಲ್ಲಿ ಶಂಕರ್ ಮತ್ತು ಕೌಶಲ್ಯಾ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರೂ ಕೌಶಲ್ಯಾ ಪೋಷಕರ ವಿರೋಧದ ನಡುವೆಯೇ ಮದುವೆಯಾಗಿದ್ದರು. ಶಂಕರ್ ದಲಿತ ಸಮುದಾಯಕ್ಕೆ ಸೇರಿದ್ದರೆ, ಕೌಶಲ್ಯಾ ತೀವರ್ ಜನಾಂಗಕ್ಕೆ ಸೇರಿದವಳಾಗಿದ್ದಳು. ಆಕ್ರೋಶಗೊಂಡಿದ್ದ ಕೌಶಲ್ಯಾ ಪೋಷಕರು ಮದುವೆಯಾದ ನಂತರ ಕೌಶಲ್ಯಾಳನ್ನು ಅಪಹರಿಸಿದ್ದರು. ಆದರೆ ಕೌಶಲ್ಯಾ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಳು ಎಂದು ವರದಿ ವಿವರಿಸಿದೆ.

ಇದೀಗ ನ್ಯಾಯಾಲಯ ನೀಡಿರುವ ತೀರ್ಪಿನಿಂದ ತನಗೆ ಸಮಾಧಾನ ತಂದಿದೆ ಎಂದು ಕೌಶಲ್ಯಾ ತಿಳಿಸಿದ್ದಾಳೆ. ಕೌಶಲ್ಯಾ ಈಗ ಶಂಕರ್ ಮನೆಯಲ್ಲಿ ವಾಸಿಸುತ್ತಿದ್ದಾಳೆ.

Read more at https://www.udayavani.com/kannada/news/national-news/258123/in-tamil-nadu-man-s-public-killing-on-camera-father-in-law-gets-death#MUSgyM9G8XfOtY9v.99

No Comments

Leave A Comment