Log In
BREAKING NEWS >
ಉಡುಪಿ:ಪಲಿಮಾರು ಮಠಾಧೀಶರ ಪರ್ಯಾಯ ಪೀಠಾರೋಹಣಕ್ಕೆ ಕ್ಷಣಗಣನೆ-ಎಲ್ಲೆಡೆಯಲ್ಲಿ ರಸಮ೦ಜರಿ,ಡ್ಯಾನ್ಸ್ ಕಾರ್ಯಕ್ರಮ-ರಸ್ತೆಯಲ್ಲಿ ಜನಜ೦ಗುಲಿ

ಬೆಂಗಳೂರು:ಇಬ್ಬರ ಹಠಕ್ಕೆ 9 ಮಂದಿ ಬಲಿ

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ರಾಜ್ಯ ಸರಕಾರದ ನಡುವಿನ ತಿಕ್ಕಾಟ ಒಂಬತ್ತು ಅಮಾಯಕರ ಜೀವಕ್ಕೆ ಕುತ್ತು ತಂದಿದೆ.

ಖಾಸಗಿ ವೈದ್ಯಕೀಯ ನಿಯಂತ್ರಣ ತಿದ್ದುಪಡಿ ಮಸೂದೆ ವಿರೋಧಿಸಿ ಸೋಮವಾರದಿಂದಲೇ ಖಾಸಗಿ ವೈದ್ಯರು ಮುಷ್ಕರ ನಡೆಸಿದ್ದು, ರಾಜ್ಯಾದ್ಯಂತ ಆರೋಗ್ಯ ಸೇವೆಗಳಲ್ಲಿ ತೀವ್ರ ಅಡಚಣೆಯುಂಟಾ ಗಿದ್ದು, ಸರಿಯಾದ ಚಿಕಿತ್ಸೆ ಲಭ್ಯವಿಲ್ಲದೆ ಲಕ್ಷಾಂತರ ಮಂದಿ ಪರದಾಡಿದ್ದಾರೆ.

ಬೆಳಗಾವಿ ಚಲೋ ಆರಂಭವಾದ ಸೋಮ ವಾರವೇ ಮೂವರು ಮೃತಪಟ್ಟಿದ್ದರು. ಮಂಗಳ ವಾರದ ಸಾವಿನ ಸಂಖ್ಯೆಯನ್ನೂ ಸೇರಿಸಿದರೆ ಈ ಸಂಖ್ಯೆ 12ಕ್ಕೇರಿದೆ. ಇಷ್ಟಾದರೂ ರಾಜ್ಯ ಸರಕಾರ ತನ್ನ ಪಟ್ಟನ್ನು ಸಡಿಲಿಸಿಲ್ಲ, ವೈದ್ಯರು ಮುಷ್ಕರ ಬಿಟ್ಟು ಕದಲುತ್ತಿಲ್ಲ. ಈ ಮಧ್ಯೆ, ವೈದ್ಯರ ಪ್ರತಿಭಟನೆ ಬುಧವಾರವೂ ಮುಂದುವರಿಯಲಿದ್ದು, ವೈದ್ಯಕೀಯ ಸೇವೆಯಲ್ಲಿ ಮತ್ತಷ್ಟು ವ್ಯತ್ಯಯವಾಗಬಹುದು ಎಂದು ಹೇಳಲಾಗುತ್ತಿದೆ.

ಮಂಗಳವಾರ ಹಾಸನದ ಸಿದ್ದಯ್ಯ ನಗರದ ಮೂರು ತಿಂಗಳ ಕೂಸು ನದೀಂ ಫ‌ರ್ಹಾನ ಚಿಕಿತ್ಸೆ ಇಲ್ಲದೆ ಕೊನೆಯುಸಿರೆಳೆದಿದೆ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹುಬ್ಬಳ್ಳಿಯ ವೈಷ್ಣವಿ ಜಾಧವ್‌ (12), ಹೃದ್ರೋಗದಿಂದ ಬಳಲುತ್ತಿದ್ದ ಕೊಪ್ಪಳ ಜಿಲ್ಲೆಯ ಬಣಬಳ್ಳಾರಿ ಗ್ರಾಪಂ ಪಿಡಿಒ ಮುಕ್ಕುಂಪಿ ಗ್ರಾಮದ ನಿವಾಸಿ ಗ್ಯಾನಪ್ಪ ಬಿಡ್ನಾಳಗೆ (56) ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಮೃತರಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ಲ ಪಟ್ಟಣದ ಎಪಿಎಂಸಿ ವರ್ತಕ ಶೇಖರಪ್ಪ ಗ್ಯಾನಪ್ಪ ಜಕ್ಲಿ (52), ಹಾವೇರಿ ಜಿಲ್ಲೆಯ ಬ್ಯಾಡಗಿಯ ಒಂದೂವರೆ ವರ್ಷದ ಸಾಯಿನಾ, ಕಾಗಿನೆಲೆಯ ಖಾಸಗಿ ಪಿಯು ಕಾಲೇಜಿನ ವಿದ್ಯಾರ್ಥಿ ಬಸವರಾಜ ದಿಡಗೂರ, ಹಾವೇರಿಯ ಮರ್ದಾನ್‌ಸಾಬ್‌ಗ (18) ಕೂಡ ವೈದ್ಯರು ಸಿಗದೆ ಮೃತಪಟ್ಟಿದ್ದಾರೆ.

ಜಮಖಂಡಿಯಲ್ಲಿ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಅಶೋಕ್‌ಗೆ (40), ಅಥಣಿ ತಾಲೂಕಿನ ದರೂರ ಗ್ರಾಮದ ಮಹೇಶ್‌ ಚಂದು ವಾಘಮೋರೆ (27) ಸಹ ಅಪಘಾತದ ಅನಂತರ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಒಪಿಡಿ ಸೇವೆ: ಬೆಂಗಳೂರಿನ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಲಭ್ಯವಿತ್ತು. ಬೆಳಗಾವಿಯಲ್ಲಿ ಪ್ರತಿಭಟನೆ ಮಾಡು ತ್ತಿದ್ದ ಅನೇಕ ವೈದ್ಯರು ಮಂಗಳವಾರ ಸೇವೆಗೆ ಹಾಜರಾಗಿದ್ದಾರೆ. ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಲ್ಲಿಂದಲೇ ಕೆಲ ವೈದ್ಯರನ್ನು ವಾಪಸ್‌ ಬೆಂಗಳೂರು  ಸಹಿತ ಆಯಾ ಜಿಲ್ಲೆಗಳಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇಷ್ಟಾದರೂ ಬೆಂಗಳೂರು ಸಹಿತ ಕೆಲವು ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗದ ಸೇವೆ ಇರಲಿಲ್ಲ ಮತ್ತು ಬಹುತೇಕ ಕ್ಲಿನಿಕ್‌ ಹಾಗೂ ನರ್ಸಿಂಗ್‌ ಹೋಮ್‌ಗಳು ಮುಚ್ಚಿದ್ದವು.

ಸೋಮವಾರ ಬಾಗಲಕೋಟೆಯ ಬದಾಮಿಯ ಕೆರೂರು ಪಟ್ಟಣದ ಮಕ್ತಮ್‌ ಹುಸೇನ ಚೂರಗಸ್ತಿ (53), ಮುತ್ತಲಗೇರಿ ಗ್ರಾಮದ ಮಲ್ಲಪ್ಪ ಯಮನಪ್ಪ ನೀರಲಕೇರಿ (68) ಹಾಗೂ ಮುಧೋಳಿನ ಮಹಾಲಿಂಗಪುರದ ಸುನಂದಾ ಬೆಳಗಾಂವಕರ (50 ) ಸಕಾಲದಲ್ಲಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದರು. ಮಂಗಳವಾರವೂ ಸಾವಿನ ಸರಣಿ ಮುಂದುವರಿದಿದೆ.

ವೈದ್ಯರ ಮುಷ್ಕರಕ್ಕೆ ಸಿಎಂ ಗರಂ 
ಬೆಳಗಾವಿ: ಖಾಸಗಿ ಆಸ್ಪತ್ರೆಗಳ ಮಸೂದೆ ಮಂಡನೆಗೆ ಮುನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದರೂ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರ ನಡೆಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಈ ಬಗ್ಗೆ ವೈದ್ಯರ ಸಂಘದ ಅಧ್ಯಕ್ಷ ಡಾ| ಎಚ್‌.ಎನ್‌. ರವೀಂದ್ರ ಅವರ ನೇತೃತ್ವದ ನಿಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವೈದ್ಯರ ಸಂಘ‚ದ ಪ್ರತಿನಿಧಿಗಳೊಂದಿಗೆ ಸೋಮವಾರ ನಡೆಸಿದ್ದ ಮಾತುಕತೆ ಫ‌ಲಪ್ರದವಾಗದ ಹಿನ್ನೆಲೆಯಲ್ಲಿ ಮಂಗಳವಾರವೂ ಸಿಎಂ ಮತ್ತೂಮ್ಮೆ ಸಭೆ ಕರೆದರು. ಈ ಸಂದರ್ಭದಲ್ಲಿ  ತತ್‌ಕ್ಷಣವೇ ಮಸೂದೆ ಮಂಡಿಸುವುದಿಲ್ಲ, ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಚರ್ಚಿಸುತ್ತೇವೆ. ಜತೆಗೆ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮಂಡಿಸುತ್ತೇವೆ ಎಂಬ ಭರವಸೆಯನ್ನೂ ನೀಡಿದರು.  ಆದರೆ ಇದಕ್ಕೆ ಕಿವಿಗೊಡದ ವೈದ್ಯರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ವೈದ್ಯರ ಗುರಿಯಾಗಿಸುವ ಅಂಶ ಮಸೂದೆಯಲ್ಲಿಲ್ಲ
ನಿಯಮ ಉಲ್ಲಂ ಸಿದ ವೈದ್ಯರನ್ನು ಕಾರಾಗೃಹಕ್ಕೆ ಕಳುಹಿಸುವ ಪ್ರಸ್ತಾವ ಮಸೂದೆ ಯಲ್ಲಿ ಇದೆ ಎಂಬ ಬಗ್ಗೆ ತಪ್ಪು ಸಂದೇಶ ಹೊಂದಿರು ವುದು ಕಂಡು ಬಂದಿದೆ. ಕಾನೂನು ಉಲ್ಲಂಘಿಸುವಂತಹ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸಲು ಮಸೂದೆಯಲ್ಲಿ ಉದ್ದೇಶಿಸಲಾಗಿದೆಯೇ ಹೊರತು ವೈದ್ಯರನ್ನು ಗುರಿಯಾಗಿಸುವ ಯಾವುದೇ ಅಂಶಗಳು ಅಡಕವಾಗಿಲ್ಲ  ಎಂದು ಸಮಿತಿ ತನ್ನ ವರದಿಯಲ್ಲಿ  ತಿಳಿಸಿದೆ.

No Comments

Leave A Comment