Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಕೋಲಾರ: ಸ್ವರ್ಣ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳ ಸಂಖ್ಯೆ ಕಡಿಮೆ: ಕ್ರಮ ಖಂಡಿಸಿ ಜಿಲ್ಲೆಯ ಮಾರಿಕುಪ್ಪಂ ರೈಲು ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ

ಕೋಲಾರ: ಸ್ವರ್ಣ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳ ಸಂಖ್ಯೆ ಕಡಿಮೆ ಮಾಡಿದ ಕ್ರಮ ಖಂಡಿಸಿ ಜಿಲ್ಲೆಯ ಮಾರಿಕುಪ್ಪಂ ರೈಲು ನಿಲ್ದಾಣದಲ್ಲಿ ಗುರುವಾರ ರೈಲು ತಡೆದು ಪ್ರತಿಭಟನೆ ಮಾಡುತ್ತಿದ್ದ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಸಂಘಟನೆಗಳ ಸದಸ್ಯರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಸ್ವರ್ಣ ಎಕ್ಸ್‌ಪ್ರೆಸ್‌ ರೈಲು ಪ್ರತಿನಿತ್ಯ ಬಂಗಾರಪೇಟೆ ತಾಲ್ಲೂಕಿನ ಮಾರಿಕುಪ್ಪಂ–ಬೆಂಗಳೂರು ನಡುವೆ ಸಂಚರಿಸುತ್ತದೆ. ಈ ರೈಲಿನಲ್ಲಿ 18 ಬೋಗಿಗಳಿದ್ದವು. ಆದರೆ, ಗುರುವಾರದಿಂದ ಅನ್ವಯವಾಗುವಂತೆ ಬೋಗಿಗಳ ಸಂಖ್ಯೆಯನ್ನು 12ಕ್ಕೆ ಇಳಿಸಲಾಗಿದೆ.

ಇದನ್ನು ಖಂಡಿಸಿ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರು, ದಲಿತಪರ ಸಂಘಟನೆಗಳ ಸದಸ್ಯರು ಹಾಗೂ ಪ್ರಯಾಣಿಕರು ಬೆಳಿಗ್ಗೆ ಮಾರಿಕುಪ್ಪಂ ನಿಲ್ದಾಣದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಸ್ವರ್ಣ ಎಕ್ಸ್‌ಪ್ರೆಸ್‌ ರೈಲನ್ನು ತಡೆದಿದ್ದಾರೆ. ಕೆಲ ಪ್ರಯಾಣಿಕರು ಹಳಿ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ರೈಲಿನ ಮೇಲೆ ಕಲ್ಲು ತೂರಿದ್ದಾರೆ.

ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದಾಗ ಪರಸ್ಪರರ ಮಧ್ಯೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪೊಲೀಸರು ಈ ಹಂತದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳು ಹಾಗೂ ಡಿವೈಎಫ್‌ಐ ಸಂಘಟನೆ ಸದಸ್ಯ ತಂಗರಾಜ್‌ ಗಾಯಗೊಂಡಿದ್ದಾರೆ.

ಚಾಂಪಿಯನ್‌ ರೀಫ್‌ ಮತ್ತು ಉರಿಗಾಂವ್‌ ನಿಲ್ದಾಣದಲ್ಲೂ ಪ್ರಯಾಣಿಕರು ರೈಲು ತಡೆದು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಯಿಂದಾಗಿ ರೈಲು ಸಂಚಾರ ವಿಳಂಬವಾಗಿದೆ.

No Comments

Leave A Comment