Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಬಿಎಸ್ ವೈರಿಂದ ಹಾದಿ ತಪ್ಪಿಸುವ ಯತ್ನ, ಕಲ್ಲಿದ್ದಲು ಪ್ರಕರಣ ಸಂಬಂಧ ಯಾವುದೇ ತನಿಖೆಗೂ ಸಿದ್ಧ: ಡಿಕೆ ಶಿವಕುಮಾರ್

ಬೆಂಗಳೂರು: ಕಲ್ಲಿದ್ದಲು ಹಗರಣದ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ ರಾಜ್ಯ ಇಂಧನ ಸಚಿವ ಡಿಕೆಶಿವಕುಮಾರ್ ಅವರು, ಬಿಎಸ್ ವೈ ಹಿಟ್ ಅಂಡ್ ರನ್  ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ದೆಹಲಿಯಲ್ಲಿ ಮಾತನಾಡಿದ ಡಿಕೆಶಿವಕುಮಾರ್ ಅವರು, “ಕಲ್ಲಿದ್ದಲು ಪ್ರಕರಣದಲ್ಲಿನ ಆರೋಪಗಳ ಸಂಬಂಧ ಯಾವುದೇ ತನಿಖೆಗೂ ನಾವು ಸಿದ್ಧ. ಯಡಿಯೂರಪ್ಪ ಅವರು ಆರೋಪಿಸಿದಂತೆ ಯಾವುದೇ ರೀತಿಯ ಹಗರಣ ನಡೆದಿಲ್ಲ.  ಕಲ್ಲಿದ್ದಲು ಹಗರಣ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಆರೋಪದ ಬಗ್ಗೆ ಯಾವುದೇ ಮಾಧ್ಯಮದಲ್ಲೂ ಬಹಿರಂಗ ಚರ್ಚೆ ನಡೆಸಲು ತಾವು ಸಿದ್ಧ. ರಾಜ್ಯದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟ ತಪ್ಪಿಸಲು ನಾವು ಈ ಕ್ರಮ  ತೆಗೆದುಕೊಂಡಿದ್ದು, ರಾಜ್ಯದಲ್ಲಿ ನಮ್ಮದೇ ಕೋಲ್ ಬ್ಲಾಕ್ ಇಲ್ಲದೇ ಇರುವುದರಿಂದ ನಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ನಮ್ಮದೇ ಕೋಲ್ ಬ್ಲಾಕ್ ರಚಿಸಿ ನಷ್ಟವನ್ನು ತಪ್ಪಿಸಿದ್ದೇವೆ ಎಂದು  ತಿರುಗೇಟು ನೀಡಿದರು.

ಅಂತೆಯೇ “ಯಡಿಯೂರಪ್ಪ, ಈ ರೀತಿಯ ಆಧಾರರಹಿತ ಆರೋಪ ಮಾಡಿರುವುದು ಸರಿಯಲ್ಲ. ರಾಜ್ಯದ ಜನರ ಒಳಿತಿಗಾಗಿ ಕಲ್ಲಿದ್ದಲು ಬ್ಲಾಕ್‌ ಪಡೆಯಲೆಂದೇ ಸರ್ಕಾರವು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಣ ಪಾವತಿಸಿದ್ದು,  ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಪ್ರತ್ಯೇಕ ಬ್ಲಾಕ್‌ ದೊರೆಯದ್ದರಿಂದ ಸರ್ಕಾರ ಕೇಂದ್ರದಿಂದ ಕಲ್ಲಿದ್ದಲು ಖರೀದಿಸುತ್ತಿದ್ದು, ಇದಕ್ಕಾಗಿ ಪ್ರತಿವರ್ಷ ಹೆಚ್ಚುವರಿಯಾಗಿ ರು. 500 ಕೋಟಿ ಪಾವತಿಸಲಾಗುತ್ತಿದೆ. ಆದರೆ, ರಾಜ್ಯದ  ಬೊಕ್ಕಸ ಲೂಟಿ ಮಾಡಲಾಗಿದೆ. ಹಗಲು ದರೋಡೆ ನಡೆದಿದೆ ಎಂದು ಯಡಿಯೂರಪ್ಪ ಹೇಳಿದ್ದರಲ್ಲಿ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಅಲ್ಲದೆ ದಂಡ ಪಾವತಿಸಿದ್ದಲ್ಲಿ ಮಾತ್ರ ಕಲ್ಲಿದ್ದಲು ಬ್ಲಾಕ್‌ ಗಾಗಿನ ಒಪ್ಪಂದದ ಅರ್ಜಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ. ದಂಡ ಪಾವತಿಸಬೇಕಿದ್ದ ಖಾಸಗಿ ಸಂಸ್ಥೆ ಹಣ ನೀಡದಿದ್ದಾಗ ಸರ್ಕಾರ  ಅನಿವಾರ್ಯವಾಗಿ ಪಾವತಿಸಿದೆ ಎಂದು ಅವರು ಸ್ಪಷ್ಟನೆ ನೀಡಿದರು.

ಬಿಎಸ್ ವೈ ಆರೋಪ ನೂರಕ್ಕೆ ನೂರು ಸುಳ್ಳು, ಸುಳ್ಳು ಆರೋಪಗಳ ಮೂಲಕ ಬಿಜೆಪಿ ವಿಶ್ವಾಸ ಕಳೆದುಕೊಳ್ಳುತ್ತಿದೆ: ಗುಂಡೂರಾವ್

ಇನ್ನು ಇದೇ ಪ್ರಕರಣ ಸಂಬಂಧ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಬಿಎಸ್ ವೈ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ಇಂತಹ  ಸುಳ್ಳು ಆರೋಪಗಳ ಮೂಲಕ ಬಿಎಸ್ ವೈ ತಮ್ಮ ಗೌರವವನ್ನು ತಾವೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ ಎಂದು  ತಿರುಗೇಟು ನೀಡಿದರು.

“ಪ್ರಕರಣ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಬಾಕಿ ಇರುವಾಗ ಯಡಿಯೂರಪ್ಪ ಅವರು ಈ ಬಗ್ಗೆ ಕೋರ್ಟ್‌ ಹೊರಗೆ ಚರ್ಚೆ ನಡೆಸುವ ಮೂಲಕ ನ್ಯಾಯಾಂಗದ ಮೇಲೆ ಒತ್ತಡ ಹಾಕುತ್ತಿದ್ದಾರೆ. ವಿಭಾಗೀಯ ಪೀಠದ ಇಬ್ಬರು  ನ್ಯಾಯಮೂರ್ತಿಗಳು ಭಿನ್ನ ನಿಲುವು ವ್ಯಕ್ತಪಡಿಸಿರುವುದರಿಂದ ಇದನ್ನು ಮೂರನೇ ನ್ಯಾಯಮೂರ್ತಿಯೊಬ್ಬರಿಗೆ ವರ್ಗ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಸಾರ್ವಜನಿಕವಾಗಿ ಮಾತನಾಡುವ ಮೂಲಕ ವಿಶ್ವಾಸ  ಕಳೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ದಂಡದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಿದೆಯೇ ಹೊರತು ಯಾವುದೇ ಖಾಸಗಿ ಕಂಪೆನಿಗೆ ನೀಡಿಲ್ಲ. ಹೀಗಿರುವಾಗ ಜನರ ಹಣ ದುರ್ಬಳಕೆ ಹೇಗಾಗುತ್ತದೆ ಎಂದು ಗುಂಡೂರಾವ್  ಪ್ರಶ್ನಿಸಿದರು.

ಇನ್ನು ನಿನ್ನೆ ಸುದ್ದಿಗೋಷ್ಠಇ ಕರೆದಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಲಿದ್ದಲು ಹಗರಣದಲ್ಲಿ ನೇರವಾಗಿ ಶಾಮೀಲಾಗಿದ್ದು, ಸುಮಾರು 418 ಕೋಟಿ ರೂಪಾಯಿ ಹಗಲು ದರೋಡೆ  ನಡೆಸಿದ್ದಾರೆ ಎಂದು ಆರೋಪಿಸಿದ್ದರು.

No Comments

Leave A Comment