Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಸಹರಾ ಗ್ರೂಪ್ ನ ಆಂಬಿ ವ್ಯಾಲಿ ಸಿಟಿ ಆಸ್ತಿಯನ್ನು ಹರಾಜಿಗಿಟ್ಟ ಮುಂಬೈ ಹೈಕೋರ್ಟ್

ನವದೆಹಲಿ: ಸುಪ್ರೀಂ ಕೋರ್ಟ್ ನ ಆದೇಶ ಹೊರಬಂದು ಮೂರು ದಿನಗಳ ನಂತರ ಮುಂಬೈ ಹೈಕೋರ್ಟ್ ಇಂದು ಲೊನವಾಲಾದಲ್ಲಿರುವ ಸಹರಾ ಗ್ರೂಪ್ ನ ಪ್ರತಿಷ್ಠಿತ ಆಂಬಿ ವ್ಯಾಲಿ ಸಿಟಿಯನ್ನು ಸಾರ್ವಜನಿಕ ಹರಾಜಿಗಿಟ್ಟಿದೆ.

ಆಂಬಿ ವ್ಯಾಲಿ ಸಿಟಿಗಿರುವ ಅಧಿಕೃತ ಬರಖಾಸ್ತುದಾರರು ಆಸ್ತಿಗೆ 37,392 ಕೋಟಿ ರೂಪಾಯಿ ನಿಗದಿಪಡಿಸಿದ್ದಾರೆ. ಸಹರಾ ಗ್ರೂಪ್ ಈ ಯೋಜನೆಗೆ ಮಾರುಕಟ್ಟೆ ಮೌಲ್ಯ 1 ಲಕ್ಷ ಕೋಟಿ ರೂಪಾಯಿಗೂ ಅಧಿಕವೆಂದು ನಿಗದಿಪಡಿಸಿದೆ.

ಹೂಡಿಕೆದಾರರಿಗೆ ಹಣವನ್ನು ಹಿಂತಿರುಗಿಸಲು 2019ರ ಜುಲೈಯವರೆಗೆ ಕಾಲಾವಕಾಶ ನೀಡಬೇಕೆಂದು ಸಹರಾ ಗ್ರೂಪ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಕಳೆದ ಗುರುವಾರ ತಳ್ಳಿ ಹಾಕಿತ್ತು. ಹರಾಜು ಪ್ರಕ್ರಿಯೆ ನಿಂತರೆ ಅಥವಾ ಮುಂದೂಡಲ್ಪಟ್ಟರೆ ಸಹರಾ ಗ್ರೂಪ್ ಸೆಬಿಗೆ ನೀಡಬೇಕಾಗಿರುವ 1,500 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ನಂಬಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ವಕೀಲರು ಇಂದಿನ ವಿಚಾರಣೆ ವೇಳೆ ಹೇಳಿದ್ದಾರೆ.

ನಿಗದಿತ ಸಮಯದಂತೆ ಹರಾಜು ಪ್ರಕ್ರಿಯೆ ನಡೆಯಲಿದ್ದು, 1500 ಕೋಟಿ ರೂಪಾಯಿಗಳನ್ನು ಸೆಬಿಯ ಸಹರಾ ರಿಫಂಡ್ ಖಾತೆಗೆ ಸೆಪ್ಟೆಂಬರ್ 7ರೊಳಗೆ ಸುಬ್ರತೊ ರಾಯ್ ಕಟ್ಟಿದರೆ ನಂತರ ಸೂಕ್ತ ಆದೇಶವನ್ನು ಜಾರಿ ಮಾಡಬಹುದು ಎಂದು ಹೇಳಿದೆ. ಈ ಮೂಲಕ ಸುಬ್ರತೊ ರಾಯ್ ಮನವಿಯನ್ನು ತಿರಸ್ಕರಿಸಿದೆ.

ಆಂಬಿ ವ್ಯಾಲಿಯ ಹರಾಜು ಪ್ರಕ್ರಿಯೆಗೆ ಇಂದು ನೊಟೀಸ್ ಹೊರಡಿಸಲಾಗಿದ್ದು, ಸುಬ್ರತೊ ರಾಯ್ ಹಣ ಹೊಂದಿಸುವವರೆಗೆ ಕನಿಷ್ಟ ಸೆಪ್ಟೆಂಬರ್ 16ರವರೆಗೆ ಹರಾಜನ್ನು ಮುಂದೂಡಬೇಕೆಂದು ಸಹರಾ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ನ್ಯೂಯಾರ್ಕ್ ನಲ್ಲಿರುವ ಹೋಟೆಲ್ ಗಳನ್ನು ಮಾರಾಟ ಮಾಡಿದ ನಂತರ ಹಣ ಸಹರಾ ಖಾತೆಗೆ ಬರಲಿದ್ದು, ನಂತರ 1,500 ಕೋಟಿ ರೂಪಾಯಿಗಳನ್ನು ಸೆಬಿಯ ಸಹರಾ ರಿಫಂಡ್ ಖಾತೆಗೆ ಸೆಪ್ಟೆಂಬರ್ 7ರೊಳಗೆ ಕೋರ್ಟ್ ಆದೇಶದಂತೆ ಠೇವಣಿಯಿಡುತ್ತೇವೆ ಎಂದು ತಿಳಿಸಿದರು.

ಸಾರ್ವಜನಿಕ ಹರಾಜಿಗಿಡುವುದಾಗಿ ಒಂದು ಬಾರಿ ನೊಟೀಸ್ ನೀಡಿದರೆ ಅದರ ಮಾರುಕಟ್ಟೆ ಮೌಲ್ಯ ಕಡಿಮೆಯಾಗುತ್ತದೆ. ಹೀಗಾಗಿ ಹರಾಜು ನೊಟೀಸ್ ಪ್ರಕ್ರಿಯೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಬೇಕೆಂದು ಮನವಿ ಮಾಡಿದ್ದರು.

ಸಹರಾ ಮಾರಿಷಸ್ ಮೂಲದ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡು ಹಣ ಹೊಂದಿಸುವ ಮಾತುಕತೆಯಲ್ಲಿದೆ. ಆದರೆ ಆ ಉದ್ದೇಶಕ್ಕಾಗಿ ಹರಾಜು ಪ್ರಕ್ರಿಯೆಯನ್ನು ಕೆಲ ಸಮಯದವರೆಗೆ ಮುಂದೂಡಬೇಕಾಗಿದೆ ಎಂದು ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದರು.

ಸೆಬಿ ಪರ ವಕೀಲ ಅರವಿಂದ್ ದಾತಾರ್, ಸಹರಾ ಮುಖ್ಯಸ್ಥರು ಸಲ್ಲಿಸಿದ ಪ್ರಸ್ತಾವನೆಯಲ್ಲಿ ವಿರೋಧಿಸಿದರು. ಪ್ರತಿ ಸಾರಿ ಪ್ರಕ್ರಿಯೆ ಆರಂಭವಾದಾಗ ಅದನ್ನು ವಿಳಂಬ ಮಾಡಲು ಸಹರಾ ಗ್ರೂಪ್ ಏನಾದರೊಂದು ಆಕ್ಷೇಪಣೆ ಹೊತ್ತು ಬರುತ್ತದೆ. ಇದು ಜಾಗತಿಕ ಮಟ್ಟದಲ್ಲಿ ನಡೆಯುವ ಹರಾಜು ಪ್ರಕ್ರಿಯೆಯಾಗಿದ್ದು, ಆಸಕ್ತರು ವಿಶ್ವಾದ್ಯಂತದಿಂದ ಹರಾಜಿನಲ್ಲಿ ಭಾಗವಹಿಸುತ್ತಾರೆ. ಹರಾಜು ಪ್ರಕ್ರಿಯೆಯನ್ನು ಆರಂಭಿಸಲು ಈಗಾಗಲೇ 4.4 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದರು.

ಹೀಗಾಗಿ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು ಸರಿಯಲ್ಲ. ಸೆಬಿಯ ತನಿಖೆ ಪ್ರಕಾರ, ಸಹರಾ ಹೇಳಿರುವ ಮಾರಿಷಸ್ ಮೂಲದ ಕಂಪೆನಿ ಇಲ್ಲ ಎಂದು ತಿಳಿದುಬಂದಿದೆ ಎಂದು ಸೆಬಿ ವಕೀಲ ಅರವಿಂದ್ ದಾತಾರ್ ಹೇಳಿದರು.

No Comments

Leave A Comment