Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಹಳಿ ನಿರ್ವಹಣೆ ವೈಫಲ್ಯವೇ ಉತ್ಕಲ್ ಎಕ್ಸ್’ಪ್ರೆಸ್ ರೈಲು ದುರಂತಕ್ಕೆ ಕಾರಣ: ಉನ್ನತ ರೈಲ್ವೇ ಮೂಲಗಳು

ಮುಜಾಫರ್’ನಗರ: ರೈಲು ದುರಂತಗಳನ್ನು ತಡೆಯಲು ಸರ್ಕಾರ ಎಷ್ಟೇ ಕ್ರಮ ಜರುಗಿಸಿದ್ದಾಗಿ ಹೇಳುತ್ತಿದ್ದರೂ ಒಂದಲ್ಲ ಒಂದು ದುರಂತಗಳು ನಡೆಯುತ್ತಲೇ ಇವೆ. ಕಳೆದ ನವೆಂಬರ್ ನಲ್ಲಿಯೂ ಉತ್ತರಪ್ರದೇಶದ ಕಾನ್ಪುರದಲ್ಲಿ ಇಂದೋರ್-ಪಾಟ್ನ ಎಕ್ಸ್ ಪ್ರೆಸ್ ರೈಲು ಹಳಿತಪ್ಪು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಈ ಘಟನೆ ನಡೆದ ಒಂದು ವರ್ಷದ ಒಳಗೇ ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ರೈಲ್ವೇ ದುರಂತ ಸಂಭವಿಸಿದೆ. ಪುರಿ-ಹರಿದ್ವಾರ ಉತ್ಕಲ್ ಎಕ್ಸೆಪ್ರೆಸ್ ರೈಲು ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಖತೌಲಿ ಸಮೀಪ ಹಳಿತಪ್ಪಿದ ಪರಿಣಾಮ 23 ಮಂದಿ ಸಾವನ್ನಪ್ಪಿ, 90ಕ್ಕೂ ಹೆಚ್ಚುಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಶನಿವಾರ ನಡೆದಿದೆ.

ಒಡಿಶಾದ ಪುರಿಯಿಂದ ಉತ್ತರಾಖಂಡದ ಹರಿದ್ವಾರದ ಮಾರ್ಗವಾಗಿ ರೈಲು ಚಲಿಸುತ್ತಿತ್ತು. ಮುಜಾಫರ್ ನಗರದಿಂದ 40 ಕಿ.ಮೀ ದೂರದಲ್ಲಿರುವ ಖತೌಲಿಯಲ್ಲಿ ಸಂಜೆ 5.45ರ ವೇಳೆಗೆ ರೈಲಿನ 14 ಬೋಗಿಗಳು ಹಳಿತಪ್ಪಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ರೈಲು ಹಳಿತಪ್ಪಿ, ಹಳಿಯ ಪಕ್ಕದಲ್ಲಿರುವ ಮನೆಯೊಂದಕ್ಕೆ ಬೋಗಿಗಳು ಡಿಕ್ಕಿ ಹೊಡೆಡಿದ್ದರಿಂದಾಗಿ ಹೆಚ್ಚಿನ ಸಾವು ನೋವುಗಳು ಸಂಭವಿಸಿದೆ.

ಇನ್ನು ದುರ್ಘಟನೆಗೆ ರಿಪೇರಿ ಸಿಬ್ಬಂದಿಯು ರೈಲು ಮಾರ್ಗವನ್ನು ಸಂಪೂರ್ಣ ರಿಪೇರಿ ಮಾಡದೆಯೇ ಅರ್ಧಂಬರ್ಧ ಬಿಟ್ಟು ಹೋಗಿದ್ದೇ ಕಾರಣ ಎಂದು ಉನ್ನತ ರೈಲ್ವೇ ಮೂಲಗಳು ಮಾಹಿತಿ ನೀಡಿವೆ.

ದುರ್ಘಟನೆ ನಡೆದ ಸ್ಥಳದಲ್ಲಿ ರೈಲು ಮಾರ್ಗ ರಿಪೇರಿ ನಡೆದಿತ್ತು. ಚಾಲಕನಿಗೆ ನೀಡಿದ ಸೂಚನೆ ಅನ್ವಯ ರೈಲು ಸಾಗುವ ವೇಳೆಗೆ ಅದು ಮುಗಿದಿರಬೇಕಿತ್ತು. ಆಧರೆ, ರೈಲು ಆಗಮಿಸಿದಾಗ ಇನ್ನೂ ರಿಪೇರಿ ಕಾರ್ಯ ಮುಗಿದಿರಲಿಲ್ಲ. ಹಳಿ ರಿಪೇರಿ ಸಿಬ್ಬಂದಿ ಸ್ಥಳದಲ್ಲಿಯೇ ರಿಪೇರಿ ಸಲಕರಣೆಗಳನ್ನು ಬಿಟ್ಟು ಅರ್ಧಂಬರ್ಧ ಕೆಲಸ ಮಾಡಿ ಹೋಗಿದ್ದರು. ಇದರಿಂದಾಗಿ ರೈಲು ತುಂಡಾದ ಹಳಿ ಮೇಲೇ ಓಡಿತೆಂದು ಹೇಳಲಾಗುತ್ತಿದೆ. ಇದನ್ನು ಗಮನಿಸಿದ ಚಾಲಕ ಹಠಾತ್ತಾಗಿ ರೈಲಿನ ಬ್ರೇಕ್ ಹಾಕಿದ್ದರಿಂದ ರೈಲು ಹಳಿತಪ್ಪಿತು ಎಂದು ಪ್ರಾಥಮಿಕ ತನಿಖಾ ವರದಿಗಳಿಂದ ತಿಳಿದುಬಂದಿದೆ.

ರೈಲು ಗಂಟೆಗೆ 106 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ರಿಪೇರಿ ಕಾರ್ಯ ನಡೆಯುತ್ತಿದ್ದ ವೇಳೆಯಲ್ಲಿ ರೈಲಿನ ವೇಗ 10-15 ಕಿಮೀ ನಷ್ಟಿರಬೇಕು. ರೈಲಿನ ಚಾಲಕನಿಗೆ ರಿಪೇರಿ ಕುರಿತಂತೆ ಮಾಹಿತಿ ನೀಡಬೇಕು. ಇಲ್ಲವೇ ಸೂಕ್ತ ರೀತಿಯ ಎಚ್ಚರಿಕೆಗಳನ್ನು ನೀಡಿರಬೇಕು ಎಂದು ಕೆಲ ಅಧಿಕಾರಿಗಳು ಹೇಳಿದ್ದಾರೆ.

ಈ ಆರೋಪಿಗಳನ್ನು ರೈಲ್ವೇ ಅಧಿಕಾರಿಗಳು ತಿರಸ್ಕರಿಸಿದ್ದು, ಒಂದು ವೇಳೆ ಹಳಿಗಳು ತುಂಡಾಗಿದ್ದೇ ಆದರೆ, ಗಂಟೆಗೆ 106 ಕಿಮೀ ವೇಗದಲ್ಲಿ ರೈಲಿನ ಇನ್ನುಳಿದ 5 ಬೋಗಿಗಳು ಹೇಗೆ ಮುಂದಕ್ಕೆ ಸಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

ಘಟನೆ ಬಳಿಕ ರಕ್ಷಣಾ ಕಾರ್ಯಾಚರಣೆಗೆ ತಲಾ 45 ಸಿಬ್ಬಂದಿಗಳನ್ನೊಳಗೊಂಡ 2 ಎನ್’ಡಿಆರ್’ಎಫ್ ತಂಡಗಳನ್ನು ಕಳುಹಿಸಿಕೊಡಲಾಗಿದ್ದು, ವೈದ್ಯಕೀಯ ಸಲಕರಣೆಗಳು ಆ್ಯಂಬುಲೆನ್ಸ್ ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.

ರಾತ್ರಿಯ ವೇಳೆ ಕಾರ್ಯಾಚರಣೆಗೆ ವಿದ್ಯುತ್ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.

No Comments

Leave A Comment