Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಕೇವಲ ಚಳವಳಿ ಮೂಲಕವೇ ಕನ್ನಡದ ಕೆಲಸ ಆಗಬೇಕೇ? ಚಂಪಾ ನುಡಿ

ಮೈಸೂರು: ಕೇವಲ ಚಳವಳಿಗಳ ಮೂಲಕ ಕನ್ನಡದ ಕೆಲಸ ಆಗಬೇಕೇ? ನಮ್ಮ ಅಧಿಕಾರಿಗಳ, ಜನಪ್ರತಿನಿಧಿಗಳ, ಮಂತ್ರಿಗಳ ಸಹಜ ಧರ್ಮವಾಗಿ ಕನ್ನಡ ಅರಳಬೇಕು. ಇದು ಸಾಧ್ಯವಾಗುವುದು ನಮ್ಮ ನಾಡಿನಲ್ಲಿ ನಮ್ಮದೇ ಆದ ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ…ಇದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಮೂರು ದಿನಗಳ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕತೆ ವಹಿಸಿದ್ದ ಪ್ರೊ.ಚಂದ್ರಶೇಖರ ಪಾಟೀಲ ಅವರ ನುಡಿಗಳಿವು.

ನಮ್ಮ ನೆಲದ ಸಾರವನ್ನು ಹೀರಿ, ನಮ್ಮ ಹವೆಯನ್ನುಂಡು, ನಮ್ಮ ಆಕಾಶದಲ್ಲಿ ನಮ್ಮ ಟೊಂಗೆಗಳನ್ನು ಹರಡಿ, ನಮ್ಮ ಹೂಗಳ ಸುವಾಸನೆ ಬೀರಬಲ್ಲ ಒಂದು ವೃಕ್ಷವಾಗಿ, ಒಂದು ನಿರ್ಣಾಯಕ ರಾಜಕೀಯ ಶಕ್ತಿಯಾಗಿ ನಮ್ಮ ಕನ್ನಡ ಶಕ್ತಿ ಕ್ರೋಡೀಕರಣಗೊಂಡಾಗ ಮಾತ್ರ ಕನ್ನಡದ ಅಭಿವೃದ್ಧಿ ಸಾಧ್ಯ ಎಂದರು.

ನಮ್ಮ ರಾಜ್ಯದ ಕತೆ ನಮಗೆ ಗೊತ್ತೇ ಇದೆ. ಇಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳು ರಾಷ್ಟ್ರೀಯ ಪಕ್ಷಗಳು, ಇವುಗಳ ಹೆಡ್ ಆಫೀಸುಗಳೆಲ್ಲ ಇರುವುದು ದೇಶದ ರಾಜಧಾನಿಯಲ್ಲಿ. ಮುಖ್ಯಮಂತ್ರಿಗಳು ಆಯ್ಕೆಯಾಗುವುದು ಪಕ್ಷದ ಶಾಸಕರ ಮನಸ್ಸಿನ ಇಚ್ಚೆಯಿಂದಿಲ್ಲ, ಹೈಕಮಾಂಡಿನ ಮನಸುಖರಾಯರ ಲಹರಿಯಿಂದ. ಹೀಗೆ ಪಾರ್ಟಿಯಲ್ಲಿ ಕುಕ್ಕರಿಸಿದ ಮುಖ್ಯಮಂತ್ರಿ ಸದಾ ತನ್ನ ಅಧಿಕಾರ ಉಳಿಸಿಕೊಳ್ಳುವುದನ್ನೇ ಧ್ಯಾನಿಸಬೇಕು. ತನ್ನ ಮಂತ್ರಿಮಂಡಲದ ಒಬ್ಬ ಸಣ್ಣ ಮಂತ್ರಿಯ ಖಾತೆ ಬದಲಾವಣೆಗೂ ಅವನು ವರಿಷ್ಠರ ಆದೇಶಕ್ಕಾಗಿ ದಿಲ್ಲಿ ಯಾತ್ರೆ ಕೈಗೊಳ್ಳಬೇಕು. ಇಂಥ ರಾಷ್ಟ್ರೀಯ ಪಕ್ಷಗಳ ವರಿಷ್ಠರಿಗಾದರೋ ಬೇರೆ, ಬೇರೆ ರಾಜ್ಯಗಳಲ್ಲಿರುವ ತಮ್ಮ ಪಕ್ಷದ ಹಿತಾಸಕ್ತಿಗಳ ರಕ್ಷಣೆಯೇ ಮುಖ್ಯವಾಗಿರುತ್ತದೆ.

ಒಟ್ಟಿನ ಪರಿಣಾಮವೆಂದರೆ ರಾಷ್ಟ್ರೀಯ ಪಕ್ಷಗಳಿಂದ ನಮ್ಮ ರಾಜ್ಯಕ್ಕೆ ಯಾವ ಕಲ್ಯಾಣವೂ ಆಗಿಲ್ಲ. ಆಗುವಂತಿಲ್ಲ. ಭಾರತದ ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಯಾವುದೇ ಒಂದು ರಾಷ್ಟ್ರೀಯ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಸುಸೂತ್ರವಾಗಿ ಐದು ವರ್ಷ ಅಧಿಕಾರ ನಡೆಸುವಂತಿಲ್ಲ.

ಅನೇಕ ಧರ್ಮ, ಜಾತಿ ಸಮುದಾಯ, ಸಂಸ್ಕೃತಿಗಳ ಒಕ್ಕೂಟ ನಮ್ಮ ಇಂಡಿಯಾ. ಇಲ್ಲಿ ಏಕಪಕ್ಷೀಯವಾದ ಅಧಿಕಾರ ನಡೆಯಲು ಸಾಧ್ಯವೇ ಇಲ್ಲ. ಈ ಮೂಲಕ ಫೆಡರಲ್ ಸ್ವರೂಪದ ಅರಿವು ಈಗ ನಮಗಾಗುತ್ತಿದೆ. ಅದರಿಂದಲೇ ಕೇಂದ್ರ ಸರ್ಕಾರಗಳು ಶಕ್ತಿ ಕಳಕೊಂಡು, ಪ್ರಾದೇಶಿಕ ಪಕ್ಷಗಳ ಸಹಕಾರಕ್ಕಾಗಿ ಹಾತೊರೆಯಬೇಕಾಗಿದೆ. ಈ ವಾಸ್ತವಕ್ಕೆ ಅನುಗುಣವಾಗಿಯೇ ನಮ್ಮ ರಾಜಕಾರಣದ ವಿನ್ಯಾಸ ಬದಲಾಗತೊಡಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

No Comments

Leave A Comment