Log In
BREAKING NEWS >
ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಇದೆಂಥಾ ಹಿಂಸೆ? ಪಂಚಕುಲ ಹಿಂಸಾಚಾರದಿಂದ ಸತ್ತವರ ಸಂಖ್ಯೆ 37ಕ್ಕೇರಿಕೆ

ಚಂಡೀಗಢ/ನವದೆಹಲಿ: ಡೇರಾ ಸಚ್ಚಾ ಸೌದಾದ ಮುಖ್ಯಸ್ಥ, ಸ್ವಘೋಷಿತ ದೇವಮಾನವ ಗುರ್ಮೀತ್‌ ರಾಂ ರಹೀಂ ಸಿಂಗ್‌ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾಗಿದ್ದು, ನಂತರ ನಡೆದ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 37ಕ್ಕೇರಿದೆ.

ಇಡೀ ಪ್ರಕರಣವನ್ನು ನಿಭಾಯಿಸಿದ ರೀತಿಗಾಗಿ ಹರ್ಯಾಣದ ಬಿಜೆಪಿ ಸರ್ಕಾರ ಪ್ರತಿಪಕ್ಷಗಳಿಂದಷ್ಟೇ ಅಲ್ಲ, ಕೋರ್ಟ್‌ಗಳ ಕಡೆಗಳಿಂದಲೂ ತೀವ್ರ ಆಕ್ರೋಶಕ್ಕೆ ತುತ್ತಾಯಿತು. ಪ್ರತಿಪಕ್ಷಗಳು ಖಟ್ಟರ್‌ ರಾಜೀನಾಮೆಗೆ ಆಗ್ರಹಿಸಿದರೆ, ಬಿಜೆಪಿ ಅವರ ಪರವಾಗಿ ನಿಂತಿತು.

ಶುಕ್ರವಾರ ಹರ್ಯಾಣದ ಪಂಚಕುಲದಲ್ಲಿನ ಸಿಬಿಐ ಕೋರ್ಟ್‌ ರಾಂ ರಹೀಂ ಸಿಂಗ್‌ ದೋಷಿ ಎಂದು ತೀರ್ಪು ನೀಡಿತು. ಆಶ್ರಮದ ಇಬ್ಬರು ಸಾಧ್ವಿಯರು ನೀಡಿದ್ದ ದೂರಿನ ಅನ್ವಯ, 15 ವರ್ಷಗಳ ಸುದೀರ್ಘ‌ ವಿಚಾರಣೆ ನಡೆದು ಕಡೆಗೆ ತೀರ್ಪು ಪ್ರಕಟಿಸಿತು.

ಅತ್ತ ತೀರ್ಪು ಹೊರಬೀಳುತ್ತಲೇ, ಹರ್ಯಾಣ, ಪಂಜಾಬ್‌ ಮತ್ತು ದೆಹಲಿಯ ಕೆಲ ಭಾಗ ಅಕ್ಷರಶಃ ಹೊತ್ತಿ ಉರಿಯಿತು. ಹಿಂಸಾಚಾರಕ್ಕೆ ಶುಕ್ರವಾರವೇ 31 ಮಂದಿ ಸಾವನ್ನಪ್ಪಿದರೆ, ಶನಿವಾರ ಈ ಸಂಖ್ಯೆ 37ಕ್ಕೆ ಏರಿಕೆಯಾಯಿತು. ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಮೃತರ ಸಂಖ್ಯೆ ಇನ್ನಷ್ಟು ಏರುವ ಸಂಭವವಿದೆ.

ಕೆಂಡವಾದ ಹೈಕೋರ್ಟ್‌
ಶುಕ್ರವಾರವೇ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಹೈಕೋರ್ಟ್‌, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟಕ್ಕೆ ಪರಿಹಾರವಾಗಿ ದೇರಾ ಸಚ್ಚಾ ಸೌದಾದ ಆಸ್ತಿ ಜಪ್ತಿಗೆ ಆದೇಶಿಸಿತ್ತು. ಶನಿವಾರ ಬೆಳಗ್ಗೆ ಗಲಭೆ ಸಂಬಂಧ ವಿಚಾರಣೆ ಶುರು ಮಾಡಿದ ಪಂಜಾಬ್‌-ಹರ್ಯಾಣ ಹೈಕೋರ್ಟ್‌ನ ವಿಶೇಷ ಪೀಠ, ಮನೋಹರ್‌ ಲಾಲ್‌ ಖಟ್ಟರ್‌ ಅವರ ಸರ್ಕಾರವನ್ನು ಅಕ್ಷರಶಃ ತರಾಟೆಗೆ ತೆಗೆದುಕೊಂಡಿತು. ಶುಕ್ರವಾರ ನೀವು ಸಂರ್ಪೂಣವಾಗಿ ಡೇರಾ ಬೆಂಬಲಿಗರಿಗೆ ಶರಣಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿತು. 144 ಸೆಕ್ಷನ್‌ ಜಾರಿಯಲ್ಲಿದ್ದೂ ಅಷ್ಟೊಂದು ಮಂದಿಯನ್ನು ಏಕೆ ಸೇರಲು ಬಿಟ್ಟಿರಿ ಎಂದು ಪ್ರಶ್ನಿಸಿತು. ಪ್ರಮುಖವಾಗಿ ಖಟ್ಟರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಈ ಪೀಠ, ಗುರ್ಮೀತ್‌ ರಾಂ ರಹೀಂ ಸಿಂಗ್‌ ಬೆಂಬಲಿಗರ ಮುಂದೆ ತಲೆ ಬಾಗಿದ್ದೀರಿ. ರಾಜಕೀಯ ಲಾಭಕ್ಕಾಗಿ ರಣರಂಗವೇ ಸೃಷ್ಟಿಯಾಗಲು ಅವಕಾಶ ಕೊಟ್ಟಿರಿ ಎಂದು ಬೈದಿತು.

ಕೇಂದ್ರಕ್ಕೂ ತರಾಟೆ
ಗಲಭೆ ನಿಯಂತ್ರಣ ಬಗ್ಗೆ ಕೇಂದ್ರ ಸರ್ಕಾರದ ಪಾತ್ರವನ್ನೂ ಕೋರ್ಟ್‌ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಕೇಂದ್ರದ ವಕೀಲರು, ಕಾನೂನು ಸುವ್ಯವಸ್ಥೆ ರಾಜ್ಯಗಳ ಜವಾಬ್ದಾರಿ ಎಂದರು. ಇದಕ್ಕೆ ಇನ್ನೂ ಸಿಟ್ಟಾದ ಹೈಕೋರ್ಟ್‌, ಹರ್ಯಾಣ ಭಾರತದಲ್ಲಿಲ್ಲವೇ? ಅವರು ಇಡೀ ದೇಶಕ್ಕೆ ಸೇರಿದ ಪ್ರಧಾನಿಯಲ್ಲವೇ? ಅಥವಾ ಬಿಜೆಪಿಗೆ ಮಾತ್ರ ಸೀಮಿತವಾಗಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿತು.
ಈ ಮಧ್ಯೆ, ದೆಹಲಿಯಲ್ಲಿ ತುರ್ತು ಸಭೆ ನಡೆಸಿದ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌, ಎರಡೂ ರಾಜ್ಯಗಳ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ ಖಟ್ಟರ್‌ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದರು. ಈ ನಡುವೆ ಅಮಿತ್‌ ಶಾ ಕೂಡ ಖಟ್ಟರ್‌ ರಾಜೀನಾಮೆ ಅಗತ್ಯವಿಲ್ಲ ಎಂದರು. ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು, ಶುಕ್ರವಾರದ ಘಟನೆಯನ್ನು ನಿಭಾಯಿಸಿದ ಬಗ್ಗೆ ತೀವ್ರ ಅಸಮಾಧಾನ ಗೊಂಡಿದ್ದಾರೆ ಎಂದು ಹೇಳಲಾಗಿದೆ.

ಸಿರ್ಸಾದಲ್ಲಿ ಭಾರಿ ಕಟ್ಟೆಚ್ಚರ
ರಾಂ ರಹೀಂ ಸಿಂಗ್‌ ಆಶ್ರಮವಿರುವ ಸಿರ್ಸಾದಲ್ಲಿ ಭಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಆಶ್ರಮದಲ್ಲಿ ಇನ್ನೂ ಸಾವಿರಾರು ಭಕ್ತರು ಇದ್ದಾರೆ ಎಂದು ಹೇಳಲಾಗುತ್ತಿದ್ದು, ಸೇನೆ ಆಶ್ರಮದ ಮುಂದೆ ಬೀಡು ಬಿಟ್ಟಿದೆ. ಸೇನೆಯ ಆದೇಶದ ಮೇರೆಗೆ ನಿಧಾನವಾಗಿ ಭಕ್ತವೃಂದ ಕರಗುತ್ತಿದೆ.

ರೋಹrಕ್‌ನಲ್ಲಿ ತೀರ್ಪು
ಇನ್ನು ರಾಂ ರಹೀಂ ಸಿಂಗ್‌ ಅವರನ್ನು ರೋಹrಕ್‌ ಜೈಲಿಗೆ ಸ್ಥಳಾಂತರ ಮಾಡಲಾಗಿದ್ದು, ಅಲ್ಲಿ ಯಾವುದೇ ಅವಘಡಗಳು ನಡೆಯದಂತೆ 10 ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ. ಸೋಮವಾರ ಜೈಲಿನ ಕೊಠಡಿಯೊಂದರಲ್ಲೇ ಕೋರ್ಟ್‌ನ ವ್ಯವಸ್ಥೆ ಮಾಡಲಾಗಿದ್ದು, ಇಲ್ಲೇ ಸಿಬಿಐ ನ್ಯಾಯಾಧೀಶ ಜಗದೀಪ್‌ ಸಿಂಗ್‌ ಅವರನ್ನು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗಲಾಗಿದೆ. ಹೈಕೋರ್ಟ್‌ನ ಸೂಚನೆ ಮೇರೆಗೆ ಪಂಚಕುಲದಿಂದ ರೋಹrಕ್‌ಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲದೆ ರೋಹrಕ್‌ ಜಿಲ್ಲೆಯಾದ್ಯಂತ ಸೇನೆ ಮತ್ತು ಅರೆಸೇನಾ ಪಡೆಗಳು ಭದ್ರತೆಯ ಹೊಣೆ ಹೊತ್ತಿವೆ.

ಅಧಿಕಾರಿ, ವಕೀಲರ ಸಸ್ಪೆಂಡ್‌
ಪಂಚಕುಲದ ಡಿಸಿಪಿ ಮತ್ತು ಹರ್ಯಾಣ ಸರ್ಕಾರದ ಉಪ ಅಡ್ವೋಕೇಟ್‌ ಜನರಲ್‌ ವಿರುದ್ಧ ಹರ್ಯಾಣ ಸರ್ಕಾರ ಕ್ರಮ ತೆಗೆದುಕೊಂಡಿದೆ. ಕರ್ತವ್ಯ ಲೋಪದ ಮೇಲೆ ಡಿಸಿಪಿಯನ್ನು ಸಸ್ಪೆಂಡ್‌ ಮಾಡಿದ್ದರೆ, ರಾಮ್‌ ರಹೀಂ ಸಿಂಗ್‌ ಅವರ ಬ್ಯಾಗ್‌ ಹಿಡಿದಿದ್ದ ವಕೀಲರನ್ನು ಕೆಲಸದಿಂದಲೇ ವಜಾ ಮಾಡಿದೆ.

ಭಾರಿ ಶಸ್ತ್ರಾಸ್ತ್ರ ಪತ್ತೆ
ಪಂಚಕುಲದ ಹಲವೆಡೆ ಸೇನೆ ದಾಳಿ ನಡೆಸಿದ್ದು ಈ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. 524 ಜನರನ್ನು ಬಂಧಿಸಿ ಇವರಿಂದ 79 ರೌಂಡ್ಸ್‌ಗಳಿದ್ದ ಐದು ಪಿಸ್ತೂಲ್‌, 52 ಬುಲೆಟ್‌ಗಳಿದ್ದ 2 ರೈಫ‌ಲ್‌, ಐರನ್‌ ರಾಡ್‌ಗಳು, ಕೋಲುಗಳು, ಹಾಕಿ ಸ್ಟಿಕ್‌ಗಳು, 10 ಪೆಟ್ರೋಲ್‌ ಬಾಂಬ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಇಬ್ಬರು ಡೇರಾ ಬೆಂಬಲಿಗರ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಿಕೊಳ್ಳಲಾಗಿದೆ.

ಮೈಸೂರಲ್ಲೂ ಅಕ್ರಮ
ಮೈಸೂರು: ರಾಮ್‌ ರಹೀಂ ಸಿಂಗ್‌ ಅವರ ಕಾರ್ಯವ್ಯಾಪ್ತಿ ಮೈಸೂರಿಗೂ ವಿಸ್ತರಿಸಿತ್ತು. ಸಿದ್ದಲಿಂಗಪುರದ ಬಳಿ ಕೃಷಿ ಜಮೀನು ಖರೀದಿಸಿ ಇದರಲ್ಲಿ ರಾತ್ರೋರಾತ್ರಿ ಆಶ್ರಮ ಕಟ್ಟಿಕೊಂಡಿದ್ದರು. ರಾಜ್ಯ ಸರ್ಕಾರದ ನೋಟಿಸ್‌ ಹಿನ್ನೆಲೆಯಲ್ಲಿ ಕೃಷಿಕ ಎಂಬ ಆರ್‌ಟಿಸಿ ನೀಡಿ ಜಮೀನು ಖರೀದಿಯನ್ನು ಊರ್ಜಿತ ಮಾಡಿಕೊಂಡಿದ್ದರು. ಅಲ್ಲದೆ ಹಿಂದೆ ಬಂಧನದ ಭೀತಿ ಇದ್ದಾಗ  ಮೈಸೂರಿಗೆ ಬಂದು ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಇದೀಗ ಆಶ್ರಮಕ್ಕೆ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

No Comments

Leave A Comment