Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ನಟಿ ಹರ್ಷಿಕಾ ಮೈಮೇಲೆ ‘ಚಿಟ್ಟೆ’ ವಿಲವಿಲ

‘ವಿಭಿನ್ನ ಪಾತ್ರಕ್ಕಾಗಿ ಹುಡುಕಾಟ ನಡೆಸಿದ್ದೆ. ಇದಕ್ಕಾಗಿ ಸಾಕಷ್ಟು ಅವಕಾಶಗಳನ್ನು ನಿರಾಕರಿಸಿದ್ದು ಉಂಟು. ಕೊನೆಗೆ, ಮೈಮೇಲೆ ಚಿಟ್ಟೆ ಬಿಡಿಸಿಕೊಳ್ಳಲು ಮುಂದಾದೆ’ ಎಂದು ಮುದ್ದಾಗಿ ನಕ್ಕಿದ ನಟಿ ಹರ್ಷಿಕಾ ಪೂಣಚ್ಚ ಹೈಸ್ಕೂಲ್‌ ದಿನಗಳತ್ತ ಜಾರಿದರು.

‘ರಂಗಪ್ಪ ಹೋಗಿ ಬಿಟ್ನಾ’ ಚಿತ್ರ ನಿರ್ದೇಶಿಸಿದ್ದ ಎಂ.ಎಲ್. ಪ್ರಸನ್ನ ‘ಚಿಟ್ಟೆ’ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಆಗತಾನೆ ಮದುವೆಯಾಗಿ ಮಧುಚಂದ್ರ ಮುಗಿಸಿ ಬಂದ ಜೋಡಿಯೊಂದು ಹೊಸಜೀವನ ಕಟ್ಟಿಕೊಳ್ಳಲು ಆರಂಭಿಸುತ್ತದೆ. ಅವರ ಬದುಕಿನಲ್ಲಿ ಮತ್ತೊಂದು ಪಾತ್ರ ಬೆರತಾಗ ಜೀವನದಲ್ಲಿ ತಲ್ಲಣಗಳು ಶುರುವಾಗುತ್ತವೆ. ಇದನ್ನೇ ತೆರೆಯ ಮೇಲೆ ಕಟ್ಟಿಕೊಡಲು ಪ್ರಸನ್ನ ಮುಂದಾಗಿದ್ದಾರೆ.

‘ಚಿಟ್ಟೆ’ ಚಿತ್ರದಲ್ಲಿನ ತನ್ನ ಪಾತ್ರಕ್ಕೆ ಜೀವ ತುಂಬಲು ಹರ್ಷಿಕಾ ಮೈಮೇಲೆ ಪಾತರಗಿತ್ತಿಯನ್ನು ಅರಳಿಸಿಕೊಂಡಿದ್ದಾರೆ. ಚಂದನಾ ಆರಾಧ್ಯ ಈ ಚಿತ್ರದ ವಸ್ತ್ರವಿನ್ಯಾಸಕಿ. ಚಿತ್ರ ಬಿಡಿಸುವುದು ಅವರ ಹವ್ಯಾಸ. ಹರ್ಷಿಕಾ ಮೈಮೇಲೆ ಚಿಟ್ಟೆ ಚಿತ್ರ ಅರಳಿಸಲು ನಿರ್ದೇಶಕರು ಹೇಳಿದಾಗ ಅವರು ಕೂಡ ಕೊಂಚ ನರ್ವಸ್‌ ಆಗಿದ್ದರಂತೆ. ಕೊನೆಗೆ, ನಾಲ್ಕು ಗಂಟೆಯ ಸತತ ಪರಿಶ್ರಮದ ಫಲವಾಗಿ ಪಾತರಗಿತ್ತಿಯನ್ನು ಅರಳಿಸಿದ್ದಾರೆ. ಶೂಟಿಂಗ್‌ಗಾಗಿ 12 ಗಂಟೆ ಕಾಲ ಹರ್ಷಿಕಾ ಮೈಮೇಲೆ ಈ ಬಣ್ಣದ ಚಿಟ್ಟೆ ಇತ್ತಂತೆ!

‘ಮೈಮೇಲೆ ಚಿಟ್ಟೆ ಬಿಡಿಸಿಕೊಂಡಾಗ ನನ್ನ ಹೈಸ್ಕೂಲ್‌ ದಿನಗಳು ನೆನಪಾದವು. ಗುಣಮಟ್ಟದ ಪಾತ್ರಗಳಿಗಾಗಿ ನಾನು ಹಂಬಲಿಸಿದ್ದು ನಿಜ. ಚಿಟ್ಟೆ ಅನಿರೀಕ್ಷಿತವಾಗಿ ಅವಕಾಶ ಕೊಟ್ಟಿದೆ. ಪಾತರಗಿತ್ತಿ ಕುಂತಲ್ಲಿ ಕೂರುವುದಿಲ್ಲ. ಚಿತ್ರದಲ್ಲಿಯೂ ಅಂತಹ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದೇನೆ’ ಎಂದು ನಕ್ಕರು ಹರ್ಷಿಕಾ.

ನಿರ್ದೇಶಕ ಪ್ರಸನ್ನ, ‘ತಪ್ಪುಗಳಲ್ಲಿ ಸಣ್ಣ ತಪ್ಪು ಅಥವಾ ದೊಡ್ಡ ತಪ್ಪು ಎನ್ನುವುದಿಲ್ಲ. ನಮ್ಮ ಪಾಲಿನ ಅತಿಸಣ್ಣ ತಪ್ಪು ಬೇರೊಬ್ಬರ ಪಾಲಿಗೆ ದೊಡ್ಡ ಆಘಾತ ತರಲಿದೆ. ತಪ್ಪುಗಳಿಗೆ ಪಶ್ಚಾತ್ತಾ‍ಪ ಪರಿಹಾರವಲ್ಲ. ಪ್ರಾಯಶ್ಚಿತ್ತ ಎಂಬುದು ಅನಿವಾರ್ಯ. ಈ ಅಂಶ ಆಧರಿಸಿಯೇ ಚಿತ್ರಕಥೆ ಹೆಣೆಯಲಾಗಿದೆ’ ಎಂದರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಚಿತ್ರಕ್ಕೆ ಪ್ರಸನ್ನ ಅವರೇ ಸಂಗೀತ ಸಂಯೋಜಿಸಿದ್ದಾರೆ. ಯಶಸ್‌ ಸೂರ್ಯ ಚಿತ್ರದ ನಾಯಕ. ಅವರು ‘ಕುರುಕ್ಷೇತ್ರ’ ಚಿತ್ರದಲ್ಲಿ ಪಾಲ್ಗೊಂಡಿದ್ದರಿಂದ ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು. ವಿಶ್ವಜಿತ್ ರಾವ್ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಪ್ರಸನ್ನ ಮತ್ತು ಬಿ. ಶ್ರೀನಿವಾಸರಾವ್ ಬಂಡವಾಳ ಹೂಡಿದ್ದಾರೆ. ದೀಪಿಕಾ, ಬಿ.ಎಂ. ಗಿರಿರಾಜ್‌, ನಾಗೇಶ್‌ ಕಾರ್ತಿಕ್ ತಾರಾಬಳಗದಲ್ಲಿದ್ದಾರೆ.

No Comments

Leave A Comment