Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಬೆಂಗಳೂರು: ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ, ಮತ್ತೊಬ್ಬರ ತಟ್ಟೆಯಲ್ಲಿ ನೊಣ ತೋರಿಸಲು ಹೊರಟಿದ್ದಾರೆ ಬಿಜೆಪಿಯವರು: ಸಿದ್ದರಾಮಯ್ಯ

ಬೆಂಗಳೂರು : ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಬಿಜೆಪಿಯವರು ಮತ್ತೊಬ್ಬರ ತಟ್ಟೆಯಲ್ಲಿ ನೊಣ ತೋರಿಸಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.

ಸಚಿವ ಜಾರ್ಜ್ ರಾಜೀನಾಮೆಗೆ ಬಿಜೆಪಿಯವರು ಒತ್ತಾಯಿಸುತ್ತಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಯವರು ಈ ರೀತಿ ಪ್ರತಿಕ್ರಿಯಿಸಿದರು. ನೈತಿಕತೆ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಅವರು ಮೊದಲು ರಾಜಿನಾಮೆ ಕೊಡಬೇಕು ಎಂದು ಮುಖ್ಯಮಂತ್ರಿಯವರು ಹೇಳಿದರು.

ವಂಚನೆ, ಪೋರ್ಜರಿ, ಡಿನೋಟಿಫಿಕೇಷನ್ ಅವ್ಯವಹಾರ ಸೇರಿದಂತೆ ಯಡಿಯೂರಪ್ಪ ಅವರ ಮೇಲೆ ಹಲವಾರು ಕೇಸುಗಳಿವೆ. ಇದನ್ನು ನಾನು ಸೃಷ್ಟಿ ಮಾಡಿಕೊಂಡು ಹೇಳುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಯಡಿಯೂರಪ್ಪ ಅವರು ತಮ್ಮ ಮೇಲಿನ ಕೇಸುಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

ಜಾರ್ಜ್ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಷ್ಟೊಂದು ಕೇಸುಗಳಿರುವಾಗ ಯಡಿಯೂರಪ್ಪ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅರ್ಹರೇ ? ಅದೂ ಅಲ್ಲದೇ ಅವರು ಮುಖ್ಯಮಂತ್ರಿ ಅಭ್ಯರ್ಥಿ ಬೇರೆ ಎಂದು ಹೇಳಿದರು.

ಎಫ್‍ಐಆರ್ ದಾಖಲಾಗಿದೆ ಎಂದಾಕ್ಷಣ ಆರೋಪ ಸಾಬೀತಾಗಿದೆ ಎಂದು ಅರ್ಥವಲ್ಲ. ಯಾರೇ ದೂರು ನೀಡಿದರೂ ಮೊದಲು ಎಫ್‍ಐಆರ್ ದಾಖಲಾಗುವುದು ಸಹಜ. ಅಷ್ಟಕ್ಕೇ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯ ಮಾಡುವುದು ಸರಿಯಲ್ಲ.

ಈ ಹಿಂದೆ ಜಾರ್ಜ್ ಅವರು ನಾನು ಬೇಡವೆಂದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು.  ಅವರು ಮತ್ತೆ ಏಕೆ ರಾಜೀನಾಮೆ ಕೊಡಬೇಕು. ಅದರೂ ಅದೇ ದೂರಿನ ಆಧಾರದ ಮೇಲೆ ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದರು.

ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರ ಅಥವಾ ಜಾರ್ಜ್ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಹೇಳಿದರು.

ಕಾನೂನು ಪರ ಇದ್ದೇನೆ : ನಾನು ಸಹ ಜಾರ್ಜ್ ರಕ್ಷಣೆಗೆ ನಿಂತಿಲ್ಲ. ಆದರೆ ಕಾನೂನು ಪರ ಇದ್ದೇನೆ. ಸಿಬಿಐಗೆ ತನಿಖೆಗೆ ತೊಂದರೆಯಾಗುತ್ತದೆ. ಹೀಗಾಗಿ ಜಾರ್ಜ್ ಅವರು ರಾಜೀನಾಮೆ ನೀಡಬೇಕು ಎಂಬುದು ತಪ್ಪು. ಸಿಬಿಐ ಕೇಂದ್ರ ಸರ್ಕಾರದ ಅಧಿನದಲ್ಲಿರುವ ಸಂಸ್ಥೆ. ಹೀಗಿರುವಾಗ ತೊಂದರೆಯಾಗಲು ಹೇಗೆ ಸಾಧ್ಯ ? ಎಂದು ಮುಖ್ಯಮಂತ್ರಿಯವರು ಕೇಳಿದರು.

ಜಾರ್ಜ್ ಮುಖ್ಯಮಂತ್ರಿಯವರ ಶಿಷ್ಯ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಯಡಿಯೂರಪ್ಪ ಅವರಿಗೆ ಬುದ್ಧಿ ಇಲ್ಲ. ಏನು ಮಾತನಾಡುತ್ತೇನೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ. ಕಾನೂನು ಅಂಶಗಳು ತಿಳಿದಿಲ್ಲ. ಅವರು ಭಾವನಾತ್ಮಕವಾಗಿ ಮಾತನಾಡುತ್ತಾರೆ ಎಂದು ತಿಳಿಸಿದರು.

No Comments

Leave A Comment